ಊಟ ಮಾಡುವಾಗ ಎಚ್ಚರಿಕೆಯಿಂದಿರಬೇಕೆ ಎನ್ನುವುದು ಎಲ್ಲರಿಗೆ ತಿಳಿದಿರುವ ವಿಚಾರ. ಹೀಗೆ ಎಚ್ಚರಿಕೆಯಿಂದ ತಿಂದರಷ್ಟೇ ನಮ್ಮ ಆರೋಗ್ಯ ವೃದ್ಧಿಯಾಗಲಿದೆ ಎನ್ನುವುದು ಸಹ ಸತ್ಯ. ಆದರೆ ನಾವೆಷ್ಟು ಜನ ಹೀಗೆ ಎಚ್ಚರಿಕೆಯಿಂದ ಇರುತ್ತೇವೆ?
ಎಷ್ಟೋ ಮಂದಿ ಊಟ, ತಿಂಡಿ ಮಾಡುವ ವೇಳೆ ಊಟದ ವಿಷಯ ಬಿಟ್ಟು ಬೇರೆ ಎಲ್ಲಾ ವಿಷಯದ ಕಡೆಗೆ ಗಮನ ಹರಿಸಿರುತ್ತಾರೆ. ಹೆಚ್ಚಿನ ಜನರು ಬೇರೆ ಕೆಲಸಗಳನ್ನು ಮಾಡುತ್ತಲೇ ಊಟ, ತಿಂಡಿ ಮುಗಿಸುವುದೂ ಇದೆ. ನಗರ ಪ್ರದೇಶದಲ್ಲಿ ವಾಸಿಸುವ ಮಕ್ಕಳು ಊಟ, ತಿಂಡಿ ಮಾಡುವ ವೇಳೆ ಹೆಚ್ಚಾಗಿ ಟಿವಿ ನೋಡುತ್ತಾ ಇರುವುದು ಸಾಮಾನ್ಯ. ಹೀಗೆ ತಿನ್ನುವ ನಡವಳಿಕೆ ಮುಂದಿನ ದಿನಗಳಲ್ಲಿ ಆ ಮಕ್ಕಳು ಮಧುಮೇಹ, ಸ್ಥೂಲಕಾಯದಂತಹ ಅನೇಕ ದೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾದಂತಾಗುತ್ತದೆ. ಹಿರಿಯರು ಸಹ ಊಟದ ಟೇಬಲ್ ಮೇಲೆ ತಮ್ಮ ಮೊಬೈಲ್ ಇಟ್ಟು ಊಟ ಮಾಡುತ್ತಾರೆ. ಹೀಗೆ ಊಟ ಮಾಡುವ ವೇಳೆ ತಿನ್ನುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತೇವೆ.
ದಿನಕ್ಕೆ ಮೂರು ಹೊತ್ತು ತಿನ್ನಲು ಒಮ್ಮೆಗೆ ಹತ್ತು ನಿಮಿಷದಂತೆ 30 ನಿಮಿಷಗಳಷ್ಟೇ ಸಾಕಲ್ಲವೆ. ದಿನಕ್ಕೆ ಊಟ ತಿಂಡಿಗಾಗಿ ಕೇವಲ 30 ನಿಮಿಷ ಬಳಸಲು ನಾವು ತಯಾರಿಲ್ಲ. ಯಾವುದೋ ಸಮಯಕ್ಕೆ ತಿನ್ನುವುದು, ರಾತ್ರಿ ತಡವಾಗಿ ಊಟ ಮಾಡುವುದು ಈ ಎಲ್ಲವೂ ಒಂದಲ್ಲ ಒಂದು ಹಂತದಲ್ಲಿ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಒಂದು ವೇಳೆ ನೀವು ದೇಹಕ್ಕೆ ಬೇಕಾದ ಎಲ್ಲಾ ಪೌಷ್ಟಿಕಾಂಶ ಒದಗಿಸಬಲ್ಲ ಉತ್ತಮ ಆಹಾರ ತಿನ್ನುತ್ತಿದ್ದರೂ ಸಹ ಸರಿಯಾದ ಕ್ರಮದಲ್ಲಿ ತಿನ್ನದೆ ಹೋದರೆ ಇದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂದೇಹವಿಲ್ಲ.
ಊಟ ಮಾಡುವಾಗ ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಒಟ್ಟಿಗೆ ಕುಳಿತು ಊಟ ಮಾಡಬೇಕು. ಆಗ ಆರೋಗ್ಯಯುತ ದೇಹವನ್ನು ಪಡೆಯುವುದರೊಂದಿಗೆ ಕುಟುಂಬದಲ್ಲಿ ಶಾಂತಿ ಹಾಗೂ ನೆಮ್ಮದಿ ಬೆಳೆಯಲು ಸಹಕಾರಿಯಾಗುತ್ತದೆ.
ಬೆಳಗಿನ ಉಪಹಾರದ ವೇಳೆ ಪತ್ರಿಕೆ ಓದುವುದು ಸಹ ನಮ್ಮ ಹವ್ಯಾಸವಾಗಿದೆ. ಡೈನಿಂಗ್ ಟೇಬಲ್ ಮೇಲೆ ಮೊಬೈಲ್ ಬಳಕೆ ಮಾಡುವುದಕ್ಕಿಂತ ಇದು ತುಸು ಭಿನ್ನವಾಗಿದೆ. ಇನ್ನು ಆಧುನಿಕ ಜೀವನಶೈಲಿಯಲ್ಲಿ ನಮ್ಮ ಕೆಲಸದ ಸ್ಥಳದಲ್ಲೇ ಕಂಪ್ಯೂಟರ್ ನೋಡುತ್ತಲೋ, ಸಿನಿಮಾ ವೀಕ್ಷಿಸುತ್ತ ಲೋಟ, ತಿಂಡಿಗಳನ್ನು ಮುಗಿಸುವುದು ಸಾಮಾನ್ಯ. ನಾವು ಪ್ರಯಾಣಿಸುವ ವೇಳೆ ಸಹ ಚಿಪ್ಸ್ ತರಹದ ತಿಂಡಿಗಳನ್ನು ತಿನ್ನುತ್ತೇವೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಹಲವಾರು ಪರಣಾಮಗಳು ಬೀರುತ್ತಿದೆ.
ಊಟ-ತಿಂಡಿ ವೇಳೆ ಅನುಸರಿಸಬೇಕಾದ ಕ್ರಮಗಳಿವು:
- ಡೈನಿಂಗ್ ಟೇಬಲ್ ಮುಂದೆ ಕುರ್ಚಿಯಲ್ಲಿ ಕುಳಿತು ಊಟ ಮಾಡಿರಿ, ಸೋಫಾ ಆಗಲಿ, ಮೃದುವಾದ ಆಸನಗಳನ್ನು ಬಳಸುವುದು ಬೇಡ.
- ಆಹಾರದ ಪರಿಮಳ, ಬಣ್ಣ, ಇವುಗಳಿಗೆ ಗಮನ ನೀಡಲು ಮೊದಲಿಗೆ ಚಿಕ್ಕ ಪ್ರಮಾಣದಲ್ಲಿ ಆಹಾರವನ್ನು ತಿನ್ನಿ. ಇದು ನಿಮ್ಮ ದೇಹದ
- ಪಂಚೇಂದ್ರಿಯಗಳೂ ತಿನ್ನುವ ಆಹಾರದ ಮೇಲೆ ಕೇಂದ್ರೀಕರಣಗೊಳ್ಳುವಂತೆ ಮಾಡುತ್ತದೆ.
- ಊಟ, ತಿಂಡಿ ಮಾಡುವ ವೇಳೆ ಮೊಬೈಲ್’ನಿಂದ ದೂರವಿರಿ, ಟಿವಿಯನ್ನು ನೋಡದಿರುವುದು ಇನ್ನೂ ಒಳಿತು.
- ಗಡಿಬಿಡಿಯಾಗಿ ಊಟ ಮುಗಿಸುವುದು ಸರಿಯಾದ ಅಭ್ಯಾಸವಲ್ಲ. ಊಟದ ವೇಳೆ ವಾದ, ವಿವಾದಗಳು ಬೇಡ.
- ಪ್ರತಿದಿನವೂ ಸರಿಯಾದ ಸಮಯಕ್ಕೆ ಊಟ ಮಾಡಿರಿ. ದಿನದಿನವೂ ಊಟದ ಸಮಯದಲ್ಲಿ ವ್ಯತ್ಯಾಸವಾಗುವುದು ಬೇಡ.
- ಮನಸ್ಸಿಗೆ ತೃಪ್ತಿಯಾಗುವಷ್ಟು ಮಾತ್ರ ಊಟ ಮಾಡಿ. ಹೊಟ್ಟೆ ಬಿರಿಯುವಷ್ಟು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
Discussion about this post