ನವದೆಹಲಿ: 2022ರ ವೇಳೆಗೆ ಪ್ರತಿ ಭಾರತೀಯನಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ನಮೊ ಆಪ್ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಆವಾಸ್ ಯೋಜನೆಯೆಂದರೆ ಕೇವಲ ಇಟ್ಟಿಗೆ, ಗಾರೆಗಳಿಗೆ ಸಂಬಂಧಿಸಿದ್ದಲ್ಲ. ಜನರಿಗೆ ಉತ್ತಮ ಗುಣಮಟ್ಟದ ಜೀವನ ಒದಗಿಸುವುದು ಎಂದರು.
2022ರ ವೇಳೆಗೆ ಭಾರತ 75ನೆಯ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುವ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯನು ಕೂಡ ಮನೆ ಹೊಂದುವಂತಾಗಬೇಕು. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಎನ್‌ಡಿಎ ಸರ್ಕಾರದ 4 ವರ್ಷಗಳ ಆಡಳಿತದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದ್ದು, ಈ ಹಿಂದೆ ಮನೆ ನಿರ್ಮಾಣಕ್ಕೆಂದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 70ರಿಂದ 75 ಸಾವಿರ ರೂಪಾಯಿ ನೀಡಲಾಗುತ್ತಿತ್ತು. ಇಂದು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅದನ್ನು 1.30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಇಂದಿನ ಕೇಂದ್ರ ಸರ್ಕಾರ ಕೇವಲ ಒಂದು ವರ್ಗಕ್ಕೆ ಮಾತ್ರವಲ್ಲದೆ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು.

















