ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಂತೆ ಹಳ್ಳಿಗಳು ಬಲಿಷ್ಠಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ಆವರಣದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೊಳಿಸಿ ಮಾತನಾಡಿದ ಅವರು ನಮ್ಮ ದೇಶದಲ್ಲಿ ಗಡಿಯನ್ನು ಕಾಯುವ ಯೋಧ, ಅನ್ನ ನೀಡುವ ರೈತ, ಶಿಕ್ಷಣ ನೀಡುವ ಶಿಕ್ಷಕರಿಗೆ ಅಮೂಲ್ಯವಾದ ಸ್ಥಾನವಿದೆ. ಭಾರತ ದೇಶ ಅತ್ಯಧಿಕ ಮಾನವ ಸಂಪನ್ಮೂಲವನ್ನು ಹೊಂದಿದ್ದು ಅಮೃತಮಹೋತ್ಸವದ ಈ ಶುಭ ಸಂದರ್ಭದಲ್ಲಿ ಇತಿಹಾಸವನ್ನು ಆದರ್ಶವಾಗಿಟ್ಟುಕೊಂಡು ಮುಂದಿನ ನಾವಿನ್ಯ ಭವಿಷ್ಯದ ಕುರಿತು ಆಲೋಚಿಸಬೇಕಿದೆ ಎಂದರು.
ನಮಗೆ ಸಿಕ್ಕ ಸ್ವಾತಂತ್ರ್ಯ ಸ್ವೆಚ್ಚಾಚ್ಚಾರವಾಗಬಾರದು. ಸಮಾಜಕ್ಕೆ ಭಾರವಾಗದೇ ಉಪಯೋಗವಾಗುವಂತಹ ಸಮಾಜಮುಖಿ ಕಾರ್ಯದಲ್ಲಿ ಯುವ ಸಮೂಹ ತೊಡಗಿಸಿಕೊಳ್ಳಬೇಕಿದೆ. ಇಂದು ಕಾರ್ಯಾಂಗ ಮಾಡಬೇಕಾದ ಅನೇಕ ಕೆಲಸಗಳನ್ನು ನ್ಯಾಯಾಂಗ ಮಾಡುತ್ತಿದ್ದು, ಸಮಾಜದಲ್ಲಿ ನಡೆಯುತ್ತಿರುವ ಪ್ರಸ್ತುತ ಘಟನೆಗಳು ಕಾರ್ಯಾಂಗಕ್ಕೆ ಎಚ್ಚರಿಕೆಯ ಗಂಟೆಯಾಗಲಿ ಎಂದು ಹೇಳಿದರು.
Also read: ಸಾವರ್ಕರ್ ಫ್ಲೆಕ್ಸ್ ವಿವಾದ: ಶಿವಮೊಗ್ಗ ನಗರದಲ್ಲಿ ಎರಡು ದಿನ 144 ಸೆಕ್ಷನ್ ಜಾರಿ
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ ನಮ್ಮ ಹಿರಿಯರು ಹಾಕಿಕೊಟ್ಟ ನೆಲೆಗಟ್ಟುಗಳು ಮುಂದಿನ ತಲೆಮಾರಿಗೆ ಸದಾ ಸ್ಪೂರ್ತಿದಾಯಕ ಎಂದು ಹೇಳಿದರು.
ಮಾಜಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ, ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ.ಶಿವಕುಮಾರ್, ಕುಲಸಚಿವರಾದ ಪ್ರೊ.ಟಿ.ಎಸ್.ಹೂವಯ್ಯಗೌಡ, ಸಹಾಯಕ ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಅಜೀವ ಸದಸ್ಯರಾದ ಎನ್.ಎನ್.ಆನಂದ್, ಸಿ.ಎನ್.ಗುರುಪ್ರಸಾದ್ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















