ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಪ್ರಭಾರ ಅಧ್ಯಕ್ಷ ಚನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯ ಆರಂಭದಲ್ಲಿ ಜೆಡಿಎಸ್ ಸದಸ್ಯರು 15ನೇ ಹಣಕಾಸು ಅನುದಾನವನ್ನು ಎಲ್ಲಾ ೩೫ ವಾರ್ಡ್‌ಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡುವಂತೆ ಆಗ್ರಹಿಸಿ ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಜೆಡಿಎಸ್ ಸದಸ್ಯ ಬಸವರಾಜ ಬಿ. ಆನೇಕೊಪ್ಪ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ನಗರಸಭೆ 15ನೇ ಹಣಕಾಸು ಯೋಜನೆಯಡಿ 35 ವಾರ್ಡ್ ಗಳಿಗೂ ಸಮಾನವಾಗಿ ಅನುದಾನ ಬಿಡುಗಡೆಗೊಳಿಸಬೇಕು. ಆದರೆ ಕಾಂಗ್ರೆಸ್ ಪಕ್ಷದ ಸದಸ್ಯರ ವಾರ್ಡ್‌ಗಳಿಗೆ ಮಾತ್ರ ಹೆಚ್ಚಿನ ಅನುದಾನ ಬಿಡುಗೊಳಿಸುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಉಳಿದ ಜೆಡಿಎಸ್ ನಗರಸಭಾ ಸದಸ್ಯರು ತಾರತಮ್ಯ ನೀತಿ ತಕ್ಷಣ ಸರಿಪಡಿಸುವಂತೆ ಆಗ್ರಹಿಸಿ ಧರಣಿ ನಡೆಸಿದರು. ಈ ನಡುವೆ ಕಾಂಗ್ರೆಸ್ ಸದಸ್ಯ ಬಿ.ಕೆ ಮೋಹನ್ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯರು ಸಭೆ ಸುಗಮವಾಗಿ ನಡೆಯಲು ಅವಕಾಶ ನೀಡದೆ ಪ್ರದರ್ಶನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ಹೇಳಿಕೆ ನೀಡುವ ಮೂಲಕ ಧರಣಿನಿರತರು ಅದರಲ್ಲೂ ಮಹಿಳಾ ಸದಸ್ಯರು ಮತ್ತಷ್ಟು ಆಕ್ರೋಶಗೊಳ್ಳಲು ಕಾರಣರಾದರು. ಈ ನಡುವೆ ಬಿ.ಕೆ ಮೋಹನ್ ಅಜೆಂಡಾದಲ್ಲಿರುವ ಪ್ರಸ್ತಾವನೆಗಳನ್ನು ಪಾಸ್ ಮಾಡುವಂತೆ ಮತ್ತೊಂದು ಹೇಳಿಕೆ ನೀಡಿದ್ದು, ಈ ಹಿನ್ನಲೆಯಲ್ಲಿ ಜೆಡಿಎಸ್ ಸದಸ್ಯೆ ವಿಜಯ ಅವರು ಆಕ್ರೋಶಗೊಂಡು ಅಧ್ಯಕ್ಷರು ಮತ್ತು ಆಯುಕ್ತರಿಗೆ ಧಿಕ್ಕಾರ ಹಾಕಿದರು.
ಅಧ್ಯಕ್ಷ ಚನ್ನಪ್ಪ ಧರಣಿ ನಿರತ ಜೆಡಿಎಸ್ ಸದಸ್ಯರಿಗೆ ತಮ್ಮ ಸ್ಥಳಗಳಿಗೆ ತೆರಳಿದರೆ ಉತ್ತರಿಸುವುದಾಗಿ ತಿಳಿಸಿದ್ದು, ಈ ಹಿನ್ನಲೆಯಲ್ಲಿ ತಮ್ಮ ಸ್ಥಳಿಗಳಿಗೆ ತೆರಳಿದರು. ಆದರೂ ಉತ್ತರಿಸುವಲ್ಲಿ ವಿಳಂಬ ಮಾಡಿದ ಹಿನ್ನಲೆಯಲ್ಲಿ ಪುನಃ ೨ನೇ ಬಾರಿಗೆ ಪ್ರತಿಭಟನೆಗೆ ಮುಂದಾದರು. ಅಂತಿಮವಾಗಿ ಅನುದಾನ ನೀಡುವ ಭರವಸೆ ನೀಡಲಾಯಿತು.
ಇದಕ್ಕೂ ಮೊದಲು ಈ ಬಾರಿ 9 ದಿನಗಳ ಕಾಲ ನಾಡಹಬ್ಬ ದಸರಾ ಆಚರಣೆ ಅದ್ದೂರಿಯಾಗಿ ಆಚರಿಸುವ ಸಂಬಂಧ ಮೆಸ್ಕಾಂ, ಪೊಲೀಸ್ ಹಾಗು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ದಸರಾ ಹಬ್ಬ ಆಚರಣೆಯಲ್ಲಿ ಶಾಲಾ ಮಕ್ಕಳ ಪಾಲ್ಗೊಳ್ಳುವಿಕೆ, ವಿದ್ಯುತ್ ದೀಪ ಅಳವಡಿಕೆ ಹಿನ್ನಲೆಯಲ್ಲಿ ಯಾವುದೇ ದುರ್ಘಟನೆ ನಡೆಯದಂತೆ ಮುನ್ನಚ್ಚರಿಕೆವಹಿಸುವುದು. ದಸರಾ ಮೆರವಣಿಗೆಯಲ್ಲಿ ಪೊಲೀಸ್ ಹಾಗು ಆರ್‌ಎಎಫ್ ಸಿಬ್ಬಂದಿಗಳಿಂದ ಪಥಸಂಚನ ನಡೆಸುವುದು ಇತ್ಯಾಧಿ ವಿಷಯ ಕುರಿತು ಚಿರ್ಚಿಸಲಾಯಿತು.
Also read: ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಡಿಸಿ ಡಾ. ಸೆಲ್ವಮಣಿ ಸೂಚನೆ
ಕಸ ವಿಲೇವಾರಿಗೆ ಒದಗಿಸಲಾಗಿದ್ದ ವಾಹನದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ನಗರಸಭೆ ವತಿಯಿಂದ ಪರಿಹಾರ ನೀಡಲು ಆದೇಶವಾಗಿರುವ ಹಿನ್ನಲೆಯಲ್ಲಿ ಸಲ್ಲಿಕೆಯಾದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಸದಸ್ಯರು ಮಾತನಾಡಿ, ನಗರಸಭೆಯಲ್ಲಿ ಕಸವಿಲೇವಾರಿಗೆ ಬಳಸುತ್ತಿರುವ ವಾಹನಗಳು ಚಾಲನಾ ಪರವಾನಗಿ, ವಿಮೆ ಸೇರಿದಂತೆ ಅಗತ್ಯವಿರುವ ಸಮರ್ಪಕವಾದ ದಾಖಲಾತಿಗಳನ್ನು ಹೊಂದಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ದಾಖಲಾತಿಗಳು ಇಲ್ಲದಿದ್ದಲ್ಲಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತ ಮನುಕುಮಾರ್ ದಾಖಲಾತಿಗಳ ಪರಿಶೀಲನೆ ಹಾಗು ಅಗತ್ಯ ಕ್ರಮ ಕೈಗೊಳ್ಳಲು 50ಲಕ್ಷ ರು. ಅನುದಾನ ಮೀಸಲಿಡಲಾಗಿದೆ. ಶೀಘ್ರದಲ್ಲಿಯೇ ವಾಹನಗಳ ದಾಖಲಾತಿ ಪರಿಶೀಲನೆ ನಡೆಯಲಿದೆ ಎಂದರು.
ಸದಸ್ಯರೊಬ್ಬರು ಮಾತನಾಡಿ, ಒಟ್ಟು 35 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕೇವಲ ಒಂದೇ ಒಂದು ಮುಕ್ತಿವಾಹನವಿದೆ. ಇದರಿಂದಾಗಿ ಸಮಸ್ಯೆ ಎದುರಾಗಿದೆ ಈ ಹಿನ್ನಲೆಯಲ್ಲಿ ಇನ್ನೊಂದು ಮುಕ್ತಿವಾಹಿನಿ ವಾಹನ ಖರೀದಿಸುವಂತೆ ಮನವಿ ಮಾಡಿದರು. ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಹಳೇನಗರದ ಕನಕಮಂಟಪ ಮೈದಾನದಲ್ಲಿ ಮಹಿಳೆಯರಿಗಾಗಿ ಇನ್ನೊಂದು ಶೌಚಾಲಯದ ಅಗತ್ಯವಿದ್ದು, ಯಾವುದಾದರೂ ಅನುದಾನದಲ್ಲಿ ಶೌಚಾಲಯ ನಿರ್ಮಿಸುವಂತೆ ಒತ್ತಾಯಿಸಿದರು.
ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ಇನ್ನಿತರ ಸದಸ್ಯರು ಮಾತನಾಡಿ, ನಗರಸಭೆ ಅಧಿಕಾರಿಗಳು ಸದಸ್ಯರಿಗೆ ಸರಿಯಾಗಿ ಗೌರವ ನೀಡುತ್ತಿಲ್ಲ. ಸದಸ್ಯರು ನೀಡುವ ಅರ್ಜಿಗಳಿಗೂ ಸಹ ಯಾವುದೇ ಬೆಲೆ ಇಲ್ಲದಂತೆ ವರ್ತಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಒಟ್ಟು 20 ಪ್ರಸ್ತಾವನೆಗಳ ಕುರಿತು ಚರ್ಚಿಸಲಾಯಿತು. ಬಹುತೇಕ ಪ್ರಸ್ತಾವನೆಗಳಿಗೆ ಒಪ್ಪಿಗೆ ಸೂಚಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post