ಕಲ್ಪ ಮೀಡಿಯಾ ಹೌಸ್ | ದಾವಣಗೆರೆ |
ಗಣೇಶೋತ್ಸವವು ಸಾರ್ವಜನಿಕವಾಗಿ ಆಚರಿಸುವ ಹಬ್ಬವಾಗಿದೆ, ಶಾಂತಿ, ಸೌಹಾರ್ದತೆ ಕಾಪಾಡುವ ಜೊತೆಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ಸ್ಥಾಪಿಸಿ ಹಬ್ಬವನ್ನು ಆಚರಿಸಬೇಕೆಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೆÇಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಗೌರಿ ಗಣೇಶ ಚತುರ್ಥಿ ಪ್ರಯುಕ್ತ ಆಯೋಜಿಸಲಾಗಿದ್ದ ‘ನಾಗರಿಕ ಸೌಹಾರ್ದ ಸಮನ್ವಯ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶೋತ್ಸವ ಆಚರಿಸುವ ಸಂಘ-ಸಂಸ್ಥೆಗಳು ಸರ್ಕಾರದ ಸುತ್ತೋಲೆಯ ಅಂಶಗಳನ್ನು ಪಾಲಿಸುವ ಮೂಲಕ ಹಬ್ಬವನ್ನು ಆಚರಿಸಬೇಕು. ಸಾರ್ವಜನಿಕ ಸುರಕ್ಷತೆ ಹಾಗೂ ಪರಿಸರ ಮಾಲಿನ್ಯ ಉಂಟಾಗದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಹಿಂದಿನ ವರ್ಷಗಳಲ್ಲಿ ನಡೆದಂತೆ ಪ್ರಸಕ್ತ ವರ್ಷದಲ್ಲಿ ಕೂಡ ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ಹಬ್ಬ ಆಚರಿಸಲು ಮುಂದಾಗಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾತನಾಡಿ, ಪರವಾನಿಗೆ ಪಡೆಯದೆ ಗಣೇಶ ಪ್ರತಿಷ್ಟಾಪಿಸಲು ಅವಕಾಶ ಇಲ್ಲ. ಆದ್ದರಿಂದ ಆಯೋಜಕರು ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು. ಫ್ಲೆಕ್ಸ್ ಬಳಕೆಗೆ ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯದೆ ಅಳವಡಿಸಬಾರದು. ವಿಸರ್ಜನೆ ಸ್ಥಳದಲ್ಲಿ ಈಜು ಬಾರದವರು ನೀರಿಗೆ ಇಳಿಯಬಾರದು, ಈಜು ಬರುವವರಿಗೆ ಮಾತ್ರ ಇಳಿಯಲು ಅವಕಾಶ ನೀಡಬೇಕು. ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಸಮಿತಿ ಮೇಲೆ ಇರುತ್ತದೆ ಎಂದರು.
ಬೃಹತ್ ಗಣಪತಿ ಪ್ರತಿಷ್ಟಾಪಿಸುವ ಸಂಘ-ಸಂಸ್ಥೆಗಳು ಮೆರವಣಿಗೆ ಮಾರ್ಗದಲ್ಲಿ ವಿದ್ಯುತ್ ಲೈನ್, ಮರಗಳ ಕುರಿತು ಪೂರ್ವ ವೀಕ್ಷಣೆ ನಡೆಸಬೇಕು. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾದಾಗ ಸಮಸ್ಯೆಗಳು ಉದ್ಭವಿಸುವ ಸಂಭವವಿರುತ್ತದೆ, ಆದ್ದರಿಂದ ಪರ್ಯಾಯವಾಗಿ ಜನರೇಟರ್ ಅನ್ನು ಬಳಕೆ ಮಾಡಬೇಕು. ಜವಾಬ್ದಾರಿತಯುತ ಸ್ವಯಂ ಸೇವಕರನ್ನು ನೇಮಿಸಿ ಅವರಿಗೆ ಗುರುತಿನ ಚೀಟಿ ನೀಡಬೇಕು ಹಾಗೂ ಅವರ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ನಿಗದಿ ಪಡಿಸಿದ ಡೆಸಿಬಲ್ ಹೊಂದಿರುವ ಧ್ವನಿವರ್ಧಕಗಳನ್ನು ಬಳಸಲು ಅವಕಾಶವಿದೆ. ಈ ಕುರಿತು ಸಮಿತಿಯವರು ಸಹಕಾರ ನೀಡಬೇಕು ಎಂದು ಹೇಳಿದರು.

ಮಹಾನಗರ ಪಾಲಿಕೆ ಅಧಿಕಾರಿ ಸಂತೋಷ್ ಮಾತನಾಡಿ, ಗಣೇಶ್ ಹಬ್ಬ ಆಚರಣೆ ಸಂದರ್ಭದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯದ ಜೊತೆಗೆ ಪರಿಸರ ಕಾಳಜಿಯೂ ಮುಖ್ಯ. ಗಣೇಶ ವಿಸರ್ಜನೆಗೆ ನಗರದ ಬಾತಿಕೆರೆ ಮತ್ತು ಹದಡಿ ರಸ್ತೆಗಳಲ್ಲಿ ತಾತ್ಕಾಲಿಕ ಗುಂಡಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮನೆಗಳಲ್ಲಿ ಪ್ರತಿಷ್ಟಾಪಿಸುವ ಗಣಪತಿ ವಿಸರ್ಜನೆಗೆ ಮೊಬೈಲ್ ಟ್ಯಾಂಕ್ ಮೂಲಕ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಾಗಿ ಗಣಪತಿ ಪ್ರತಿಷ್ಟಾಪಿಸಿರುವ ಕಡೆಗಳಲ್ಲಿ ವಿಸರ್ಜನೆಗಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಹರಿಹರದ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಕೋವಿಡ್ ಕಾರಣಕ್ಕಾಗಿ ಕಳೆದು ಎರಡು ವರ್ಷದಿಂದ ಗಣೇಶೋತ್ಸವವನ್ನು ಆಚರಿಸಲು ಸಾಧ್ಯವಾಗಿಲ್ಲ. ಪ್ರಸಕ್ತ ವರ್ಷದಲ್ಲಿ ಶಾಂತಿಯುತವಾಗಿ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಹರಿಹರದಲ್ಲಿ ಗಣೇಶ ವಿಸರ್ಜನೆಯ ದಿನ ಮುಸ್ಲಿಂ ಸಮುದಾಯದಿಂದ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದರು.

Also read: ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಬಳಸಿ: ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್
ನಗರದ ಹೈಸ್ಕೂಲ್ ಮೈದಾನದ ಹಿಂದೂ ಮಹಾ ಗಣಪತಿ ಸಮಿತಿಯ ಈಶ್ವರ್ ಶಿಂಧೆ ಮಾತನಾಡಿ, ಹೈಸ್ಕೂಲ್ ಮೈದಾನದಲ್ಲಿ ಕಳೆದ 5 ವರ್ಷಗಳಿಂದ ಗಣೇಶೋತ್ಸವವನ್ನು ಆಚರಿಸಕೊಂಡು ಬರಲಾಗುತ್ತಿದೆ. ಈ ವರ್ಷ ಸಿರಿಗೆರೆ ಮಠದ ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಪ್ರತಿμÁ್ಠಪನೆಯ ದಿನ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಪ್ರತಿನಿತ್ಯ 10 ರಿಂದ 15 ಸಾವಿರ ಭಕ್ತರು ದರ್ಶನಕ್ಕೆ ಆಗಮಿಸುವ ಸಂಭವವಿದೆ. ಆದ್ದರಿಂದ ಸೂಕ್ತ ಬಂದೋಬಸ್ತ್ ಒದಗಿಸಲು ತಾತ್ಕಾಲಿಕ ಪೊಲೀಸ್ ಠಾಣೆ ಸ್ಥಾಪಿಸಬೇಕು. ಬೆಸ್ಕಾಂ ವತಿಯಿಂದ ನಿರಂತರ ವಿದ್ಯುತ್ ಪೂರೈಕೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಪ್ರಸಾದ ಸಂದರ್ಭದಲ್ಲಿ ಕುಡಿಯುವ ನೀರು ಒದಗಿಸಲು ಸೂಚನೆ ನೀಡಬೇಕು. ವಿಸರ್ಜನೆಯ ದಿನದ ಶೋಭಾಯಾತ್ರೆಗೆ 8 ರಿಂದ 10 ಲಕ್ಷ ಜನ ಬರುವ ಸಾಧ್ಯತೆ ಇದೆ. ಯಾವುದೇ ಕಪ್ಪುಚುಕ್ಕೆ ಬಾರದಂತೆ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಲು ಸೂಕ್ತ ಪೆÇಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಮಾತನಾಡಿ, ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕಾಗಿದೆ. ನಗರದ ಹೊರವಲಯದ ಚಾನೆಲ್, ಕೆರೆಗಳಲ್ಲಿ ಗಣಪತಿಯನ್ನು ವಿಸರ್ಜಿಸುವುದನ್ನು ನಿಷೇಧಿಸಬೇಕು. ಏಕೆಂದರೆ ಈ ರೀತಿಯ ಪ್ಲಾಸ್ಟಿಕ್ ರಾಸಾಯನಿಕ ಮಿಶ್ರಿತ ನೀರು ಬಳಸುವುದರಿಂದ ಅನೇಕ ಮಕ್ಕಳಲ್ಲಿ ಚರ್ಮ ಸಮಸ್ಯೆಗಳು ಉಂಟಾಗುತ್ತಿವೆ ಎಂದರು.

ಇದೇ ವೇಳೆ ಕೆ.ಹೆಚ್ ಮಂಜುನಾಥ, ಮಲ್ಲೇಶ್ ವಾಹಿ, ಚಂದ್ರಕುಮಾರ್, ಸರ್ದಾರ್ ಸಾಬ್, ಅಯೂಬ್ ಪೈಲ್ವಾನ್, ಗುರುನಾಥ ಬಾಬು, ಸಿರಾಜ್, ರಾಜನಹಳ್ಳಿ ಶಿವಕುಮಾರ್, ಸತೀಶ್ ಪೂಜಾರಿ, ಮಹಮ್ಮದ್ ಫೈರೋಜ್, ಶಂಕರ್ ನಾರಾಯಣ್, ಶಾಂತಕುಮಾರ್ ಹಾಗೂ ಪೇಟೆ ಪ್ರಶಾಂತ್ ಮಾತನಾಡಿದರು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ. ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ ಹಾಗೂ ಹುಲ್ಲುಮನಿ ತಿಮ್ಮಣ್ಣ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.










Discussion about this post