ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇಡೀ ನಮ್ಮ ದೇಶದ ನಾಗರಿಕ ಸಮಾಜ ಒಮ್ಮೆ ತಲೆತಗ್ಗಿಸುವಂತೆ ಮಾಡಿದ್ದ ಅತ್ಯಾಚಾರ ಪ್ರಕರಣಕ್ಕೆ ಶಿಕ್ಷೆಯೆಂಬ ಪೂರ್ಣ ವಿರಾಮ ಸಿಕ್ಕಿತು. ಈ ಪ್ರಕರಣ ಏಳು ವರ್ಷ ನ್ಯಾಯಾಲಯದಲ್ಲಿ ವಾದವಿವಾದಗಳ ಕಾರಣ ಎಳೆದಾಡಲಾಗುತ್ತಿತ್ತು. ನಮ್ಮ ನ್ಯಾಯಾಂಗ ಸ್ಪಷ್ಟವಾಗಿ ಇಂತಹ ಅಪರಾಧಕ್ಕೆ ಇಂತಹ ಶಿಕ್ಷೆ ಎಂದು ಸೂಕ್ತ ಬರೆದು ಇಟ್ಟಿದೆ. ಆದರೆ ಈ ಸತ್ಯ ತಿಳಿದೂ ನಮ್ಮ ಕೆಲವು ನ್ಯಾಯವಾದಿಗಳು ಶಿಕ್ಷೆಯ ತೀವ್ರತೆಯನ್ನು ಕಡಿಮೆಗೊಳಿಸಲು ಹಲವು ಕಾರಣಗಳನ್ನೊಡ್ಡಿ ಸಮಯ ಎಳೆಯುವುದು ಅಚ್ಚರಿಯ ಸಂಗತಿ.
ಇನ್ನೂ ದೊಡ್ಡ ಅಚ್ಚರಿಯೆಂದರೆ ಢಾಳಾಗಿ ಅಪರಾಧ ಅಂತ ಗೊತ್ತಿದ್ದರೂ ನ್ಯಾಯವಾದಿಗಳು ಅಂತಹ ಪ್ರಕರಣಗಳ ಪರ ವಾದಿಸುವ ಅವರ ಮನೋಧರ್ಮ. ನ್ಯಾಯವಾದಿಗಳ ಸಂಘಟನೆ ಈ ಪ್ರಕರಣದ ಪರ ವಕಾಲತ್ತು ವಹಿಸಕೂಡದು ಎಂದು ಸೂಚನೆ ನೀಡಲಾಗಿತ್ತು. ಆದರೂ ಮಹಾಶಯ ಸಿಂಗ್ ಎಂಬ ವಕೀಲರು ದೋಷಿಗಳ ಪರ ವಕಾಲತ್ತು ವಹಿಸಿ ವಾದ ಮಾಡಿದರು. ನಿಜಕ್ಕೂ ಇದು ಇಡೀ ವಕೀಲ ಸಮೂಹ ಇನ್ನು ಮುಂದೆ ಹೇಗೆ ಇಂತಹ ಸನ್ನಿವೇಶದಲ್ಲಿ ಕಠಿಣವಾಗಿ ಆಲೋಚಿಸಬೇಕು ಎಂಬ ಬಗ್ಗೆ ತೀವ್ರ ಗಮನ ನೀಡಿ ವಿವೇಚಿಸಬೇಕಿದೆ.
ಇತ್ತೀಚೆಗೆ ಪಾಕಿಸ್ಥಾನ ಪರ ಜೈಕಾರ ಹಾಕಿದ ವಿದ್ಯಾರ್ಥಿಗಳ ಬಗ್ಗೆ ಸ್ಥಳೀಯ ವಕೀಲರ ಸಂಘಟನೆ ನಿರ್ಬಂಧ ಹೇರಿತ್ತು. ಆದರೂ ಬೆಂಗಳೂರಿನಿಂದ ವಕಾಲತ್ತು ವಹಿಸುವ ಪ್ರಯತ್ನ ನಡೆಯಿತು. ಮಾಧ್ಯಮಗಳು ಈ ಇಬ್ಬಂದಿ ವರ್ತನೆ ಬಗ್ಗೆ ಹುಬ್ಬೇರಿಸಿದ್ದನ್ನು ನಾವು ನೋಡಿದ್ದೇವೆ. ಮಾನವೀಯತೆಯ ಬಗ್ಗೆ ಯಾವಾಗಲೂ ನ್ಯಾಯಾಲಯವೇ ಹೇಳಬೇಕಿಲ್ಲ. ವಕೀಲ ಮೊದಲಿಗೆ ಒಬ್ಬ ನಾಗರಿಕ ಪ್ರಜೆ, ನಂತರ ವಕೀಲ. ಹೀಗೆ ಅಪರಾಧದ ತೀವ್ರತೆಯನ್ನು ತನ್ನ ವಿವೇಚನೆಗೆ ತೆಗೆದುಕೊಳ್ಳಬೇಕು.
ಈ ನೆಲೆಯಲ್ಲಿ ಯುವ ವಕೀಲೆ ಸೀಮಾ ಕುಶ್ವಾಹ ಅವರ ಉತ್ಸಾಹ ಮತ್ತು ತ್ಯಾಗವನ್ನ ಮೆಚ್ಚಲೇಬೇಕು. ಸಾಮಾನ್ಯ ಹೆಣ್ಣಾಗಿ ವಿವೇಚಿಸಿ ನಿರ್ಭಯಾ ಪರ ವಕಾಲತ್ತು ವಹಿಸಿದರು. ಹೆಣ್ಣನ್ನು ಮಾನಭಂಗ ಮಾಡಿ ಅತ್ಯಂತ ಧಾರುಣವಾಗಿ ಹಿಂಸಿಸಿ ನಿರ್ಭಯಾ ಹತ್ಯೆಗೈದ ಅತ್ಯಾಚಾರಿಗಳ ಬಗ್ಗೆ ಕರುಣೆ ಯಾರಿಗಾದರೂ ಹೇಗೆ ಬರುತ್ತದೆ? ಒಂದು ರೂಪಾಯಿಯನ್ನೂ ಶುಲ್ಕವಾಗಿ ಸ್ವೀಕರಿಸದೇ ನಾಗರಿಕವಾದ ಸಹಜ ಪ್ರೀತಿ ಮೆರೆದ ಕು.ಸೀಮಾ ಅವರನ್ನು ಮೆಚ್ಚದೇ ಇರಲು ಹೇಗೆ ಸಾಧ್ಯ?
ನ್ಯಾಯವಾದಿಗಳ ಜಾಡಿನಲ್ಲಿ ಈ ಯುವತಿ ಒಂದು ರೋಲ್ ಮಾಡೆಲ್. ಯುವ ಸಮೂಹ ಯಾವತ್ತೂ ಯಾವುದೇ ಕ್ಷೇತ್ರ ಪ್ರವೇಶಿಸುವ ಮುನ್ನ ಸಮಾಜ ಪ್ರೀತಿ, ಮಾನವ ಸೇವೆ ಇತ್ಯಾದಿ ಆದರ್ಶ ಇರಿಸಿಕೊಂಡಿರುತ್ತಾರೆ. ಆ ನಿಟ್ಟಿನಲ್ಲಿ ಸೀಮಾ ಒಂದು ಉದಾಹರಣೆ.
ನ್ಯಾಯಾಂಗದಲ್ಲಿ ಇನ್ನೂ ಹೆಚ್ಚಿನ ಗೌರವ ಹುಟ್ಟಿ ತಮ್ಮ ವೃತ್ತಿಯ ಬಗ್ಗೆ ಹೆಚ್ವು ಪ್ರೀತಿ, ವಿಶ್ವಾಸ ತಾಳಬಹುದು. ಏಳು ವರ್ಷಗಳ ದೀರ್ಘವಾದ ವಿವಾದ ನಡೆಸಿದ ಆಕೆಯ ಜಾಣ್ಮೆ ಅದಕ್ಕೂ ಮಿಗಿಲಾಗಿ ಆಕೆಯ ತಾಳ್ಮೆಯನ್ನು ನಾವೆಲ್ಲರೂ ಮೆಚ್ಚಲೇಬೇಕು.
ಸಾಮಾನ್ಯವಾಗಿ ಯುವಜನ ಅವಸರವನ್ನೇ ಹೊದ್ದಿರುತ್ತಾರೆ. ತತಕ್ಷಣ ಅವರಿಗೆ ಫಲಿತಾಂಶ ಸಿಗಬೇಕು. ಇದು ಸಾಮಾನ್ಯವಾಗಿ ನಮ್ಮ ಅನುಭವಕ್ಕೆ ಬಂದಿದೆ. ಇಂತಹ ಸನ್ನಿವೇಶವನ್ನು ಯಶಸ್ವಿಯಾಗಿ ದಾಟಿ, ತನ್ನ ಸಹ ಯುವತಿಯ ಅತ್ಯಾಚಾರ, ಕೊಲೆಯ ವಿರುದ್ಧ ಶಿಕ್ಷೆ ನೀಡಿಸಿದ ಸೀಮಾ ನಿಮಗೆ ಹ್ಯಾಟ್ಸಾಫ್!
ನನಗೆ ವಿಚಿತ್ರವಾಗಿ ಕಂಡು ಬಂದ ಸಂಗತಿಯೆಂದರೆ ಅಪರಾಧಿಗಳ ಪರ ವಕಾಲತ್ತು ವಹಿಸಿದ ಎ.ಪಿ. ಸಿಂಗ್ ಎಂಬ ವಕೀಲರು ಈ ಪ್ರಕರಣದಲ್ಲಿ ವಾದಮಾಡಿ ಹತಾಶರಾಗಿ ಕೊಟ್ಟ ಹೇಳಿಕೆ. ಅವರೂ ಒಬ್ಬ ಹೆಣ್ಣು ಮಗುವಿನ ತಂದೆ ಕೂಡ!
ನಾನಾಗಿದ್ದರೆ ಸುಟ್ಟು ಬಿಡುತ್ತಿದ್ದೆ ಎಂಬ ಮಾತು ಹತಾಶ ಹೇಳಿಕೆ ಮತ್ತು ಅಮಾನುಷ ನಡವಳಿಕೆಯನ್ನು ಬೆಂಬಲಿಸುವ ಹೇಯ ಅನಿಸಿಕೆ. ಅವರಿಗೆ ನ್ಯಾಯವಾದಿಗಳ ವೇದಿಕೆ ನಿರ್ಬಂಧ ಹೇರಿದೆ. ಅದನ್ನೂ ಲೆಕ್ಕಿಸಿಲ್ಲ. ಮತ್ತೆ ಅವರೇ ಅಪರಾಧಿಗಳಲ್ಲೊಬ್ಬನ ತಾಯಿಯ ಒತ್ತಾಸೆಗೆ ಈ ಪ್ರಕರಣದ ಪರ ನಿಂತೆ. ಪರವಾಗಿ ನಿಂತಾಗ ಅದರ ಪೂರ್ವಾಪರ ವಿಮರ್ಶಿಸಿ ಆ ತಾಯಿಗೆ ವಿವರಿಸಿದೆ. ಎಲ್ಲವನ್ನೂ ಹೀಗೆ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ. ತಾಯಿ ಎಲ್ಲರಿಗೂ ಒಂದೇ. ಆದರೆ ಎಸಗಿದ ಇಂತಹ ನೀಚ ಕೃತ್ಯವನ್ನು ಯಾವ ತಾಯಿಯೂ ಸಹಿಸುವುದಿಲ್ಲ. ಏಕೆಂದರೆ ಆಕೆಯೂ ಒಂದು ಹೆಣ್ಣು.
ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಯಿತು. ಈ ಪ್ರಕರಣದಲ್ಲಿ ದೋಷಿಗೆ ಮರಣ ದಂಡನೆ ತೀರ್ಪು ಬಂತು. ಆತನ ತಾಯಿ ಅವನು ನನ್ನ ಮಗನೇ ಅಲ್ಲ. ಗಲ್ಲಿಗೇರಿಸಿ ಅಂದದ್ದು ಮಾಧ್ಯಮದಲ್ಲಿ ದೊಡ್ಡದಾಗಿ ಬಂತು. ಇಂತಹ ಪರಿಸ್ಥಿತಿಯಲ್ಲಿ ವಕೀಲ ಸಿಂಗ್ ಅವರಿಗೆ ಮನವರಿಕೆ ಮಾಡಿ ಕೊಡಬೇಕಿತ್ತು. ಏಕೆಂದರೆ ಸಮಾಜ ಇಂತಹ ಕೃತ್ಯವನ್ನು ಕ್ಷಮಿಸದು. ಅಂತಹ ಅಪರಾಧಿಗಳ ಪರ ನಿಂತ ವಕೀಲರನ್ನೂ ಸಹಿಸದು. ಈ ಪರಿಸ್ಥಿತಿಯನ್ನು ಸಿಂಗ್ ತಮ್ಮ ಉಳಿಕೆಯ ಜೀವನದುದ್ದ ಹೇಗೆ ನಿಭಾಯಿಸುತ್ತಾರೆ? ಗೊತ್ತಿಲ್ಲ.
ಅಪರಾಧ ಢಾಳಾಗಿ ಸಾಬೀತಾದರೂ ಸಾರ್ವಜನಿಕವಾಗಿ ಕಾನೂನನ್ನು ಯಾರೂ ಕೈಗೆತ್ತಿಕೊಳ್ಳುವಂತಿಲ್ಲ. ಇಂತಹ ಸನ್ನಿವೇಶದಲ್ಲಿ ಸಿಂಗ್ ಅವರಂತಹ ನ್ಯಾಯವಾದಿಗಳು ಪ್ರಕರಣವನ್ನು ಹೇಗೆ ಏಳು ವರ್ಷಗಳು ಎಳೆದಾಡಿದರು! ಅವರ ಜಾಣ್ಮೆ ಅನ್ನುವುದಕ್ಕಿಂತ ನ್ಯಾಯಾಂಗ ಯಾವುದನ್ನೂ ಅವಸರದಲ್ಲಿ ವಿಚಾರಿಸದು. ಅದಕ್ಕೆ ಅಷ್ಟಷ್ಟೇ ಮೆಟ್ಟಿಲುಗಳು ಏರಬೇಕು. ಕಾಲಾವಕಾಶ ನೀಡಬೇಕು. ಈ ಪ್ರಕ್ರಿಯೆ ನಮ್ಮ ನ್ಯಾಯಾಂಗದಲ್ಲಿ ಇರುವುದರಿಂದ ನಾವೂ ಕಾಯಬೇಕು. ಅದರಲ್ಲೂ ಮರಣ ದಂಡನೆಯಲ್ಲಿ ಕೊನೆಗೊಳ್ಳಬಹುದಾದ ಪ್ರಕರಣವನ್ನು ಅತ್ಯಂತ ಸೂಕ್ಷ್ಮ ಹಾಗೂ ಬುದ್ಧಿಮತ್ತೆಯಿಂದ ಪರಿಶೀಲಿಸಬೇಕಾಗುತ್ತದೆ. ಈ ಎಚ್ಚರವನ್ನು ನಮ್ಮ ನ್ಯಾಯಾಂಗ ಯಾವತ್ತೂ ಕಾಪಾಡಿಕೊಂಡು ಬಂದಿದೆ. ಅದೇ ಹೆಮ್ಮೆಯ ಸಂಗತಿ.
ಮರಣದಂಡನೆ ಬೇಕೇ ಬೇಡವೆ? ಚರ್ಚೆ ಜಗತ್ತಿನಾದ್ಯಂತ ನಡೆಯುತ್ತಿದೆ. ಈ ಬಗ್ಗೆ ನಮ್ಮ ದೇಶದಲ್ಲಿಯೂ ಚರ್ಚೆ ಎದ್ದಿತ್ತು. ಒಂದು ವರದಿಯ ಪ್ರಕಾರ ಸದ್ಯ ತೊಂಭತೈದು ದೇಶಗಳಲ್ಲಿ ಈ ಶಿಕ್ಷೆ ರದ್ದಾಗಿದೆಯಂತೆ. ಮೊನ್ನೆ ಒಂದು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹರಿದಾಡಿತು. ಐದು ಜನ ಅತ್ಯಾಚಾರಿ ಯುವಕರ ತಲೆಗನ್ನ್ನು ಕುರಿ ತಲೆ ಕಡಿದಂತೆ ಕತ್ತರಿಸಲಾಯಿತು. ಇಂತಹ ಬರ್ಬರ ಶಿಕ್ಷೆಯ ಕಲ್ಪನೆಯಿದ್ದರೂ ಹೆಣ್ಣಿನ ಮೇಲೆ ಅತ್ಯಾಚಾರ ಇನ್ನೂ ಅವ್ಯಾಹತ ನಡೆದಿದೆ ಎಂದರೆ ನಾಗರಿಕ ಸಮಾಜ ನಾಚಿಕೊಳ್ಳಬೇಕು.
ಇಷ್ಟೆಲ್ಲ ವಿವಾದಗಳ ನಂತರ ಕೊನೆಗೆ ವಿರಳಾತಿವಿರಳ ಪ್ರಕರಣಗಳಲ್ಲಿ ಈ ಶಿಕ್ಷೆ ವಿಧಿಸಲು ಈ ಶಿಕ್ಷಾ ಪ್ರಕ್ರಿಯೆ ನಮ್ಮಲ್ಲಿ ಮುಂದುವರೆದಿದೆ. ನಿಜ, ಬದುಕುವ ಹಕ್ಕು ಸಂವಿಧಾನಾತ್ಮಕ. ಆದರೆ ಅಮಾನುಷತೆಗೆ ಇಂತಹ ಭೀಕರ, ಧಾರುಣ ಕೃತ್ಯಗಳಿಗೆ ಶಿಕ್ಷೆ, ಕೇವಲ ಜೀವಾವಧಿ ಆದರೆ ಸಾಕೆ?
ಕೊಲ್ಲಿಸಿಕೊಂಡ ಜೀವ ಮಾಡಿದ ಅಪರಾಧವಾದರೂ ಏನು? ಎಂಬ ಪ್ರಶ್ನೆ ನಮ್ಮ ಆತ್ಮಸಾಕ್ಷಿಯನ್ನೇ ಕೇಳಿಕೊಂಡರೆ ನಾವೇ ನೀಡಬಹುದಾದ ಉತ್ತರವೇನು?
ಎಲ್ಲೋ ಒಂದುಕಡೆ ನಮ್ಮ ಮಕ್ಕಳನ್ನು ನಾವು ಅವರ ತಾರುಣ್ಯದ ಅವಧಿಯಲ್ಲಿ ಹೇಗೆ ಸಂಭಾಳಿಸುತ್ತಿದ್ದೇವೆ? ಮನುಷ್ಯ ತನ್ನಂತೇ ಇರುವ ಮನುಷ್ಯನನ್ನು ಕೊಲ್ಲುವುದು ತರವೇ?
???????
ತೆರೆದ ಮನಸ್ಸಿನಿಂದ ಯೋಚಿಸುವಂಥದ್ದು ಅಲ್ಲವೆ?
Get in Touch With Us info@kalpa.news Whatsapp: 9481252093
Discussion about this post