ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇಡಿಯ ವಿಶ್ವದಲ್ಲೇ ಅಪರೂಪದಲ್ಲಿ ಅಪರೂಪದ ಸನ್ಯಾಸಿಗಳಾಗಿ, ಸಮಾಜವನ್ನು ತಿದ್ದಿತೀಡುವ ಗುರುವಾಗಿ, ಮಧ್ವಮತವನ್ನು ದೇಶದಾದ್ಯಂತ ಪಸರಿಸಿ ಅನನ್ಯವಾಗಿ 80 ವರ್ಷಗಳ ಕಾಲ ಶ್ರೀಕೃಷ್ಣದ ಸೇವೆ ಸಲ್ಲಿಸಿದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಕೋಟ್ಯಂತರ ಭಕ್ತರಿಗೆ ಕಣ್ಣಿಗೆ ಕಾಣುವ ದೇವರಾಗಿದ್ದರು.
ಇಂತಹ ಗುರುಗಳ ವಯೋಸಹಜ ಅಸ್ವಸ್ಥತೆಯಿಂದ ಇತ್ತೀಚೆಗಷ್ಟೇ ಹರಿಪಾದ ಸೇರಿದ್ದು, ಬೆಂಗಳೂರಿನಲ್ಲಿರುವ ವಿದ್ಯಾಪೀಠದಲ್ಲಿ ಅವರ ಬೃಂದಾವನ ಮಾಡಲಾಗಿದೆ. ಪ್ರತಿನಿತ್ಯ ಸಾವಿರಾರು ಮಂದಿ ಸನ್ನಿಧಾನಕ್ಕೆ ಭೇಟಿ ನೀಡಿ ಗುರುಗಳ ದರ್ಶನ ಪಡೆಯುತ್ತಿದ್ದಾರೆ. ಭಕ್ತರ ಪಾಲಿಗೆ ಪ್ರೀತಿ ಕರುಣೆ ತುಂಬಿದ ತಾಯಿಯಾಗಿ, ತಪ್ಪು ತಿದ್ದುವ ತಂದೆಯಾಗಿ, ದಾರಿ ತೋರುವ ಗುರುವಾಗಿದ್ದ ಶ್ರೀಗಳು ಬೃಂದಾವನದೊಳಗಿನಿಂದಲೇ ಎಲ್ಲರನ್ನೂ ಅನುಗ್ರಹಿಸುತ್ತಿದ್ದಾರೆ.
ಇಂತಹ ಗುರುಗಳು ಶಶಿಧರ ರಾವ್ ಎಂಬ ಭಕ್ತರೊಬ್ಬರಿಗೆ ಬೃಂದಾವನದ ಒಳಗಿನಿಂದಲೇ ಅನುಗ್ರಹಿಸಿದ್ದು, ಇದನ್ನು ಅತ್ಯಂತ ಭಕ್ತಿ, ಭಾವಪರವಶರಾಗಿ ತಮ್ಮ ಫೇಸ್’ಬುಕ್’ನಲ್ಲಿ ಹಂಚಿಕೊಂಡಿದ್ದಾರೆ. ಇದರಂತೆ, ಇಲ್ಲಿ ಗುರುಗಳ ಪವಾಡವೇ ನಡೆದಿದೆ. ತಮ್ಮ ಅನುಭವವನ್ನು ಶಶಿಧರ್ ರಾವ್ ಅವರ ಅಕ್ಷರಗಳಲ್ಲೇ ಓದಿ…
ಬೃಂದಾವನದೊಳಗಿನಿಂದಲೇ ಪ್ರೇರಣೆ ಕೊಟ್ಟು ಫಲ ಪ್ರಸಾದ ಕೊಡಿಸಿದ ಪ್ರಾತಃಸ್ಮರಣೀಯ ಶ್ರೀಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು
ನಿನ್ನೆ ರಾತ್ರಿ 9:30 ಸುಮಾರಿಗೆ (ಅಂದರೆ 30 ನೇ ಡಿಸೆಂಬರ್ 2019) ಶ್ರೀ ವಿಶ್ವೇಶತೀರ್ಥರ ವೃಂದಾವನ ದರ್ಶನ ಮಾಡಬೇಕೆಂದೆನಿಸಿತು.
ಯಥಾಪ್ರಕಾರ ಬೆಂಗಳೂರು ಮಹಾನಗರಿಯ ಟ್ರಾಫಿಕ್….. 10:30 ಸುಮಾರಿಗೆ ಶ್ರೀಪೂರ್ಣಪ್ರಜ್ಞ ವಿದ್ಯಾಪೀಠ ತಲುಪಿದೆ.
ನಾನು ಸ್ವಭಾವತಃ ಅತ್ಯಂತ ಭಾವುಕ ವ್ಯಕ್ತಿ. ಆದರೆ ನನ್ನ ಆತ್ಮೀಯರಿಗಷ್ಟೇ ನನ್ನ ಅತ್ಯಂತ ಭಾವುಕ ವ್ಯಕ್ತಿತ್ವದ ಪರಿಚಯವಿದೆ.
ಭಾವನಾತ್ಮಕವಾಗಿ ಎಷ್ಟೇ ಏರಿಳಿತಗಳಿದ್ದರೂ ಅದನ್ನು ಎಲ್ಲಿಯೂ ನೇರವಾಗಿ ತೋರ್ಪಡಿಸಿಕೊಳ್ಳದೆ, ತಾಳ್ಮೆಯಿಂದ ಮಾಡಬೇಕಾದ ಕರ್ತವ್ಯಗಳನ್ನು ಮಾಡುವುದು ಸಾಮಾನ್ಯವಾಗಿ ಒಬ್ಬ ಮ್ಯಾನೇಜ್ಮೆಂಟ್ ವ್ಯಕ್ತಿಗಿರಬೇಕಾದ ಗುಣ.
ಹಾಗಿರುವಾಗ, ಬಹುತೇಕ ಸಂದರ್ಭಗಳಲ್ಲಿ ನನ್ನ ಆತ್ಮೀಯರು ಹೊರತುಪಡಿಸಿದರೆ ಬೇರೆಯವರು ನಾನು ಭಾವುಕನಾದದ್ದನ್ನು ಸಾಮಾನ್ಯವಾಗಿ ಗಮನಿಸುವ ಸಂದರ್ಭ ಕಡಿಮೆ.
ಹೀಗಿರುವಾಗ, ಶ್ರೀ ವಿಶ್ವೇಶ ತೀರ್ಥರ ವೃಂದಾವನದ ಎದುರು ನಿಂತು ಕೈ ಮುಗಿಯುತ್ತಿದ್ದಂತೆ ನನಗರಿವಿಲ್ಲದೆ ಕಣ್ಣಾಲಿಗಳು ತುಂಬಿ ಬಂದವು.
ತಕ್ಷಣ ಮನಸಿಗೆ ಒಂದು ವಿಚಾರ ನೆನಪಿಗೆ ಬಂದಿತು.
ಸ್ವಾಮಿಗಳು ಭೌತಿಕ ಶರೀರದೊಂದಿಗಿದ್ದಾಗ ಮಂತ್ರಾಕ್ಷತೆ -ಫಲ ಕೊಟ್ಟು ಆಶೀರ್ವದಿಸುತ್ತಿದ್ದರು.
ಈಗ ಸ್ವಾಮಿಗಳು ವೃಂದಾವನಸ್ಥರಾದ ಮೇಲೆ ಅವರ ಆಶೀರ್ವಾದದ ರೂಪದಲ್ಲಿ ಏನನ್ನು ಪಡೆದು ಬರುವುದು ಎಂಬ ಚಿಂತೆ ಮನಸಿಗೆ ಬಂದು ಕೆಲ ಕ್ಷಣಗಳಾಗಿತ್ತಷ್ಟೇ.. ಆಗಲೇ ಘಟಿಸಿದ್ದು ವಿಶೇಷ.
ಅತ್ಯಂತ ಆಶ್ಚರ್ಯಕಾರಿಯಾಗಿ ನನ್ನ ಮನಸಿನಲ್ಲಿದ್ದ ಆಲೋಚನೆಯನ್ನು ಸ್ವಾಮಿಗಳು ವೃಂದಾವನದಿಂದಲೇ ಗಮನಿಸಿ ಆಶೀರ್ವದಿಸಿದರೋ ಎಂಬಂತೆ ಸ್ವಾಮಿಗಳ ಶಿಷ್ಯವರ್ಗದ ವಿದ್ಯಾಪೀಠದವರೊಬ್ಬರು ವೃಂದಾವನದ ಸಮೀಪದಲ್ಲೇ ಇರಿಸಿದ್ದ ಹೂವು ಹಾಗೂ ಹಣ್ಣಿನ ಫಲ ಪ್ರಸಾದವನ್ನು ತೆಗೆದು ನನಗೆ ಕೊಟ್ಟರು.
ಅದೂ ರಾತ್ರಿ 10:30 ರ ಸುಮಾರಿಗೆ.. (ಸ್ವಾಮಿಗಳು ಅವರ ಪರವಾಗಿ ಫಲವನ್ನು ಕೊಟ್ಟು ಅವರ ಆಶೀರ್ವಾದ ದೊರೆಯುವಂತೆ ಮಾಡಲು ಪ್ರೇರೇಪಿಸಿದ್ದಾರೆಂಬಂತೆ).
ಆ ಫಲವು ಶ್ರೀ ವಿಶ್ವೇಶ ತೀರ್ಥರ ವೃಂದಾವನಕ್ಕೆ ಕೆಲವೇ ಅಡಿಗಳಷ್ಟು ಸಮೀಪದಲ್ಲಿ ಇರಿಸಲಾಗಿದ್ದ ಅವರ ಚಿತ್ರದ ಮೂಲಕ ಅವರಿಗೆ ಸಮರ್ಪಣೆ ಮಾಡಲಾಗಿದ್ದ ಅವರ ಪ್ರಸಾದ ರೂಪದ ಫಲವೇ.
ಶ್ರೀಗಳು ವೃಂದಾವನಸ್ಥರಾದ ಮೇಲೆ ಅವರ ಮೇಲೆ ಅನೇಕ ಜ್ಞಾನಿಗಳು ಶ್ಲೋಕಗಳನ್ನು ರಚಿಸಿದ್ದಾರೆ, ರಚಿಸುತ್ತಿದ್ದಾರೆ.
ಅನೇಕ ಅಂತಹ ಶ್ಲೋಕಗಳಲ್ಲಿ ಶ್ರೀಗಳನ್ನು ಅಭೀಷ್ಟಪ್ರದರೆಂದು ಕರೆದಿದ್ದಾರೆ. ಅದು ಮೇಲಿನ ಘಟನೆಯಲ್ಲೊಮ್ಮೆ ಮತ್ತೊಮ್ಮೆ ನಿರೂಪಿತವಾಯಿತು.
ಮಹಾತ್ಮರು ಶರೀರದೊಂದಿಗೆ ಇದ್ದಾಗ ಎಷ್ಟು ಶಕ್ತಿ – ಮಹಿಮೆಗಳನ್ನು ಪ್ರಕಟಪಡಿಸುತ್ತಾರೆಯೋ, ಅದಕ್ಕಿಂತಲೂ ಅನೇಕ ಪಟ್ಟು ಹೆಚ್ಚಿನ ಶಕ್ತಿ – ಮಹಿಮೆಗಳು ಅವರು ಶರೀರ ತ್ಯಾಗ ಮಾಡಿದ ಮೇಲೆ ಅವರಿಂದ ಪ್ರಕಟವಾಗುತ್ತದೆ ಎಂಬುದನ್ನು ಅನೇಕ ಜ್ಞಾನಿಗಳು ನಮ್ಮ ನಿಮ್ಮೆಲ್ಲರಿಗೂ ತಿಳಿಸಿ ಕೊಟ್ಟಿದ್ದಾರೆ.
ಏಕೆಂದರೆ, ಶರೀರದೊಂದಿಗಿದ್ದಾಗ ಆ ಶಕ್ತಿಯ ವ್ಯಾಪ್ತಿ ಅದರದ್ದೇ ಆದಂತಹ ರೀತಿಯಲ್ಲಿ ಸೀಮಿತವಾಗಿರುತ್ತವೆ.
ಮಹಾತ್ಮರು ದೇಹತ್ಯಾಗ ಮಾಡಿದ ಮೇಲೆ, ಅವರ ದಿವಾತ್ಮದ ಶಕ್ತಿಗೆ ತಲುಪಬಹುದಾದ ವ್ಯಾಪ್ತಿಯ ಸೀಮೆ ಜಗದ್ವ್ಯಾಪಿಯಾಗಿಬಿಡುತ್ತದೆ.
ನಾಹಂ ಕರ್ತಾ, ಹರಿಃ ಕರ್ತಾ
ಕೃಪೆ: ಶಶಿಧರ್ ರಾವ್
Get in Touch With Us info@kalpa.news Whatsapp: 9481252093
Discussion about this post