ಮುಂಬೈ: ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ನಾನು ನಂಬಿರುವ ಸಿದ್ದಾಂತಕ್ಕಾಗಿ ನಾನು ಹೋರಾಡುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ಭಿವಾಂಡಿ ನ್ಯಾಯಾಲಯದ ಮುಂದೆ ಇಂದು ಹಾಜರಾದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಮಾನನಷ್ಟ ಮೊಕದ್ದಮೆ ಹೂಡಿರುವ ಆರ್ ಎಸ್ ಎಸ್ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ರೈತರ ಸಮಸ್ಯೆಗಳು, ಉದ್ಯೋಗ ಸೃಷ್ಟಿಯತ್ತ ಗಮನ ಕೊಡಬೇಕಾದ ಸರ್ಕಾರ ಅನಾವಶ್ಯಕ ವಿಚಾರಗಳನ್ನು ಗಂಭೀರವಾಗಿ ಸ್ವೀಕರಿಸಿದೆ. ರೈತರು, ಬಡವರು ಸರ್ಕಾರದ ತೀವ್ರ ಅಸಮಾಧಾನಗೊಂಡಿದ್ದು, ಈ ಸರ್ಕಾರ ಕೇವಲ ಧನಿಕರ ಪರ ಸರ್ಕಾರವಾಗಿದೆ. ಮನ್ ಕಿ ಬಾತ್ ಮಾತನಾಡುವ ಪ್ರಧಾನಿ ಮೋದಿ ಕಾಮ್ ಕಿ ಬಾತ್ ಬಗ್ಗೆ ಮಾತನಾಡುವುದಿಲ್ಲ. ಅವರ ಬೇಕಿದ್ದರೆ ನನ್ನ ವಿರುದ್ದ ಮತ್ತಷ್ಟು ಪ್ರಕರಣ ದಾಖಲಿಸಲಿ ಎಂದು ಸವಾಲು ಹಾಕಿದರು.
ಇನ್ನು, ನ್ಯಾಯಾಲಯದ ಮುಂದೆ ಹಾಜರಾದ ರಾಹುಲ್, ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ತಾವು ಅಪರಾಧಿ ಅಲ್ಲ ಎಂದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಹುಲ್, ಮಹಾತ್ಮಾ ಗಾಂಧಿ ಹತ್ಯೆ ಹಿಂದೆ ಆರ್ ಎಸ್ ಎಸ್ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರೊಬ್ಬರು ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
















