ಕಲ್ಪ ಮೀಡಿಯಾ ಹೌಸ್ | ಸೊರಬ |
ಗುತ್ತಿಗೆದಾರರಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕ್ಷೇತ್ರದಿಂದ ಬರುವ ಆದಾಯದ ಮೇಲೆ ಕಣ್ಣಿದೆಯೆ ವಿನಃ ಇಲ್ಲಿನ ಸಾಮಾನ್ಯ ಜನರ ಬವಣೆಯನ್ನು ಯಾರೂ ಆಲಿಸುತ್ತಿಲ್ಲ ಎಂದು ಸ್ಥಳೀಯ ಅನೇಕ ಕೃಷಿಕರು ದೂರಿಕೊಂಡಿದ್ದಾರೆ.
ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿಯಾಗುತ್ತಿದೆಯೇ ವಿನಃ ಪಾರ್ಕಿಂಗ್ ನಿಯಂತ್ರಣದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹಾಗಾಗಿ ವಾಹನಗಳನ್ನು ಎಲ್ಲಿ ಬೇಕಾದರೂ ನಿಲ್ಲಿಸಿ ರಸ್ತೆ ಸಂಚಾರಕ್ಕಷ್ಟೆ ಅಲ್ಲ ಆಹಾರ ಬೆಳೆ ಬೆಳೆಯುವ ಜಮೀನುಗಳಲ್ಲೂ ನಿಲ್ಲಿಸುತ್ತಿರುವುದರಿಂದ ರೈತನಿಗೆ ಬೆಳೆ ಬೆಳೆಯಲಾಗುತ್ತಿಲ್ಲ. ರಾಶಿರಾಶಿ ಪ್ಲಾಸ್ಟಿಕ್ ಇನ್ನಿತರ ಕೊಳೆಯದ ತ್ಯಾಜ್ಯ ತೆಗೆಯಲಾಗದೆ ಆಹಾರ ಬೆಳೆಯುವ ಭೂಮಿ ಬರಡಾಗುತ್ತಿದೆ. ಮೇಲಿಂದ ಮೇಲೆ ಆಡಳಿತದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ಪಾರ್ಕಿಂಗ್ ಗುತ್ತಿಗೆ ಹಿಡಿದವರು ವ್ಯವಸ್ಥಿತವಾಗಿ ವಾಹನಗಳನ್ನು ನಿಲ್ಲಿಸಲು ಸೂಚಿಸಬೇಕು. ಪ್ರಾಣಿಬಲಿ ಕೊಡುವವರನ್ನು ಖಾಸಗಿ ಜಾಗಕ್ಕೆ ಕಳಿಸಬಾರದು. ಊರ ಹೊರಗೇ ಅಂತವರನ್ನು ನಿಯಂತ್ರಿಸಬೇಕು. ಪಾರ್ಕಿಂಗ್ ಹರಾಜು ಹಿಡಿದವ ಬರೀ ಶುಲ್ಕದ ಮೇಲೆ ಕಣ್ಣಿಡದೆ ಸುವ್ಯವಸ್ಥೆಯನ್ನೂ ಕಾಪಾಡಬೇಕು. ಜಾಗದ ಕೊರತೆ ಇದ್ದರೆ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಬೇಡಿ.
-ರೇಣುಕಾಶ್ರೀಧರ್ ಮಹಿಳಾಮಂಡಳಿ ಅಧ್ಯಕ್ಷೆ ಚಂದ್ರಗುತ್ತಿ
ಈಚೆಗೆ ನಮ್ಮ ವ್ಯಾಪ್ತಿ ಮೀರಿ ಭಕ್ತರಾಗಮಿಸುತ್ತಿದ್ದು ನಿಯಂತ್ರಣ ಕಷ್ಟವಾಗಿದೆ. ಇನ್ನಷ್ಟು ಪಾರ್ಕಿಂಗ್ ವ್ಯವಸ್ಥೆ ಮಾಡೋಣವೆಂದರೆ ಸರ್ಕಾರಿ ಜಾಗದ ಲಭ್ಯತೆ ಸಮೀಪದಲ್ಲಿಲ್ಲ. ಈ ನ್ಯೂನತೆ ಗಮನಕ್ಕೆ ಬಂದಿದೆ. ಶೀಘ್ರ ತಹಶೀಲ್ದಾರ್ ಬಳಿ ಚರ್ಚಿಸಲಾಗುತ್ತದೆ.
-ಎಸ್.ಆರ್.ರಂಗಪ್ಪ ಇಒ ಮುಜರಾಯಿ ಇಲಾಖೆ
ಮೂಲದಿಂದಲೂ ರೇಣುಕಾಂಬೆಗೆ ಪ್ರಾಣಿಬಲಿ ಇಲ್ಲ. ಆದರೆ, ಭಕ್ತಾದಿಗಳು ಪ್ರಾಣಿ ಬಲಿ ಹರಕೆ ಹಾಕಿಕೊಂಡು ಇಲ್ಲಿ ಬಲಿ ಕೊಡಲು ಬಂದಾಗ ಆಡಳಿತ ಪ್ರಾಣಿವಧೆಗೆ ಅವಕಾಶ ಕೊಡುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರು ಸಮೀಪದ ಹೊಲಗದ್ದೆಗಳಿಗೆ ತೆರಳಿ ಅಲ್ಲಿಯೆ ಪ್ರಾಣಿಬಲಿ ನೀಡುತ್ತಾರೆ. ಅಲ್ಲಿಯೆ ಅದರ ಭಕ್ಷ್ಯ ಮಾಡಿ ತ್ಯಾಜ್ಯವನ್ನು ಅಲ್ಲೆ ಬಿಡುತ್ತಾರೆ. ನಮಗೆ ಈ ತ್ಯಾಜ್ಯ ತೆಗೆಯುವುದೆ ದೊಡ್ಡ ತಲೆ ನೋವಿನ ಕೆಲಸ. ಮೊದಲು ಇಲ್ಲಿ ಪ್ರಾಣಿಬಲಿ ನಿಲ್ಲಲಿ, ವಾಹನಗಳನ್ನು ದೇವಸ್ಥಾನದ ಬಳಿ ಬರಲು ಅವಕಾಶ ನೀಡಬೇಡಿ ಎಂದು ರೈತರು ಆಗ್ರಹಿಸಿದ್ದಾರೆ.
ತಾಲ್ಲೂಕು ಚಂದ್ರಗುತ್ತಿ ರೇಣುಕಾಂಬೆ ದರ್ಶನಕ್ಕೆ ವಿಪರೀತ ಭಕ್ತರಾಗಮಿಸುತ್ತಿದ್ದು, ಮಂಗಳವಾರದ ವಿಶೇಷ ದಿನದಂದು ಪಾರ್ಕಿಂಗ್ ವ್ಯವಸ್ಥೆ ಅಸಮರ್ಪಕತೆಯಿಂದ ಪಾದಚಾರಿಗಳಿಗೆ ತೊಂದರೆಯಾಗಿತ್ತು. ರಕ್ಷಣಾ ಇಲಾಖೆ ವಾಹನ ದಟ್ಟಣೆಯ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಯಿತು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post