ರಾಯ್’ಪುರ: ಅದು ನಕ್ಸಲ್ ಪೀಡಿತ ಪ್ರದೇಶ. ಅಲ್ಲಿರುವುದು ಒಂದೇ ಸೀಟ್ ಹಾಗೂ ಏಳು ಅಭ್ಯರ್ಥಿಗಳು. ಆದರೆ, ಇದಕ್ಕೆ ನಿಯೋಜನೆಗೊಂಡಿರುವುದು ಮಾತ್ರ 80 ಸಾವಿರ ಭದ್ರತಾ ಸಿಬ್ಬಂದಿಗಳು!
ಹೌದು… ಛತ್ತೀಸ್‘ಘಡದ ನಕ್ಸಲ್ ಪೀಡಿತ ಬಸ್ತಾರ್ ಲೋಕಸಭಾ ಕ್ಷೇತ್ರ ಇಂತಹ ಒಂದು ಅತಿಹೆಚ್ಚಿನ ಭದ್ರತಾ ವ್ಯವಸ್ಥೆಗೊಂಡಿರುವ ಪ್ರದೇಶವೆಂದು ಸುದ್ದಿಯಾಗಿದೆ.
ದೇಶದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಲಿದ್ದು, ಇದರಲ್ಲಿ ಬಸ್ತಾರ್ ಕೂಡಾ ಸೇರಿದೆ. ಈ ಭಾಗದಲ್ಲಿ ಮಾವೋ ಉಗ್ರರ ಉಪಟಳ ಹೆಚ್ಚಾಗಿದ್ದು, ಮತದಾನದ ವೇಳೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಗರಿಷ್ಠ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ನಕ್ಸಲರು ಕಳೆದ ಮಂಗಳವಾರ ದಾಂತೇವಾಡದಲ್ಲಿ ಭಾರೀ ಪ್ರಮಾಣದಲ್ಲಿ ಐಇಡಿ ಸ್ಫೋಟಿಸಿದ ಪರಿಣಾಣ ಓರ್ವ ಬಿಜೆಪಿ ಶಾಸಕ ಬಲಿಯಾಗಿ ಹಾಗೂ ಐವರು ಭದ್ರತಾ ಸಿಬ್ಬಂದಿಗಳು ಹುತಾತ್ಮರಾದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಭದ್ರತಾ ವ್ಯವಸ್ಥೆ ಮಾಡುವುದು ಒಂದು ಸವಾಲಿನ ಕೆಲಸವಾಗಿದೆ.
ಮಂಗಳವಾರದ ದಾಳಿಗೂ ಮುನ್ನವೇ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿತ್ತು. ಆದರೆ, ದಾಳಿ ನಡೆದ ನಂತರ ಇದನ್ನು ಹೆಚ್ಚಿಸಲಾಗಿದ್ದು, ಎಲ್ಲ ರೀತಿಯ ಗರಿಷ್ಠ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 13,72,127 ಮತದಾರರಿದ್ದು, 1,879 ಮತಕೇಂದ್ರಗಳಿವೆ. ಇದರಲ್ಲಿ 741 ಮತಕೇಂದ್ರಗಳನ್ನು ಹೈಪರ್ ಸೆನ್ಸಿಟೀವ್ ಹಾಗೂ 606 ಕೇಂದ್ರಗಳನ್ನು ಸೆನ್ಸಿಟೀವ್ ಎಂದು ಗುರುತಿಸಲಾಗಿದೆ.
Discussion about this post