ಕಲ್ಪ ಮೀಡಿಯಾ ಹೌಸ್ | ರಾಯಚೂರು |
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮತ್ತು ತೋರಣದಿನ್ನಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿರುವ ಅಮರೇಶಪ್ಪ ಕಾಳಪೂರರವರನ್ನು ಕೂಡಲೇ ಅಮಾನತು ಮಾಡಿ, ಅವರು ಮಾಡಿದ ಅವ್ಯವಹಾರದ ಬಗ್ಗೆ ಇಲಾಖೆ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪಾಮನಕಲ್ಲೂರು, ಆನಂದಗಲ್, ಚಿಲ್ಕರಾಗಿ ಗ್ರಾಮದ ಯುವಕರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರರವರಿಗೆ ಮನವಿ ಸಲ್ಲಿಸಿದರು.
ರಾಯಚೂರು ನಗರದ ಜಿಲ್ಲಾ ಪಂಚಾಯತಿಗೆ ಭೇಟಿ ನೀಡಿ ಸಿಇಒರವರಿಗೆ ಮನವಿ ಸಲ್ಲಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯುವಕರು, ನಮ್ಮ ಪಾಮನಕಲ್ಲೂರು ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಮರೇಶಪ್ಪ ಕಾಳಾಪೂರರವರು ಪಾಮನಕಲ್ಲೂರು ಪಂಚಾಯತಿ ವ್ಯಾಪ್ತಿಯಲ್ಲಿ ಬಹಳಷ್ಟು ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆಸಿದ್ದಾರೆ. ಸಾಕ್ಷಿ ಎಂಬಂತೆ ಇತ್ತೀಚೆಗೆ ಅವರು ಮಾತನಾಡಿದ ಅವ್ಯವಹಾರದ ವಿಡಿಯೋಗಳು ವೈರಲ್ ಆಗಿದೆ ಎಂದರು.
ಕರ್ತವ್ಯ ನಿಷ್ಠೆ ಮೆರೆಯಬೇಕಾಗಿದ್ದ ಪಿಡಿಒ ಅಮರೇಶಪ್ಪರವರು ಕರ್ತವ್ಯದ ವಿಷಯದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಯಾವುದೇ ಕೆಲಸಗಳನ್ನು ಮಾಡದೇ ಬೋಗಸ್ ಬಿಲ್ ಮಾಡುತ್ತಿದ್ದಾರೆ. ಪ್ರಮುಖವಾಗಿ ಹದಿನಾಲ್ಕು ಮತ್ತು ಹದಿನೈದನೇ ಹಣಕಾಸಿನಲ್ಲಿ ಬಹಳಷ್ಟು ಅವ್ಯವಹಾರ ನಡೆಸಿದ್ದಾರೆ.
Also read: ಲೈವ್ ನ್ಯೂಸ್ ಓದುವ ವೇಳೆ ಆಕಸ್ಮಿಕವಾಗಿ ನೊಣ ನುಂಗಿದ ಆಂಕರ್! ವೈರಲ್ ಆದ ವೀಡಿಯೋ ನೋಡಿ
ಅವರು ಭೋಗಸ್ ಬಿಲ್ ಮಾಡಿದ ದಾಖಲೆಗಳನ್ನು ಸಿಇಒರವರಿಗೆ ತಲುಪಿಸಿದ್ದೇವೆ. ಮಾಧ್ಯಮಗಳಿಗೂ ನೀಡಿದ್ದೇವೆ. ಕೂಡಲೇ ಅವರನ್ನು ಅಮಾನತು ಮಾಡಿ, ಇಲಾಖೆ ತನಿಖೆಗೆ ಒಪ್ಪಿಸಿ, ನಮ್ಮ ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಉತ್ತಮ ಪಿಡಿಒರನ್ನು ಒದಗಿಸಿಕೊಡಬೇಕೆಂದು ಮನವಿ ಪತ್ರದ ಮೂಲಕ ಕೋರಿದ್ದೇವೆ ಎಂದು ಯುವಕರು ತಿಳಿಸಿದರು.
ಈ ಸಂದರ್ಭದಲ್ಲಿ ಪಾಮನಕಲ್ಲೂರು, ಆನಂದಗಲ್, ಚಿಲ್ಕರಾಗಿ ಗ್ರಾಮಗಳ ಯುವಕರಾದ ರಮೇಶ್ ಚಿಲ್ಕರಾಗಿ, ರಮೇಶ ಗಂಟ್ಲಿ ಪಾಮನಕಲ್ಲೂರು, ಸುಂಡೆಪ್ಪ ಆನಂದಗಲ್, ಬಸಪ್ಪ ಚಿಲ್ಕರಾಗಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು, ಅಮರೇಶ ಪಾಮನಕಲ್ಲೂರು ಸಿಎಮ್, ಅಮರೇಶ ಡಿ ಪೂಜಾರಿ, ಮಲ್ಲಪ್ಪ ಆನಂದಗಲ್, ಮಲ್ಲಪ್ಪ, ಯಂಕಪ್ಪ ನಾಯಕ ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post