ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಮಕ್ಕಳ ಮನಸ್ಸನ್ನು ಅರಿತು ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಅಕ್ಷರ ಅಭ್ಯಾಸ ಕಲಿಸಿ ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸುವ ಉನ್ನತ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರು ಸದೃಢ ಸಮಾಜ ನಿರ್ಮಾಣದ ಶಿಲ್ಪಿಗಳು ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.
ತಾಲೂಕಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ಇತ್ತೀಚೆಗೆ (ಸೆ.05) ಆಯೋಜಿಸಿದ್ದ ಧಾರವಾಡ ತಾಲೂಕಾ ಮಟ್ಟದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ದಾಖಲಾತಿ ಹೆಚ್ಚಳ, ಕ್ರೀಡಾ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿರುವ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ, ಸಮುದಾಯದ ಸಹಾಯದಿಂದ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿಕೊಂಡು ಗುಣಾತ್ಮಕ ಶಿಕ್ಷಣ ನೀಡುವ ಉತ್ತಮ ಶಾಲೆಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯವಾದುದು. ಇತರ ಶಾಲೆಗಳಿಗೆ ಇದು ಪ್ರೇರಣೆ ನೀಡುವಂತದ್ದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಹರ ಮುನಿದರೂ ಗುರು ಕಾಯುವನು. ಸಮಾಜದಲ್ಲಿ ಉತ್ತಮ ಮೌಲ್ಯಗಳು ಹೆಚ್ಚಾಗಲು ಗುರುಗಳ ಪಾತ್ರ ಮಹತ್ವದ್ದು. ಅಜ್ಞಾನದ ಕತ್ತಲನ್ನು ದೂರ ಮಾಡಲು ಜ್ಞಾನದ ದೀವಿಗೆ ಬೆಳಗುವ ಕಾರ್ಯ ಶಿಕ್ಷಕರು ನಿರ್ವಹಿಸುತ್ತಾರೆ. ಹಲವಾರು ಸಮಸ್ಯೆಗಳ ನಡುವೆಯೂ ಶಿಕ್ಷಕರು ತಮ್ಮ ವೃತ್ತಿ ಶ್ರೇಷ್ಟತೆ ಮೆರೆಯುತ್ತಿರುವುದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಮಾತನಾಡಿ, ಶಿಕ್ಷಕರು ಹೊಸ ಬದಲಾವಣೆಗೆ ಒಗ್ಗಿಕೊಂಡು ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಸಿದ್ದಗೊಳಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಹಲವಾರು ಶ್ರೇಷ್ಠ ಚಿಂತನೆಗಳನ್ನು ಹೊಂದಿದ್ದು ಶಿಕ್ಷಕರು ಇದನ್ನು ಅರಿಯಬೇಕು ಎಂದು ತಿಳಿಸಿದರು.
ಉಪ್ಪಿನ ಬೇಟಗೇರಿಯ ವಿರುಪಾಕ್ಷ ಮಹಾಸ್ವಾಮಿಗಳು, ಅಮ್ಮಿನಭಾವಿ ಅಭಿನವ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ, ಆರ್ಶಿವಚನ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
Also read: ರೈತ ದೇಶದ ಬೆನ್ನೆಲುಬು, ಜಾನುವಾರುಗಳು ರೈತನ ಬೆನ್ನೆಲುಬು ಆಗಿವೆ: ಬಿ.ಎಸ್. ಮೂಗನೂರಮಠ
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ಉತ್ತಮ ಶಾಲೆಗಳಿಗೆ, ನಿವೃತ್ತ ಶಿಕ್ಷಕರಿಗೆ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕಿನ ಶಿಕ್ಷಕರಿಗೆ ಗುರುತಿನ ಪತ್ರ, ಮುಖ್ಯೋಪಾಧ್ಯಾಯರಿಗೆ ಶಾಲಾ ಹುದ್ದೆಗಳ ಮಂಜೂರಾತಿ ಆದೇಶ, ಗುರುಸ್ಪಂದನ ನಿಮಿತ್ತ ಐದು ಶಿಕ್ಷಕರಿಗೆ ಸೇವಾ ಪುಸ್ತಕ ಪರಿಶೀಲನೆಗೆ ಅವಕಾಶ ಹಾಗೂ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಶೀಲ್ದಾರ ಸಂತೋಷ ಹಿರೇಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ಕೋರಿ, ಡಯಟ್ ಪ್ರಾಚಾರ್ಯೆ ಎನ್.ಕೆ ಸಾವಕಾರ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶೇಖ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಿಕಿ ಟಿ.ಎನ್ ಸೈಯದ್ ನಿರೂಪಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶಪ್ಪ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post