ಭದ್ರಾವತಿ: ಹೆರಿಗೆಗೆ ಎಂದು ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಆಕೆಯ ಸಂಬಂಧಿಗಳು ಇಲ್ಲಿನ ನಿರ್ಮಲಾ ಆಸ್ಪತ್ರೆಯ ಮುಂಭಾಗದಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದ ಪರಿಣಾಮ ನಿನ್ನೆ ರಾತ್ರಿ ಪರಿಸ್ಥಿತಿ ಗಂಭೀರಗೊಂಡಿತ್ತು.
ಬಾರಂದೂರು ಗ್ರಾಮದ ರಾಧಾಬಾಯಿ(28) ಅವರನ್ನು ಹೆರಿಗೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ಸೋಮವಾರ ಸಂಜೆ ದಾಖಲಿಸಲಾಗಿತ್ತು. ರಾತ್ರಿ 7.45 ಸುಮಾರಿಗೆ ಗಂಡು ಮಗು ಜನಿಸಿದೆ. ಹೆರಿಗೆ ಬಳಿಕ ಹೆಚ್ಚು ರಕ್ತಸ್ರಾವ ಆಗಿದ್ದರಿಂದ ತಾಯಿಗೆ ತಕ್ಷಣ ರಕ್ತ ಹೊಂದಿಸುವಂತೆ ವೈದ್ಯರು ಸಂಬಂಧಿಗಳಿಗೆ ತಿಳಿಸಿದ್ದಾರೆ.
ವೈದ್ಯರ ಸೂಚನೆಯ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ರಕ್ತ ತಂದು ಕೊಟ್ಟ ನಂತರ, ಬಾಣಂತಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ. ಆ ಆಸ್ಪತ್ರೆಯಲ್ಲೂ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮಹಿಳೆ ಸಾವನ್ನಪ್ಪಿದ್ದಾರೆ.
ಹೀಗೆ ರಾಧಾ ಬಾಯಿಯ ಸಾವಿಗೆ ಆಕೆಯ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ರಾಧಾರ ಸಾವಿಗೆ ನಿರ್ಮಲಾ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ವೈದ್ಯರೇ ಕಾರಣವೆಂದು ಆರೋಪಿಸಿ ಆಕೆಯ ಶವವನ್ನು ಆಸ್ಪತ್ರೆಯ ಮುಂದೆ ಇರಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ.
ರಾಧಾ ಬಾಯಿ ಸಂಬಂಧಿಗಳು ಆರೋಪಿಸುವಂತೆ ನಿರ್ಮಲಾ ಆಸ್ಪತ್ರೆಯ ವೈದ್ಯರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಂಡು ಅಗತ್ಯ ಚಿಕಿತ್ಸೆ ಮಾಡಿಲ್ಲ. ಪರಿಸ್ಥಿತಿ ಕೈಮೀರುವ ಹಂತದಲ್ಲಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಹೀಗಾಗಿ, ಈಕೆ ಸಾವಿಗೆ ಆಸ್ಪತ್ರೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆ ವಿರುದ್ಧ ಸಿಟ್ಟಿಗೆದ್ದ ರಾಧಾ ಬಾಯಿ ಸಂಬಂಧಿಗಳು ಆಸ್ಪತ್ರೆಯ ಬಾಗಿಲು ಹಾಗೂ ಕೌಂಟರ್ ಗಾಜನ್ನು ಒಡೆದು ಹಾಕಿದ್ದಾರೆ. ಪರಿಸ್ಥಿತಿ ಗಂಭೀರತೆಯನ್ನು ಅರಿತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ನಿಯಂತ್ರಿಸಿದ್ದಾರೆ.
ಸದ್ಯ ಇಂದೂ ಸಹ ಆಸ್ಪತ್ರೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.
Discussion about this post