ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ಜಿಲ್ಲೆಯ ಮತದಾರರು ತಮ್ಮ ಚುನಾವಣಾ ಗುರುತಿನ ಚೀಟಿಯ ಸಂಖ್ಯೆಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎನ್. ಎಮ್. ನಾಗರಾಜ್ Chikkaballapura DC N M Nagaraj ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ಬುಧವಾರ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಚುನಾವಣಾ ಸುಧಾರಣೆಗಳು ಹಾಗೂ ಮತದಾರರ ಗುರುತಿನ ಚೀಟಿಗೆ (ಎಪಿಕ್) ಆಧಾರ್ ಜೋಡಣೆಯ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಎಪಿಕ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಮತದಾರರು ಸಹ ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಗೆ ಲಿಂಕ್ ಮಾಡಬೇಕು. ಅದನ್ನು ಮತದಾರರು ನಮೂನೆ 6 (ಬಿ) ಯಲ್ಲಿ ವೆಬ್ ಸೈಟ್ www.nvsp.in ಮೂಲಕ ಅಥವಾ ವೋಟರ್ ಹೆಲ್ಪ್ ಲೈನ್ ಆಪ್(ವಿ.ಎಚ್.ಎ), ಗರುಡ ಆಪ್ ಹಾಗೂ ಬೂತ್ ಮಟ್ಟದ ಅಧಿಕಾರಿಗಳಿಗೆ ಆಧಾರ್ ಸಂಖ್ಯೆ ನೀಡಿ ಚುನಾವಣಾ ಗುರುತಿನ ಚೀಟಿಗೆ ಅದನ್ನು ಜೋಡಣೆ ಮಾಡಬಹುದಾಗಿದೆ. ಇದು ಆನ್ ಲೈನ್ ನಲ್ಲಿ ಮಾಡುವುದರಿಂದ ಶೀಘ್ರ ಹಾಗೂ ಅತಿ ಸುರಕ್ಷಿತವಾಗಿ ಜೋಡಣೆ ಮಾಡುವ ಪ್ರಕ್ರಿಯೆಯಾಗಿದೆ ಆದ್ದರಿಂದ ಹೆಚ್ಚು ಜನರು ಒಂದೆಡೆ ಸೇರುವ ಕಾರ್ಖಾನೆಗಳು, ಕಚೇರಿಗಳು ಮತ್ತು ಕಾಲೇಜುಗಳಲ್ಲಿ ಆದ್ಯತೆಯ ಮೇರೆಗೆ VHA ಆಪ್ ಮೂಲಕ ಸ್ಥಳದಲ್ಲೇ ಜೋಡಣೆ ಮಾಡಿಸಲು ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಯೊಂದಿಗೆ ಇಂದಿನಿಂದಲೇ ಕಾರ್ಯ ಮಗ್ನರಾಗಬೇಕು ಎಂದು ಹೇಳಿದರು.

Also read: ಸಕಲರ ಒಳಿತಿಗಾಗಿ ರಾಯರಲ್ಲಿ ಪ್ರಾರ್ಥಿಸಿದ್ದೇವೆ: ಮಂತ್ರಾಲಯದಲ್ಲಿ ಸಂಸದ ರಾಘವೇಂದ್ರ ಹೇಳಿಕೆ
ಯುವಜನರು ಮತದಾನದಿಂದ ವಂಚಿತರಾಗದಂತೆ ಕ್ರಮ
VHA ಆಪ್ ಮೂಲಕ ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನ ಹಾಗೂ ಅನುದಾನರಹಿತ ಕಾಲೇಜುಗಳಲ್ಲಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಹೊಸ ಎಪಿಕ್ ಕಾರ್ಡ್ ನ್ನು ಮಾಡಿಸಿಕೊಳ್ಳಬೇಕು. ಈಗಾಗಲೇ ಎಪಿಕ್ ಹೊಂದಿರುವವರು ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕು. ಇದಕ್ಕೆ ಆಯಾ ಕಾಲೇಜಿನ ಪ್ರಾಂಶುಪಾಲರು ವಿಶೇಷ ಸಮಯಾವಕಾಶ ನೀಡಬೇಕು. ಜೊತೆಗೆ ಈ ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಪ್ರಾಂಶುಪಾಲರಿಗೆ ಸೂಚಿಸಿದರು.
ಯಾವುದೇ ಕಾರಣಕ್ಕೂ ಯುವಜನರು ಚುನಾವಣೆಯ ಮತದಾನದಿಂದ ವಂಚಿತರಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ವೀಪ್ ಕಾರ್ಯಕ್ರಮಗಳ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸುವ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಹಾಗೂ ಸಾರ್ವಜನಿಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಡಯಟ್ ಪ್ರಾಂಶುಪಾಲರು ಹಾಗೂ ನೋಡಲ್ ಪದವಿ ಕಾಲೇಜಿನ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯ ಎಲ್ಲಾ ಕಾಲೇಜುಗಳಲ್ಲಿ ಇ.ಎಲ್.ಸಿ ಕ್ಲಬ್ ಗಳನ್ನು ರಚಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಬೇಕು. ಮತದಾರರಿಗೆ ಮತದಾರರ ಪಟ್ಟಿಯ ಪರಿಷ್ಕರಣೆ-2022 ಮತ್ತು ಆಧಾರ್ ಜೋಡಣೆ ಕುರಿತು ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ನಗರಸಭೆ ವ್ಯಾಪ್ತಿಯಲ್ಲಿನ ತ್ಯಾಜ್ಯ ವಿಲೇವಾರಿ ವಾಹನಗಳ ಮುಖಾಂತರ ಜಾಗೃತಿ ಆಡಿಯೋ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಎಲ್ಲಾ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜುಗಳ ಪ್ರಾಂಶುಪಾಲರು, ಚುನಾವಣೆ ಶಾಖೆಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.










Discussion about this post