ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಬ್ಬು ಬಳಿಸಿ ಬೆಲ್ಲ ತಯಾರು ಮಾಡದೇ, ಸಕ್ಕರೆ ಬಳಸಿ ತಯಾರು ಮಾಡುತ್ತಿದ್ದ ಎರಡು ಆಲೆಮನೆಗಳ ಮೇಲೆ ತಹಶೀಲ್ದಾರ್ ಶಿವಕುಮಾರ್ ಅವರ ತಂಡ ದಾಳಿ ನಡೆಸಿ, ಸೀಝ್ ಮಾಡಿದೆ.
ಖಚಿತ ಮಾಹಿತಿ ಆಧರಿಸಿ ತಹಶೀಲ್ದಾರ್ ಅವರು ಪೋಲಿಸ್ ಸಿಬ್ಬಂದಿಗಳೊಂದಿಗೆ ಕೂಡ್ಲಿಗೆರೆ ಹೋಬಳಿಯ ಅರಳಿಹಳ್ಳಿ ಹಾಗೂ ಕಾಗೆಹಳ್ಳದಲ್ಲಿನ ಎರಡು ಆಲೆಮನೆಗಳಿಗೆ ದಿಢೀರ್ ಭೇಟಿ ನೀಡಿ ಆಲೆಮನೆಗಳಲ್ಲಿ ದಾಸ್ತಾನಿದ್ದ ಬೆಲ್ಲ ಮತ್ತು ಸಕ್ಕರೆ ಮೂಟೆಗಳನ್ನು ಪರಿಶೀಲಿಸಿ, ಪ್ರಕರಣ ದಾಖಲಿಸಿದರು.
ಬೆಲ್ಲವನ್ನು ಕಬ್ಬಿನಿಂದ ತಯಾರಿಸಬೇಕು. ಆದರೆ ತಾಲೂಕಿನ ಆಲೆಮನೆಗಳಲ್ಲಿ ಸಕ್ಕರೆಯನ್ನು ಬಳಸಿ ಬೆಲ್ಲವನ್ನು ತಯಾರಿಸಲಾಗುತ್ತಿದೆ ಎಂದು ತಹಶೀಲ್ದಾರ್ ಕಚೇರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತಾಲೂಕಿನ ಆಲೆಮನೆಗಳವರನ್ನು ಕರೆಸಿ ಮಾತನಾಡಿ ಸಕ್ಕರೆಯಿಂದ ಬೆಲ್ಲ ತಯಾರಿಸಬಾರದು ಎಂದು ತಿಳುವಳಿಕೆ ಹೇಳಿ ಕಳುಹಿಸಲಾಗಿತ್ತು. ಆದರೂ ಸಹ ಸಕ್ಕರೆಯಿಂದ ಬೆಲ್ಲ ತಯಾರಿಸುವ ದಂಧೆ ಮುಂದುವರೆದಿದೆ ಎಂಬ ಮಾಹಿತಿ ಮೇರೆಗೆ ಮಂಗಳವಾರ ಕೂಡ್ಲಿಗೆರೆ ಹೋಬಳಿಗೆ ಸೇರಿದ ಅರಳಿಹಳ್ಳಿಯಲ್ಲಿನ ರಾಜಪ್ಪ ಹಾಗೂ ಅನಸೂಯಮ್ಮ ಅವರ ಮಾಲಿಕತ್ವಕ್ಕೆ ಸೇರಿದ ಪುರುಷೋತ್ತಮ ಎಂಬುವವರು ನಡೆಸುತ್ತಿದ್ದ ಸದರಿ ಎರಡು ಆಲೆಮನೆಗಳಿಗೆ ಇಲ್ಲಿಗೆ ಭೇಟಿ ನೀಡಿ ಕ್ರಮಕೈಗೊಳ್ಳಲಾಗಿದೆ.
ಸದರಿ ಎರಡೂ ಆಲೆಮನೆಗಳಲ್ಲಿ ದಾಸ್ತಾನಿದ್ದ ಸುಮಾರು 150 ಮೂಟೆ ಸಕ್ಕರೆ ಹಾಗೂ 70 ಮೂಟೆ ಬೆಲ್ಲದ ಸಂಗ್ರಹವಿದ್ದ ಗೋಡೌನ್‌ನ್ನು ಸೀಝ್ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್, ಉಪತಹಶೀಲ್ದಾರ್ ಮಂಜಾನಾಯ್ಕ್, ಗ್ರಾಮಲೆಕ್ಕಿಗ ಅನಿಲ್ ಕುಮಾರ್, ಕಂದಾಯಧಿಕಾರಿ ಜಗದೀಶ್ ಗ್ರಾಮಾಂತರ ಪೋಲಿಸ್ ಠಾಣೆಯ ಎಸ್‌ಐ ದೇವೇಂದ್ರಪ್ಪ ಅವರುಗಳು ಇದ್ದರು.
Get In Touch With Us info@kalpa.news Whatsapp: 9481252093
Discussion about this post