ವಿದೇಶಿ ಕನ್ನಡಿಗರುಗಳಾದ ಸಂದೀಪ್ ಕುಮಾರ್, ನಟರಾಜ್ ಹಾಗೂ ಇತರರು ಎಸ್ ಎನ್ ಎಸ್ ಸ್ನಿಮ ಬ್ಯಾನ್ನರ್ ಅಡಿಯಲ್ಲಿ ತಯಾರಿಸಿರುವ ‘ರತ್ನಮಂಜರಿ’ ಹಾಡುಗಳ ಬಿಡುಗಡೆ ಸಮಾರಂಭ ಕಳೆದ ಶನಿವಾರ ಸಂಜೆ ಕಲಾವಿದರ ಸಂಘದಲ್ಲಿ ಸಡಗರದೊಂದಿಗೆ ನೆರವೇರಿತು.
ನಾದ ಬ್ರಹ್ಮ ಹಂಸಲೇಖ, ಡಾ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಚಿತ್ರ ತಂಡದವರು ದೀಪ ಬೆಳಗುವುದರ ಮುಖಾಂತರ ಚಾಲನೆ ದೊರಕಿದ ಕಾರ್ಯಕ್ರಮದಲ್ಲಿ ‘ರತ್ನಮಂಜರಿ’ ಚಿತ್ರದ ಟ್ರೇಲರ್ ಹಾಗೂ ಮೂರು ಹಾಡುಗಳನ್ನು ಪ್ರದರ್ಶನ ಮಾಡಲಾಯಿತು.
ಮಿಣ ಮಿಣ ಸೂರ್ಯನ ಕಿರಣ….ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿದ್ದಾರೆ. ಒಮ್ಮೆ ನನ್ನವಳು…ಪಕ್ಕ ನಿಂತರೆ ಪದ್ಮಭೂಷಣ ಪಡೆದಂತೆ ಹಾಗೂ ಬಾರೆ ಸುಂದರಿ ಎ ಕೊಡಗಿನ ಸಿರಿಯೆ… ಹಾಗೂ ನಟ ವಸಿಷ್ಠ ಎನ್ ಸಿಂಹ ಹಾಡಿರುವ ದುಷ್ಟ ಸಂಹಾರ ದೊಡ್ಡಾಟ …ಹಾಡುಗಳನ್ನು ವೀಕ್ಷಣೆ ಮಾಡಿದ ಹಂಸಲೇಖ ನಾಯಕಿ ಅಖಿಲ ಪ್ರಕಾಶ್ ‘ವಂಡರ್ ಐಸ್ ಹಾಗೂ ತಂಡರ್ ಥೈಸ್’ ಹೊಂದಿದ್ದಾರೆ ಎಂದರು.
ನಾಯಕ ರಾಜ್ ಚರಣ್ ಸಂಕೋಚ ಬಿಡು ಸಂತೋಷ ಪಡು ಎಂದು ಕಿವಿ ಮಾತು ಹೇಳಿದರು. ಹಂಸಲೇಖ ಅವರ ಶಿಷ್ಯ ಸಂಗೀತ ಕಲಿತು ರಾಗ ಸಂಯೋಜನೆ ಮಾಡಿರುವ ಹರ್ಷವರ್ಧನ್ ಕೆಲಸವನ್ನು ಕೊಂಡಾಡಿದರು. ಇಂದು ಸಿನಿಮಾಕ್ಕೆ ಪ್ರೇಕ್ಷಕರೆ ಪ್ರಧಾನಿ ಎಂದು ಹಂಸವಾಣಿ ನುಡಿಯಿತು.
ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಹಂಸಲೇಖ ಜೊತೆಯಾಗಿ ಧ್ವನಿ ಸಾಂದ್ರಿಕೆಯನ್ನು ಬಿಡುಗಡೆ ಮಾಡಿದರು. ಅವರ ಟೆಂಟ್ ಹೌಸ್ 10 ವರ್ಷಗಳಲ್ಲಿ ಅನೇಕ ಪ್ರತಿಭೆಗಳನ್ನು ಹೊರಹಾಕಿರುವುದಕ್ಕೆ ಸಂತೋಷ ಪಟ್ಟುಕೊಂಡು ಶ್ರಮ ಹಾಗೂ ವಿನಯ ಇದ್ದರೆ ಗೆಲವು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ರತ್ನಮಂಜರಿ ಚಿತ್ರದ ನಾಯಕ ರಾಜ್ ಚರಣ್ ಹಾಗೂ ಅಖಿಲ ಪ್ರಾಕಾಶ್ ಟೆಂಟ್ ಹೌಸ್ ಸಿನಿಮಾ ಪ್ರತಿಭೆಗಳು ಎಂದು ಹೇಳಿಕೊಳ್ಳಲು ಖುಷಿ ಆಗುತ್ತದೆ ಎಂದು ನಾಗತಿಹಳ್ಳಿ ವಿವರಿಸಿದರು.
ನಿರ್ಮಾಪಕ ಸಂದೀಪ್ ಕುಮಾರ್ ಮಾತನಾಡಿ, ಚಿತ್ರೀಕರಣ ಮುಗಿತಲ್ಲ ಎನ್ನುವ ದುಃಖ. ಕಾರಣ ತಂಡದ ಸದಸ್ಯರು ಅಷ್ಟು ಅನ್ಯೋನ್ಯವಾಗಿದ್ದರು. ಯಾವುದೇ ತೊಂದರೆ ಇಲ್ಲದೆ ಚಿತ್ರೀಕರಣ ನಡೆಯಿತು ಎಂದು ತಮ್ಮ ತಂಡದ ಕೆಲಸವನ್ನು ಶ್ಲಾಘಿಸಿದರು.
ನಿರ್ದೇಶಕ ಪ್ರಸಿದ್ದ್ ಸ್ವಲ್ಪ ಭಾವುಕರಾಗಿ, ಹಂಸಲೇಖ ಜೊತೆ 10 ವರ್ಷಗಳ ಹಿಂದೆ ಒಂದು ಕಥೆ ಹೇಳಿದ್ದನ್ನು ನೆನಪಿಸಿಕೊಂಡು ಮತ್ತೆ ಸುಧಾರಿಸಿಕೊಂಡು ಜೀವನದಲ್ಲಿ ಮೂರು ಆಸೆಗಳಿತ್ತು. ಅದರಲ್ಲಿ ಕೆ.ಎಸ್. ಅಶ್ವಥ್ ಅವರನ್ನು ನಿರ್ದೇಶನ ಮಾಡುವುದಾಗಿತ್ತು. ಅದು ಸಾಧ್ಯವಿಲ್ಲ. ಈಗ ಎಸ್’ಪಿ’ಬಿ ಅವರ ಹಾಡನ್ನು ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ತಮ್ಮ ಮುಂದಿನ ಚಿತ್ರಕ್ಕೆ ಸಿದ್ಧ ಮಾಡಿಕೊಳ್ಳುವ ಆಸೆ ಹಾಗೆ ಉಳಿದಿದೆ ಎಂದರು.
ಎರಡು ಹಾಡುಗಳನ್ನು ರಚನೆ ಮಾಡಿರುವ ಕೆ. ಕಲ್ಯಾಣ್ ಅವೆರಡನ್ನೂ ಅಪ್ಪು ಹಾಗೂ ಟಿಪ್ಪು ಹೇಳಿರುವುದಕ್ಕೆ ಸಂತೋಷವಾಗಿದೆ. ಒಂದು ಹಾಡು ಹೇಳಿರುವ ವಸಿಷ್ಠ ಎನ್ ಸಿಂಹ ಹೊರನಾಡ ಕನ್ನಡಿಗರೂ ಸಿನಿಮಾಕ್ಕೆ ಹಣ ಹೂಡುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿಕೊಂಡರು.
‘ರತ್ನಮಂಜರಿ’ ಚಿತ್ರದ ಸಂಗೀತ ನಿರ್ದೇಶಕ ಹರ್ಷವರ್ಧನ ಜೀವನದಲ್ಲಿ ದೊಡ್ಡ ಫಿಲ್ಮ್ ಸಿಕ್ಕಿದ್ದು ಸಂತೋಷ ಹಾಗೆ ಹಿನ್ನೆಲೆ ಸ್ಕೋರ್ ಮಾಡುವಾಗ ದೊಡ್ಡ ಛಾಲೆಂಜ್ ಎದುರಿಸಬೇಕಾಯಿತು ಎಂದರು.
ನಾಯಕ ರಾಜ್ ಚರಣ್ ಚಿತ್ರದ ಕಥಾ ಹಂದರ ವಿದೇಶ ಹಾಗೂ ಸ್ವದೇಶದ ಬೆಸುಗೆ ಇರುವುದು ಕುತೂಹಲಕರವಾದ ವಿಚಾರ ಎಂದರು. ಅಖಿಲ ಪ್ರಕಾಶ್ ಫ್ಯಾಷನ್ ಡಿಸೈನರ್ ಗೌರಿ ಪಾತ್ರ ಖುಷಿ ಕೊಟ್ಟಿತು ಎಂದು ವಿವರಿಸಿದರು.
ಹಿರಿಯ ನಿರ್ದೇಶಕ ನಂಜುಂಡೇ ಗೌಡ ಧ್ವನಿ ಸಾಂದ್ರಿಕೆ ಬಿಡುಗಡೆ ಸಮಯದಲ್ಲಿ ವೇದಿಕೆಯಲ್ಲಿ ಹಾಜರಿದ್ದರು. ಚಿತ್ರದ ಮತ್ತೊಬ್ಬ ನಾಯಕಿ ಪಲ್ಲವಿ ರಾಜು, ವಾಣಿಜ್ಯ ಮಂಡಳಿಯ ಬಾ ಮಾ ಹರೀಶ್, ವಿತರಕ ದೀಪಕ್, ನಟರುಗಳಾದ ಭರತ್, ರಾಕೇಶ್ ಅಡಿಗ ವೇದಿಕೆಯಲ್ಲಿ ಭಾಗವಹಿಸಿ ಶುಭ ಕೋರಿದರು.







Discussion about this post