ಹದಿನಾರು ಸಾವಿರ ಮುಗ್ದ ಯುವರಾಜ ಕುಮಾರಿಯರನ್ನು ನರಕಾಸುರ ಬಂಧಿಸಿ, ತನ್ನ ಸಹಚರರ ಸುಖ ಭೋಗಕ್ಕೆ ಬಳಸಿ, ಸಜ್ಜನರ, ಋಷಿಮುನಿಗಳ ಹಿಂಸೆಗಿಳಿದ. ಇದು ಆಗಿನ ಕಥೆ. ಈಗಲೂ ನಡೆಯುತ್ತಿರುವುದು ಇದುವೆ. ಭಗವಂತ ಆಗಾಗ ಅವತರಿಸುತ್ತಲೇ ಇರುತ್ತಾನೆ ಈ ದುಷ್ಟರ ನಾಶಕ್ಕಾಗಿ.
|ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|
ಎಂಬಂತೆ ಶಸ್ತ್ರಾಸ್ತ್ರ ಹಿಡಿದೂ ಅವತರಿಸುತ್ತಾನೆ, ಧರ್ಮ ಭೋದನೆ ಮಾಡಿಯೂ ಅವತರಿಸುತ್ತಾನೆ. ರಾಮ ಕೃಷ್ಣಾದಿ ಶಸ್ತ್ರ ಹಿಡಿದ ರೂಪದಲ್ಲಿ, ಬಸವಾದಿ ಶರಣರ ರೂಪದಲ್ಲಿ, ಮಧ್ವಾದಿ ಆಚಾರ್ಯತ್ರಯರ ರೂಪದಲ್ಲಿ, ಕನಕಾದಿ ದಾಸರ ರೂಪದಲ್ಲಿ ಭಗವಂತನ ದಶಾವತಾರ(ದಶ ಎಂದರೆ ಹತ್ತು ಮಾತ್ರವಲ್ಲ, ಪೂರ್ಣ ಎಂದೂ ಅರ್ಥವಿದೆ).
ಹಾಗೆಯೇ, ನರಕಾದಿ ದುಷ್ಟದಾನವ ರೂಪದಲ್ಲಿ ಹುಟ್ಟುತ್ತಲೇ ಇರುತ್ತಾರೆ. ಈಗ ಭಗವದ್ಗೀತೆಯನ್ನು ದ್ವೇಷಿಸುವ ಗಂಜೀ ಸಾಹಿತಿಗಳು, ಪರಪೀಡಕ ಸಾಹಿತಿಗಳು, ಪರಗತಿ ವಿಚಾರವಂತರು, ಪರಪೀಡಕ ಭಕ್ತರ ಹಿಂಡು ಇರುವ ಮಠಗಳ ಸ್ವಾಮೀಜಿಗಳು, ಅನ್ಯಧರ್ಮದ ಕೆಲ ನೀಚ ಭಯೋತ್ಪಾದಕ ಕುಲಗಳು, ಗೋಭಕ್ಷಣಾ ಪ್ರಿಯರು ಧರ್ಮ ನಿಂದನೆ ಮಾಡುತ್ತಿರುತ್ತಾರೆ. ಇವರನ್ನು ಇವರಂತಹ ಸರಕಾರಗಳೂ ಬೆಂಬಲಿಸುತ್ತದೆ.
ಉದಾಹರಣೆಗೆ ಕರ್ನಾಟಕದ ಸಿದ್ಧರಾಮಯ್ಯ ಸರಕಾರ, ಕೇರಳದ ಪೀಣರಾಯಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರನ್ನು ತೆಗೆದುಕೊಂಡಾಗ ಅರ್ಥವಾಗಬಹುದು. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ನ್ಯಾಯಾಲಯಗಳ ತೀರ್ಮಾನವೂ ಇದಕ್ಕೆ ಬೆಂಬಲವಾಗುತ್ತದೆ. ಆದರೆ ನಾನು ನ್ಯಾಯಾಲಯಗಳ ತಪ್ಪು ಎನ್ನಲ್ಲ. ಅವರಿಗೆ ತಲುಪುವ ದಾಖಲೆಗಳು ತಮಗೆ ಬೇಕಾದಂತೆ ತಿರುಚಿದ್ದರೆ ಅದಕ್ಕೆ ತಕ್ಕಂತೆ ತೀರ್ಮಾನ ನೀಡಬೇಕಾದದ್ದು ನ್ಯಾಯಾಲಯಗಳ ಧರ್ಮ. ತಪ್ಪು ನ್ಯಾಯಾಲಯದಲ್ಲ, ತಪ್ಪು ಶಾಸನ ಮಾಡಿದವರದ್ದೇ ಆಗಿರುತ್ತದೆ.
ಇರಲಿ ಒಂದೊಂದು ಉದಾಹರಣೆ ನೀಡಲು ನೂರಾರು ಪುಟಗಳೇ ಬೇಕಾದೀತು. ಈ ವಿಚಾರ ಇಲ್ಲೇ ನಿಲ್ಲಿಸುವ. ಅಂದು ಈ ನರಕಾಸುರನ ವಿಚಾರ ಹೇಗಾಗಿತ್ತು ಎಂದು ನೋಡೋಣ.
ದರ್ಪ ದಬ್ಬಾಳಿಕೆಯ ನರಕನು ಸ್ವರ್ಗವನ್ನೇ ಸ್ವಾಧೀನ ಮಾಡಿಕೊಂಡು, ದೇವತೆಗಳನ್ನು ಓಡಿಸುತ್ತಾನೆ. ಅವನ ಹೆಸರು ಭೌಮಾಸುರ ಎಂದು, ಮಹಾಶೂರನೀತ. ರಾಜ್ಯಗಳನ್ನು ಜೈಸಿ ಅಲ್ಲಿದ್ದ ಗೋಪಿಕಾ ಸ್ತ್ರೀಯರನ್ನು ಮೊದಲಾಗಿ ಬಂಧಿಸಿ ಇವನ ಬಂಟರಿಗೆ ಭೋಗಕ್ಕಾಗಿ ಮೀಸಲಿಡುತ್ತಾನೆ. ಸಜ್ಜನ ಸ್ತ್ರೀಯ ಮಾನ ಒಮ್ಮೆ ಹೋಗಿಬಿಟ್ಟರೆ ಅವರಿಗೆ ಸಮಾಜದಲ್ಲಿ ಸ್ಥಾನ ಮಾನಗಳಿಲ್ಲ. ಇದು ಸನಾತನ ಧರ್ಮ ಪರಂಪರೆ. ಇದನ್ನು ಮೀರಿ ನಡೆಯುವ ಸಾಮರ್ಥ್ಯ ಇದ್ದರೆ ಭಗವಂತನಿಗೆ ಮಾತ್ರ. ಅಂತಹ ಲೀಲಾಮಾನುಷ ವಿಗ್ರಹವೊಂದು ದೇವಕಿಯ ಎಂಟನೇ ಗರ್ಭದಲ್ಲಿ ಭಗವಾನ್ ವಾಸುದೇವನಾಗಿ, ಮುಂದೆ ಶ್ರೀ ಕೃಷ್ಣನಾಗಿ ಜನಿಸಿ, ಮೊದಲು ವಧೆ ಮಾಡಿದ್ದೇ ತನ್ನ ಸೋದರ ಮಾವ ದುಷ್ಟ ಕಂಸನನ್ನು.. ಅಲ್ಲಿಂದ ಶ್ರೀಕೃಷ್ಣನ ದುಷ್ಟಸಂಹಾರ ಕಾರ್ಯ ಶುರುವಾಗುತ್ತದೆ. ಅಶ್ವಿಜ ಚತುರ್ದಶಿಯನ್ನು ನರಕ ಚತುರ್ದಶಿಯಾಗಿ ಆಚರಿಸುವ ಪದ್ಧತಿಯು ಕೃಷ್ಣನ ಜನನಕ್ಕಿಂತ ಲಕ್ಷಾಂತರ ವರ್ಷಗಳ ಹಿಂದಿನಿಂದಲೇ ಬಂದಿತ್ತು. ಈ ಚತುರ್ದಶಿಯ ಚಂದ್ರೋದಯ ಕಾಲದಲ್ಲಿ ತೈಲಾಭ್ಯಾಂಗ ಸ್ನಾನ ಮಾಡಿದರೆ ಯಮಭಾದೆ ತಪ್ಪುತ್ತದೆ ಎಂಬುದು ಶಾಸ್ತ್ರ ವಚನ. ಇದನ್ನು ನಿರ್ಣಯ ಸಿಂಧು ಮುಂತಾದ ಧರ್ಮಗ್ರಂಥಗಳಲ್ಲಿ ವಿವರಿಸಿದೆ.
ಈ ನರಕಾಸುರನು ತನ್ನ ಭೋಗ ವಿಲಾಸಗಳಿಂದಾಗಿ ಇಂತಹ ಸತ್ಕರ್ಮಗಳನ್ನು ನಾಶಮಾಡಿ, ಅದಕ್ಕೆ ವಿರುದ್ಧವಾಗಿ ನಡೆದುಕೊಂಡದ್ದರಿಂದಲೇ ಅದೇ ಚತುರ್ದಶಿಯು ನರಕನಿಗೆ ಮರಣ ಚತುರ್ದಶಿಯಾಯ್ತು. ಶ್ರೀ ಕೃಷ್ಣನ ಸುದರ್ಶನವು ಅವನನ್ನು ಆಹುತಿ ತೆಗೆದುಕೊಂಡಿತು. ನರಕನ ಕರಾಳ ಮುಷ್ಟಿಯೊಳಗಿದ್ದ ಲಕ್ಷಾಂತರ ಧರ್ಮಗ್ಲಾನಿಗಳು, ಸತ್ಪ್ರಜೆಗಳು ನಿರಾಳವಾದರು. ಆದರೆ ನರಕನ ಬಂಧನದಲ್ಲಿದ್ದ ಹದಿನಾರು ಸಾವಿರ ಗೋಪಿಕಾ ಸ್ತ್ರೀಯರು ಬಂಧನ ಬಿಡುಗಡೆಯಾಗಿಯೂ ದುಃಖಿಗಳೇ ಆಗುತ್ತಾರೆ. ಅವರೆಲ್ಲ ಓಡಿಬಂದು ಕೃಷ್ಣನ ಪಾದಕ್ಕೆರಗಿ ‘ಭಗವಂತಾ ನಮ್ಮನ್ನೂ ನರಕನ ಜತೆಗೇ ನಿನ್ನ ಸುದರ್ಶನದ ಮೂಲಕ ಕಳುಹಿಸಿ ಬಿಡು. ಯಾವ ಸ್ತ್ರೀಯು ಕಳಂಕಿತಳಾದರೆ ಅವಳಿಗೆ ಸಮಾಜದಲ್ಲಿ ಇರುವುದಕ್ಕೆ ಸಾಧ್ಯವೇ. ದುರುಳರ ವಕ್ರ ದೃಷ್ಟಿಯಲ್ಲಿ ಮತ್ತೆ ನಾವು ಸಾಯುವ ವರೆಗೆ ಜೀವಿಸಬೇಕು. ಸಜ್ಜನರ ನಿಂದನೆ, ಅಸ್ಪಶ್ಯತೆಯಲ್ಲೇ ನಾವು ಜೀವಿಸಬೇಕು. ಅದಕ್ಕಿಂತ ಸಾಯುವುದೇ ಲೇಸು. ಇಲ್ಲವೇ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಎಲ್ಲವೂ ನಿನ್ನ ಆಜ್ಞೆಯಲ್ಲಿದೆ’ ಎಂದು ಕಣ್ಣೀರು ಸುರಿಸುತ್ತಾರೆ.
ಆಗ ಭಗವಂತ ನಗುತ್ತಾ,’ ಹೇ ಗೋಪಿಕೆಯರೇ, ಎಲ್ಲರೂ ಒಂದಲ್ಲ ಒಂದು ದಿನ ನನ್ನನ್ನೇ ಸೇರುತ್ತಾರೆ. ಅದರಲ್ಲಿ ನೀವೂ ಹೊರಗಿಲ್ಲ. ಎಷ್ಟೆಷ್ಟು ದಿನ ನೀವಿರಬೇಕು ಎಂಬುದೂ ನನ್ನದೇ ನಿರ್ಧಾರ. ಇಲ್ಲಿಯವರೆಗೆ ದುಷ್ಟನ ಬಂಧನದಿಂದ ಘಾಸಿಗೊಂಡಿರುವಿರಿ. ಮುಂದೆ ಸಮಾಜ ನಿಂದನೆಯಲ್ಲಿ ಘಾಸಿಗೊಳ್ಳುವೆವು ಎಂಬ ಭಯ ನಿಮ್ಮಲ್ಲಿದೆ. ಅದಕ್ಕೂ ಪರಿಹಾರ ತೋರಿಸುತ್ತೇನೆ. ಇದೋ ಇದೋ, ನೀವು ಈಗಿಂದೀಗಲೇ ಒಂದೊಂದು ಮಂಗಳಸೂತ್ರವನ್ನು ನನ್ನ ಹೆಸರಿನಲ್ಲಿ ಪ್ರಮಾಣ ಮಾಡಿ ಕಟ್ಟಿಕೊಳ್ಳಿರಿ. ಇಂದಿನಿಂದೇ ನಾನು ನಿಮಗೆಲ್ಲರಿಗೂ ಪತಿ. ಗಂಡನೆಂಬವನೊಬ್ಬನಿದ್ದರೆ ಹೆಂಗಸಿಗೆ ಭಯವಿಲ್ಲ. ನಾನೇ ನಿಮ್ಮ ಮಾನಸಿಕವಾದ ಗಂಡ ಎಂದು ಘೋಷಿಸುತ್ತೇನೆ. ಗಂಡಸಾಗಿದ್ದವ ನಿಮ್ಮನ್ನೇನಾದರೂ ಮುಟ್ಟಿದರೆ, ನಿಂದಿಸಿದರೆ ನನ್ನ ಸುದರ್ಶನ ಜ್ವಾಲೆಗೆ ಸುಟ್ಟು ಭಸ್ಮವಾಗಲಿ’ ಎಂದು ಭಗವಂತನು ಅಭಯನೀಡುತ್ತಾನೆ.
ಅಲ್ಲಿಯವರೆಗೆ ನಿಂತುಹೋಗಿದ್ದ ಚತುರ್ದಶಿಯ ಚಂದ್ರೋದಯ ಕಾಲದ ತೈಲಾಭ್ಯಾಂಗ ಸ್ನಾನವು ಅಲ್ಲಿಂದಲೇ ಪ್ರಾರಂಭವಾಯ್ತು. ನರಕಾಸುರನ ಮಗ ಭಗದತ್ತನಿಗೂ ರಾಜ್ಯಾಭಿಷೇಕವನ್ನು ಸ್ವತಃ ಕೃಷ್ಣನೇ ನೆರವೇರಿಸಿ ಸನ್ಮಂಗಳ ಮಾಡಿದ ಆ ಲೀಲಾಮಾನುಷ ವಿಗ್ರಹನಾದ ಪ್ರಭು ಶ್ರೀಕೃಷ್ಣ.
(6 ನವೆಂಬರ್ ಚಂದ್ರೋದಯಕ್ಕೆ ತೈಲಾಭ್ಯಾಂಗ ಸ್ನಾನ. ನರಕ ಚತುರ್ದಶಿ)
–ಪ್ರಕಾಶ್ ಅಮ್ಮಣ್ಣಾಯ
Discussion about this post