ಮೂಡಬ ಸಿದ್ದಾಪುರ: 10 ವರ್ಷ ಸಂಸತ್’ನಲ್ಲಿ ಮಾತನಾಡದವರಿಗೆ ಮತ ನೀಡುತ್ತೀರ. ಆದರೆ, ನಿಮಗಾಗಿ ಕೆಲಸ ಮಾಡುವ ನನಗೇಕೆ ಮತ ನೀಡುವುದಿಲ್ಲ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಭಾವನಾತ್ಮಕವಾಗಿ ಪ್ರಶ್ನಿಸಿದ್ದಾರೆ.
ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಮೂಡಬ ಸಿದ್ದಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಂಗಾರಪ್ಪ ನವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ರೈತರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಹಲವು ಯೋಜನೆಗಳನ್ನು ತಂದರು. ಆದರೆ ನೀವುಗಳು ಬಂಗಾರಪ್ಪನವರನ್ನು ಕಡೆಯ ಚುನಾವಣೆಯಲ್ಲಿ ಸೋಲಿಸಿದ್ದೀರಾ ಎಂದರು.
ನಾನು 2 ಬಾರಿ ಸೊರಬ ಕ್ಷೇತ್ರದಿಂದ ಪಾದಯಾತ್ರೆ ಮಾಡಿದ್ದೀನಿ, 5 ಬಾರಿ ಚುನಾವಣೆಗೆ ನಿಂತಿದ್ದೀನಿ. ಆದರೆ, ಗೆದ್ದಿರುವುದು ಒಮ್ಮೆ ಮಾತ್ರ, ಮಧು ಬಂಗಾರಪ್ಪನವರನ್ನು ಪ್ರತಿ ಬಾರಿ ಸೋಲಿಸುತ್ತಿದ್ದರೆ ಹೋರಾಟ ಮಾಡುವುದಕ್ಕೆ ಶಕ್ತಿ ಬೇಕು. ಈ ಬಾರಿ ನೀವು ಬದಲಾವಣೆ ಮಾಡಬೇಕು ನನಗೆ ಒಮ್ಮೆ ಮತ ನೀಡಿ ನಾನು ನಿಮ್ಮ ಪರವಾಗಿ ಸಂಸತ್ ನಲ್ಲಿ ಕೆಲಸ ಮಾಡುತ್ತೇನೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ನೀರಾವರಿ ಯೋಜನೆಗೆ ಹಣ ಮಂಜೂರು ಮಾಡದೆ ಮೈತ್ರಿ ಸರ್ಕಾರದ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ಮನೆಗೆ ಹೋಗುತ್ತಾರೆ. ಮತ್ತೆ ಬಜೆಟ್’ನಲ್ಲಿ ನೀರಾವರಿ ಯೋಜನೆಗೆ ಅನುದಾನ ಸಿಕ್ಕಾಗ ನಾವೇ ಮಾಡಿದ್ದು ಎಂದು ಹೇಳುತ್ತಾರೆ. ಇವರಿಗೆ ನಾಚಿಕೆಯಾಗಬೇಕು ಯಾರೋ ಮಾಡಿದ್ದನ್ನು ನಾವೇ ಮಾಡಿದ್ದು ಎನ್ನುತ್ತಾರೆ. ಇದು ಬಿಜೆಪಿಯವರ ದುರಾಭ್ಯಾಸ. 10 ವರ್ಷಗಳಲ್ಲಿ ಒಮ್ಮೆಯೂ ಸಂಸತ್’ನಲ್ಲಿ ಮಾತನಾಡದವರಿಗೆ ನೀವು ಮತ ನೀಡುತ್ತೀರಾ. ಆದರೆ, ನಿಮ್ಮ ಪರವಾಗಿ ಕೆಲಸ ಮಾಡುವ ನನಗೆ ನೀವು ಮತ ಯಾಕೆ ನೀಡುವುದಿಲ್ಲ. ಈ ಬಾರಿ ನೀವು ನನಗೆ ಮತ ನೀಡಬೇಕು. ಈ ಬಾರಿ ನಾನು ಗೆದ್ದರೆ ಅದರಲ್ಲಿ ಬಂಗಾರಪ್ಪ ನವರ ಸೋಲನ್ನು ನಾನು ಗೆಲುವಿನಲ್ಲಿ ಕಾಣುತ್ತೇನೆ ಎಂದರು.
Discussion about this post