ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಅರಮನೆ ಆವರಣದಲ್ಲಿನ ಜಯಮಾರ್ತಾಂಡ ದ್ವಾರದಲ್ಲಿ ಬೆಳಗ್ಗೆ 9.20 ರಿಂದ 10.00ರ ಕನ್ಯಾ ಲಗ್ನದಲ್ಲಿ ಗಜಪಡೆಗೆ ಸಚಿವ ಸೋಮಶೇಖರ್ ಅವರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಗಜಪಡೆಯನ್ನು ಸ್ವಾಗತಿಸಿದರು.

ಮಂಗಳ ವಾದ್ಯ, ಕಲಾತಂಡಗಳ ಜೊತೆಗೆ, ಪೂರ್ಣಕುಂಬ ಸ್ವಾಗತದ ಮೂಲಕ ಜಯಮಾರ್ತಾಂಡ ದ್ವಾರದಿಂದ ಅರಮನೆಯ ಆನೆ ಬಾಗಿಲಿಗೆ ಗಜಪಡೆಯನ್ನು ಬರಮಾಡಿಕೊಳ್ಳಲಾಯಿತು.
ಆನೆ ಬಾಗಿಲಲ್ಲಿ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಸಚಿವ ಸೋಮಶೇಖರ್ ಅವರು, ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ನಂತರ ಕಾವಾಡಿಗರು ಮತ್ತು ಮಾವುತರಿಗೆ ಮೂಲಭೂತ ಸಾಮಾಗ್ರಿಗಳನ್ನು ವಿತರಿಸಿದರು. ದಸರಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ಶುಭಕೋರಿದ ಸಚಿವರು, ಫಲತಾಂಬೂಲ ನೀಡಿದರು. ಬಳಿಕ ಅರಮನೆಯ ಗೊಂಬೆ ತೊಟ್ಟಿಯಲ್ಲಿ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಿದರು.

ಗಜಪಡೆ ಸ್ವಾಗತ ಕಾರ್ಯಕ್ರಮದಲ್ಲಿ ಶಾಸಕರಾದ ನಾಗೇಂದ್ರ, ರಾಮದಾಸ್, ಸಂಸದ ಪ್ರತಾಪ್ ಸಿಂಹ, ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರೂ, ಜಿಪಂ ಸಿಇಒ ಸೇರಿದಂತೆ ನಾನಾ ನಿಗಮಂಡಳಿಗಳ ಅಧ್ಯಕ್ಷರು, ಮುಖಂಡರು ಮತ್ತು ಅಧಿಕಾರಿಗಳು ಹಾಜರಿದ್ದರು.
(ವರದಿ: ಡಿ.ಎಲ್. ಹರೀಶ್)









Discussion about this post