ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಕೂಡಲೇ ಪರಿಹಾರ ಮಂಜೂರು ಮಾಡುವಂತೆ ಒತ್ತಾಯಿಸಿ ಜೆಡಿಎಸ್ ಪಕ್ಷದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ಜೆಡಿಎಸ್ ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ ಮಾತನಾಡಿ, ತಾಲೂಕಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ, ಆಸ್ತಿ ಹಾನಿ ಉಂಟಾಗಿದೆ. ಇದರಿಂದ ರೈತಾಪಿ ವರ್ಗ ತೀವ್ರ ಸಂಕಷ್ಟಕ್ಕೆ ತಲುಪಿದೆ. ತಾಲೂಕಿನ ವರದಾ ನದಿ ತೀರಗಳ ಗ್ರಾಮಗಳಾದ ಬಾಡದಬೈಲು, ಕಡಸೂರು, ದ್ಯಾವಾಸ, ಪುರ, ಕಸಬಾ ಹೋಬಳಿಯ ಉರುಗನಹಳ್ಳಿ, ಕುಪ್ಪಗಡ್ಡೆ ಹೋಬಳಿಯ ಕೆರೆಹಳ್ಳಿ, ಆನವಟ್ಟಿ ಹೋಬಳಿಯ ಮೂಡಿದೊಡ್ಡಿಕೊಪ್ಪ, ನೆಲ್ಲಿಕೊಪ್ಪ, ಎಲಿವಾಳ, ತತ್ತೂರು, ಜಡೆ ಹೋಬಳಿಯ ಸಾಬಾರ ಹಾಗೂ ತಾಳಗುಪ್ಪ ಹೋಬಳಿಯಲ್ಲಿಯೂ ಅಪಾರ ಪ್ರಮಾಣದ ಹಾನಿಯಾಗಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆಗಳು ನೆರೆಗೆ ತುತ್ತಾಗಿದೆ. ಕೂಡಲೇ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Also read: ರಾಗಿಗುಡ್ಡದಲ್ಲಿ ನಿರ್ಮಾಣವಾಗಲಿದೆ 74 ಅಡಿ ಎತ್ತರದ ಶಿವಲಿಂಗ! ಯೋಜನೆಯ ಮಾಹಿತಿ ಇಲ್ಲಿದೆ
ಪ್ರತಿಭಟನೆಯಲ್ಲಿ ಜೆಡಿಎಸ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತತ್ತೂರು, ಟೌನ್ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಆರ್. ಕುಮಾರ್, ರೈತ ಮುಖಂಡ ಹುಚ್ಚಪ್ಪ ಚಿಮಣೂರು, ಪ್ರಮುಖರಾದ ಇ.ಎಚ್. ಮಂಜುನಾಥ್, ತುಳಜಪ್ಪ, ಸುರೇಶ್ ವೆಂಕಟಾಪುರ, ವಿನಯ್ ಕೆರೆಹಳ್ಳಿ, ಶ್ರೀಧರ್ ಭಟ್ ಮತ್ತಿತರರಿದ್ದರು.










Discussion about this post