ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಡಿಜೆ ಬಳಸಲು ನಮಗೂ ಇಷ್ಟವಿದೆ ಆದರೆ ಸುಪ್ರೀಂ ಕೋರ್ಟ್ ಆದೇಶ ಎಲ್ಲರೂ ಪಾಲಿಸಬೇಕಾಗಿದೆ. ಹಿನ್ನೆಲೆಯಲ್ಲಿ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮನವಿ ಮಾಡಿದರು.
ಅವರು ಸೋಮವಾರ ನಗರದ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಿಜೆ ಅಂದರೆ ಎಲ್ಲರಿಗೂ ಇಷ್ಟ. ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಅವಧಿಯಲ್ಲಿ ಸಂಭ್ರಮಿಸಿದ್ದೇನೆ. ಆದರೆ ಸುಪ್ರೀಂ ಕೋರ್ಟ್ ಆದೇಶಕ್ಕೆ ನಾವೆಲ್ಲರೂ ತಲೆಬಾಗಬೇಕಾಗಿದೆ. ಈ ಬಾರಿ ಗಣೇಶೋತ್ಸವಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.

ಸಣ್ಣಪುಟ್ಟ ಸಮಸ್ಯೆಗಳು ಸಹಜ. ಅವುಗಳನ್ನು ಅಲ್ಲಿಯೇ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಜಾಣ್ಮೆ ಪ್ರದರ್ಶಿಸಬೇಕು. ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಕಠಿಣ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇದನ್ನು ಯಾರು ಸಹ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಇಂತಹ ಸಂದರ್ಭದಲ್ಲಿ ನಮ್ಮ ಮನಸ್ಸಿಗೂ ತುಂಬಾ ನೋವಾಗುತ್ತದೆ. ಜನರು ಕಠಿಣ ಸಂದರ್ಭದಲ್ಲೂ ಹೆಚ್ಚಿನ ಸಹಕಾರ ನೀಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ನಾನು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಎಲ್ಲರೂ ಶಾಂತಿ-ನೆಮ್ಮದಿಯಿಂದ ಬದುಕುವ ವಾತಾವರಣ ಕಲ್ಪಿಸಿ ಕೊಡುವುದು ನನ್ನ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಎಲ್ಲರೂ ಹಬ್ಬವನ್ನು ಸಂಭ್ರಮದಿಂದ ಶಾಂತಿ-ಸೌಹಾರ್ದತೆಯಿಂದ ಆಚರಿಸುವಂತೆ ಮನವಿ ಮಾಡಿದರು.

50 ವರ್ಷಗಳಿಂದ ಶಾಂತಿಯುತವಾಗಿ ಆಚರಣೆ:
ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ವತಿಯಿಂದ ಕಳೆದ 50 ವರ್ಷಗಳಿಂದ ಹಬ್ಬವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಭೆಯಲ್ಲಿ ಸಮಿತಿ ಅಧ್ಯಕ್ಷ, ಹಿರಿಯ ನಗರಸಭಾ ಸದಸ್ಯ ಕೆ. ಕದಿರೇಶ್ ಸ್ಪಷ್ಟಪಡಿಸಿದರು.

Also read: ಅತಿವೃಷ್ಟಿಯಿಂದ ಬಹಳಷ್ಟು ಬೆಳೆ ಹಾನಿ: ರಾಷ್ಟ್ರೀಯ ವಿಪತ್ತು ಘೋಷಣೆಗೆ ರೈತ ಸಂಘ ಒತ್ತಾಯ
ವಿನಾಕಾರಣ ವ್ಯಾಪಾರಸ್ಥರಿಗೆ ತೊಂದರೆ :
ಪ್ರತಿಯೊಂದು ಘಟನೆ ಸಂದರ್ಭದಲ್ಲೂ ವಿನಾಕಾರಣ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸುವುದು ಸರಿಯಲ್ಲ. ಇದರಿಂದಾಗಿ ವ್ಯಾಪಾರಸ್ಥರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಎಂ.ಎಸ್ ಜನಾರ್ಧನ ಅಯ್ಯಂಗಾರ್ ಅಳಲು ವ್ಯಕ್ತಪಡಿಸಿದರು.

ಕಿಡಿಗೇಡಿಗಳು ಯಾರೇ ಇರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಿ :
ಎಲ್ಲಾ ಹಬ್ಬಗಳನ್ನು ಇಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಒಗ್ಗಟ್ಟಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಕೆಲವು ಕಿಡಿಗೇಡಿಗಳಿಂದ ಸಣ್ಣ-ಪುಟ್ಟ ಗಲಾಟೆಗಳು ನಡೆಯುತ್ತಿದ್ದು, ಅಂತಹ ಕಿಡಿಗೇಡಿಗಳು ಯಾರೇ ಇರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಸ್ಲಿಂ ಸಮುದಾಯದ ಮುಖಂಡರಾದ ಫೀರ್ ಷರೀಫ್, ಅಮೀರ್‌ಜಾನ್ ಸೇರಿದಂತೆ ಇನ್ನಿತರರು ಆಗ್ರಹಿಸಿದರು.

ಜಿಲ್ಲೆಯಲ್ಲಿರುವ ಪ್ರಮುಖ ರಾಜಕಾರಣಿಗಳ ಸಭೆ ನಡೆಸಿ :
ಜಿಲ್ಲೆಯಲ್ಲಿರುವ ಕೆಲವು ರಾಜಕಾರಣಿಗಳು ಘಟನೆಗಳನ್ನು ದುರ್ಬಳಕೆ ಮಾಡಿಕೊಂಡು ವಿನಾಕಾರಣ ಹೇಳಿಕೆ ನೀಡುವ ಮೂಲಕ ಜನರನ್ನು ಪ್ರಚೋದನೆಗೊಳಿಸುತ್ತಿದ್ದಾರೆಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಆರೋಪಿಸಿದರು.
ಘಟನೆಯನ್ನು ನೋಡದಿದ್ದರೂ, ಘಟನಾ ಸ್ಥಳದಲ್ಲಿ ಇರದಿದ್ದರೂ ಸಹ ಬೇಕಾಬಿಟ್ಟಿಯಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ಗಲಭೆಗಳು ಹೆಚ್ಚಾಗುತ್ತಿವೆ. ರಾಜಕೀಯ ಲಾಭಕ್ಕಾಗಿ ಜನರ ಬದುಕನ್ನು ಸಂಕಷ್ಟಕ್ಕೆ ತಳ್ಳುವುದು ಸರಿಯಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲರೂ ಬದ್ಧತೆಯಿಂದ ನಡೆದುಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ ಪ್ರಮುಖ ರಾಜಕಾರಣಿಗಳ ಸಭೆ ನಡೆಸಿ ಅವರಿಗೆ ಶಾಂತಿ ಸೌಹಾರ್ದತೆ ಕಾಪಾಡಲು ಮನವರಿಕೆ ಮಾಡಿಕೊಡಬೇಕೆಂದು ಕೋರಿದರು.

ವಿವಿಧ ಧರ್ಮಗಳ ಪ್ರಮುಖರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರಮುಖರು, ಪೊಲೀಸ್ ವೃತ್ತ ನಿರೀಕ್ಷಕರು, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ನಗರಸಭೆ, ಮೆಸ್ಕಾಂ, ಅರಣ್ಯ ಹಾಗು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.









Discussion about this post