ಬೆಂಗಳೂರು: ಆತ್ಮಶುದ್ಧಿ ಇರುವುದರಿಂದ ನಮಗೆ ಯಾವುದರ ಭಯವೂ ಇಲ್ಲ, ಶ್ರೀರಾಮಚಂದ್ರಾಪುರಮಠವೆಂಬ ಶಂಕರಾಚಾರ್ಯ ಸ್ಥಾಪಿತ ಸಂಸ್ಥೆಯನ್ನು ಯಾರು ಏನು ಮಾಡಲು ಪ್ರಯತ್ನಪಟ್ಟರೂ ಏನೂ ಆಗದು. ಸಮಾಜದ ಪರಿವರ್ತನೆಯಲ್ಲಿ ತೊಡಗಿಕೊಂಡವರು ವಿಷಕಂಠರಾಗಿ ಎಲ್ಲವನ್ನೂ ಎದುರಿಸಲು ಸಿದ್ದರಾಗಿರಬೇಕಾಗುತ್ತದೆ ಎಂದು ಜಗದ್ಗುರು ಶಂಕರಾಚಾರಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಗಿರಿನಗರದ ಶಾಖಾಮಠದಲ್ಲಿ ತಮ್ಮ 25ನೇ ಚಾತುರ್ಮಾಸ್ಯ ವ್ರತ ಸಮಾಪ್ತಿಯ ಸೀಮೋಲ್ಲಂಘನದ ಧರ್ಮ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯ ಶ್ರೀಗಳು, ಚಾತುರ್ಮಾಸ್ಯ ಭಾನ್ಕುಳಿಯ ‘ಗೋಸ್ವರ್ಗ’ದಲ್ಲಿ ನಡೆಯಬೇಕಿತ್ತು, ಆದರೆ ದೈವೇಚ್ಛೆಂತೆ ‘ಗುರುಸ್ವರ್ಗ’ ಗಿರಿನಗರದ ಶ್ರೀರಾಮಶ್ರಮದಲ್ಲಿ ನಡೆದಿದೆ. ಇದು ಪೂರ್ವಾಚಾರ್ಯರು ಬ್ರಹ್ಮೈಕ್ಯರಾದ ಸ್ಥಳ ಇಲ್ಲಿ ಅವರ ಸಮಾಧಿ ಮಂದಿರವಿದೆ. ನಮಗೂ ಗಿರಿನಗರ ಮಠಕ್ಕೂ ಆತ್ಮಸಂಬಂಧವಿದೆ. ನಾವು ಇಲ್ಲಿಯೇ ಸಂನ್ಯಾಸ ಸ್ವೀಕಾರ ಮಾಡಿರುವುದಾಗಿದ್ದು, ಇಲ್ಲಿಯೇ 25 ನೇ ಚಾತುರ್ಮಾಸ್ಯವನ್ನು ಪೂರೈಸಿರುವುದು ಸಂತಸ ತಂದಿದೆ. ಸೇವೆ ಮಾಡಲು ದೇಹಕ್ಕೆ ಬಲ ಬೇಕಾದರೆ, ಮನಸ್ಸಿಗೆ ಭಾವ ಬೇಕು. ಭಾವ – ಬಲಗಳು ಸೇರೆದಾಗ ಮಾತ್ರ ಸೇವೆ ಸಲ್ಲಿಸಲು ಸಾಧ್ಯ. ಇಂದು ಹೆಮ್ಮೆಯ ಕಾರ್ಯಕರ್ತೆ ಶಾರದಾ ಜಯಗೋವಿಂದ ‘ಚಾತುರ್ಮಾಸ್ಯ ಪ್ರಶಸ್ತಿ’ಯನ್ನು ಸ್ವೀಕರಿಸಿರುವುದು ಸಂತಸ ತಂದಿದೆ ಎಂದರು.
ಚಾತುರ್ಮಾಸ್ಯಕ್ಕೆ ವಿಘ್ನ:
ಇತ್ತೀಚಿಗೆ ನಮ್ಮ ಚಾತುರ್ಮಾಸ್ಯ ವ್ರತಕ್ಕೆ ತೊಂದರೆ ನೀಡುವ ಪರಂಪರೆಯೇ ಆರಂಭವಾಗಿದೆ. ನಾವು ಚಾತುರ್ಮಾಸ್ಯ ಮಾಡುವಾಗ ಮಠದ ಶತ್ರುಗಳೂ ಚಾತುರ್ಮಾಸ್ಯ ಮಾಡುತ್ತಾರೆ. ನಾವು ರಾಮ ಸ್ಮರಣೆಯಲ್ಲಿದ್ದರೆ, ಅವರು ನಮ್ಮದೇ ಸ್ಮರಣೆಯಲ್ಲಿ ಇರುತ್ತಾರೆ. ಚಾತುರ್ಮಾಸ್ಯಕ್ಕೆ ಇರುವ ನಮ್ಮ ಬದ್ಧತೆಗಿಂತ, ಚಾತುರ್ಮಾಸ್ಯ ಭಂಗಕ್ಕೆ ಅದಕ್ಕಿಂತ ಹೆಚ್ಚು ಪ್ರಯತ್ನ ನಡೆಯುತ್ತಿದೆ. ಇಷ್ಟೆಲ್ಲಾ ವಿಘ್ನಗಳ ನಡುವೆಯೂ ಚಾತುರ್ಮಾಸ್ಯ ಸುಸಂಪನ್ನವಾಗಿದೆ. ಅದಕ್ಕೆ ದೇವರ ದಯೆ ಮಾತ್ರ ಕಾರಣ.
ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಮಠದಲ್ಲಿ ಯಾವ ಲೋಪವೂ ಇಲ್ಲ. ಆದರೆ ಯಾರು ಇಂತಹ ಮಠಮಾನ್ಯಗಳಿಗೆ ರಕ್ಷಣೆ ಕೊಡಬೇಕೋ ಅವರೇ ಭಕ್ಷಣೆಗೆ ಮುಂದಾಗಿದ್ದಾರೆ. ಚಾತುರ್ಮಾಸ್ಯ ವ್ರತ ಭಂಗಕ್ಕೆ ವ್ಯಯಿಸಿದ ಶಕ್ತಿ – ಹಣ – ಶ್ರಮಗಳನ್ನು ಉತ್ತಮ ಕಾರ್ಯಗಳಿಗೆ ಬಳಸಿದ್ದರೆ ಜಗತ್ತಿಗೆ ಒಳಿತಾಗುತ್ತಿತ್ತು. ಆದರೆ ಲೋಕದ ಕೆಡುಕಿಗೆ , ಶಂಕರಾಚಾರ್ಯರು ಸ್ಥಾಪಿಸಿದ ದಿವ್ಯ ಸಂಸ್ಥೆಯನ್ನು ಒಡೆಯಲು ಬಳಸುತ್ತಿರುವುದು ಖೇದಕರ. ಆದರೂಯಾರ ಬಗ್ಗೆಯೂ ಪ್ರತೀಕಾರ ಭಾವನೆ ನಮಗಿಲ್ಲ, ಈ ಕ್ಷಣಕ್ಕೂ ಮಠದ ವಿರೋಧಿಗಳ ಕೇಡನ್ನು ನಾವು ಬಯಸಿಲ್ಲ ಎಂದು ತಿಳಿಸಿದರು.
ಚಾತುರ್ಮಾಸ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಶಾರದಾ ಜಯಗೋವಿಂದ, ಪೂಜ್ಯ ರಾಘವೇಶ್ವರ ಶ್ರೀಗಳಂತಹ ಗುರುಗಳು ಸಿಕ್ಕಿರುವುದು ಸಮಾಜದ ಪುಣ್ಯ, ಶ್ರೀಗಳ ಕಾರ್ಯಯೋಜನೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶಗಳು ಸಿಕ್ಕಿದ್ದು ನನ್ನ ಪುಣ್ಯದ ಫಲ. ಶ್ರೀಮಠದ ಸಮಾಜಮುಖೀ ಕಾರ್ಯಗಳಲ್ಲಿ ಕಾರ್ಯಕರ್ತರಾದ ನಾವೆಲ್ಲರೂ ಸಹ ಪ್ರಯಾಣಿಕರು, ಗುರುಗಳು ಗುರಿಯತ್ತ ಮಾರ್ಗದರ್ಶನ ಮಾಡುತ್ತಿದ್ದು, ನಾವೆಲ್ಲ ಜೀವನದ ಗುರಿಯತ್ತ ಮುಂದೆ ಸಾಗೋಣ. ಪ್ರಶಸ್ತಿಯನ್ನು ಎಲ್ಲಾ ಕಾರ್ಯಕರ್ತರ ಪರವಾಗಿ ಸ್ವೀಕರಿಸುತ್ತೇನೆ ಎಂದರು.
ಡಾ. ಶಾರದಾ ಜಯಗೋವಿಂದ ಅವರು ಶಿಕ್ಷಣ ತಜ್ಞೆಯಾಗಿ, ಲೇಖಕಿಯಾಗಿ ಗುರುತಿಸಿಕೊಂಡವರು. ಅಷ್ಟೆಲ್ಲಾ ಸಾಧನೆ ಮಾಡಿದವರಾದರೂ ಇಂದಿಗೂ ಮಗುವಿನ ಹೃದಯವನ್ನು ಹೊಂದಿದವರಾಗಿದ್ದಾರೆ. ಶ್ರೀಮಠದ ವಿದ್ಯಾಸಂಸ್ಥೆಗಳಿಗೆ ಅಪಾರವಾದ ಸೇವೆಯನ್ನು ಅವರು ಸಲ್ಲಿಸಿದ್ದಾರೆ ಎಂದು ವಿದ್ಯಾ ವಿಭಾಗದ ಕಾರ್ಯದರ್ಶಿಗಳಾದ ಪ್ರಮೋದ್ ಪಂಡಿತ್ ಅಭಿನಂದನ ನುಡಿಗಳನ್ನು ಹೇಳಿದರು.
ಪ್ರಸ್ತಾವಿಕ ಮಾತನಾಡಿದ ಉದ್ಯಮಿಗಳು ಹಾಗೂ ಚಾತುರ್ಮಾಸ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವಾದಿರಾಜ ಸಾಮಗ, ಕಾರ್ಯಕರ್ತರ ಸಾಂಘಿಕ ಸೇವೆಯಿಂದ ಚಾತುರ್ಮಾಸ್ಯ ನಡೆಯಿತು. ತತ್ವ ಭಾಗವತ ಪ್ರವಚನ, ಕೃಷ್ಣಕಥಾ, ವೇದಪದ, ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಯಥಾಯೋಗ್ಯವಾಗಿ ಚಾತುರ್ಮಾಸ್ಯದಲ್ಲಿ ಸಂಪನ್ನವಾದವು ಎಂದು ತಿಳಿಸಿದರು.
ಡಾ. ಶಾರದಾ ಜಯಗೋವಿಂದ ಅವರಿಗೆ ‘ಚಾತುರ್ಮಾಸ್ಯ ಪ್ರಶಸ್ತಿ’ ಪ್ರದಾನಮಾಡಲಾಯಿತು. ಶ್ರೀಭಾರತೀ ಪ್ರಕಾಶನ ಹೊರತಂದ ‘ತತ್ವ ಭಾಗವತಮ್’ ಪ್ರವಚನ ಮಾಲಿಕೆಯ ಪೆನ್ ಡ್ರೈವನ್ನು ಲೋಕಾರ್ಪಿತವಾಯಿತು. ಶ್ರೀಮಠದ ಶಾಸನತಂತ್ರ ವ್ಯವಸ್ಥೆಯಿಂದ ಇಂದಿನ ಸರ್ವಸೇವೆ ಸಮರ್ಪಣೆಯಾಯಿತು. ಇದಕ್ಕೂ ಮೊದಲು ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾತುರ್ಮಾಸ್ಯ ವ್ರತ ಸಮಾಪ್ತಿ – ಸೀಮೋಲ್ಲಂಘನ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳಾದ ತಿಮ್ಮಪ್ಪಯ್ಯ ಮಡಿಯಾಲ್, ಐ.ಪಿ.ಎಸ್., ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ ಜಿ ಭಟ್, ಕ್ಯಾಂಪ್ಕೊ ಮಾಜಿ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ ಭಟ್, ಗೋಸ್ವರ್ಗದ ಅಧ್ಯಕ್ಷರಾದ ಆರ್ ಎಸ್ ಹೆಗಡೆ, ಹವ್ಯಕ ಮಹಾಮಂಡಲದ ಈಶ್ವರೀ ಬೇರ್ಕಡವು, ಹರಿಪ್ರಸಾದ್ ಪೆರಿಯಪ್ಪು, ಚಾತುರ್ಮಾಸ್ಯ ಸಮಿತಿಯ ರಮೇಶ್ ಕೊರಮಂಗಲ, ವಾದಿರಾಜ ಸಾಮಗ ಸೇರಿದಂತೆ ಪದಾಧಿಕಾರಿಗಳು ಹಾಗೂ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಶಿಷ್ಯಭಕ್ತರು ಫಲಕಾಣಿಕೆ ಸಮರ್ಪಿಸಿ, ಆಶೀರ್ವಾದ ಪಡೆದರು.
ಗಿರಿನಗರ ಶ್ರೀರಾಮಚಂದ್ರಾಪುರಮಠದ ‘ಪುನರ್ವಸು’ ಕಟ್ಟಡದ ನಿರ್ಮಾಣಕ್ಕೆ ನೀಡಲಾಗಿದ್ದ ತಡೆಯನ್ನು ರಾಜ್ಯ ಉಚ್ಚ ನ್ಯಾಯಾಲಯ ತೆರವುಗಳಿಸಿದ್ದು, ಘನ ನ್ಯಾಯಾಲಯ ತನ್ನ ಮಧ್ಯಂತರ ಆದೇಶದ ಮೂಲಕ ಕಟ್ಟ ನಿರ್ಮಾಣವನ್ನು ಮುಂದುವರಿಸುವಂತೆ ಸೂಚಿಸಿದೆ.
ಈ ಸಂಬಂಧ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದ ಕರ್ಣಂ ಪವನ್ ಪ್ರಸಾದ್ ಮತ್ತು ಕಮಿಟಿ ಫಾರ್ ಜುಡಿಶಿಯಲ್ ಆ್ಯಕ್ಟಿವಿಸಂ ಇವರುಗಳು ಪ್ರಸ್ತುತ ಪ್ರಕರಣದಲ್ಲಿ ಪ್ರತಿವಾದಿಗಳಾಗಿ ಮುಂದುವರಿಯುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಅವರುಗಳನ್ನು ಪ್ರಕರಣದಿಂದ ಕೈಬಿಟ್ಟು ಆದೇಶಿಸಿರುತ್ತದೆ. ಹಾಗೆಯೇ ತನ್ನನ್ನು ಪ್ರಕರಣದಲ್ಲಿ ಪ್ರತಿವಾದಿಯಾಗಿ ಸೇರಿಸಬೇಕು ಎಂಬ ವಿಶ್ವಭಾರತೀ ಗೃಹ ನಿರ್ಮಾಣ ಸಂಘದ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿದೆ.
ಬಿಬಿಎಂಪಿ ಆಯುಕ್ತರ ಆದೇಶಕ್ಕೆ ಸಂಪೂರ್ಣ ತಡೆಯಾಜ್ಞೆ ನೀಡಿದ್ದು, ಶ್ರೀಮಠವು ಗಿರಿನಗರದಲ್ಲಿ ಪುನರ್ವಸು ಕಟ್ಟಡದ ಕಾಮಗಾರಿಯನ್ನು ಮುಂದುವರಿಸಲು ಆದೇಶ ನೀಡಿದೆ.
ಸೀಮೋಲ್ಲಂಘನ ಕಾರ್ಯಕ್ರಮ ನಡೆಯಿತ್ತಿರುವ ಸಂದರ್ಭದಲ್ಲೇ, ಈ ಆದೇಶ ಸಿಕ್ಕಿದ್ದು ವಿಶೇಷವಾಗಿದ್ದು, ಮಠದ ಭಕ್ತರಲ್ಲಿ ಸಂತಸವನ್ನು ಉಂಟುಮಾಡಿತು.
Discussion about this post