ಜಿನೇವಾ, ಸೆ.27: ಭಾರತ ಪಾಕಿಸ್ಥಾನದ ನಡುವಿನ ವಿವಾದ ತಾರಕಕ್ಕೇರಿರುವಂತೆಯೇ, ಪಾಕ್ ನ ಕುತಂತ್ರದ ವಿರುದ್ಧ ವಾಕ್ಸಮರ ಸಾರಿರುವ ಭಾರತ ಸರ್ಕಾರ ಅಂತರ್ರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ಥಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದೆ.
ಈ ಕುರಿತಂತೆ ನಿಲುವು ವ್ಯಕ್ತಪಡಿಸಿರುವ ಭಾರತ, ಭಯೋತ್ಪಾದಕ ದೇಶವಾಗಿರುವ ಪಾಕಿಸ್ಥಾನವು ತಾನು ಕಳೆದ ಹಲವು ವರ್ಷಗಳಿಂದ ಪಡೆಯುತ್ತಿರುವ ಬಿಲಿಯಗಟ್ಟಲೆ ಡಾಲರ್ ಗಳ ಅಂತರ್ರಾಷ್ಟ್ರೀಯ ನೆರವನ್ನು ಭಯೋತ್ಪಾದಕ ಗುಂಪುಗಳ ತರಬೇತಿ, ಅವರಿಗೆ ಶಸ್ತ್ರಾಸ್ತ್ರ ಮತ್ತು ಬೆಂಬಲಕ್ಕಾಗಿ ಬಳಸಿಕೊಳ್ಳುತ್ತಿದೆ. ಮಾತ್ರವಲ್ಲದೆ ಇವನ್ನು ತನ್ನ ನೆರೆಯ ದೇಶಗಳ ವಿರುದ್ಧವೇ ಬಳಸಿಕೊಂಡಿದೆ ಎಂಬ ಅಂಶವನ್ನು ಭಾರತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮುಂದೆ ಬಯಲಿಗೆಳೆದಿದೆ. ಈ ಮೂಲಕ ಜಾಗತಿಕ ಶಾಂತಿ ಭಂಜಕ ಪಾಕ್ ವಿರುದ್ಧ ಇನ್ನಷ್ಟು ಕಠಿಣ ನಿಲುವು ತಳೆದಿರುವುದಾಗಿ ಪ್ರದರ್ಶಿಸಿದೆ.
ಪಾಕಿಸ್ಥಾನವು ಜಾಗತಿಕ ಭಯೋತ್ಪಾದನೆಯ ನಿಜವಾದ ಕೇಂದ್ರ ಬಿಂದು. ಭಯೋತ್ಪಾದನೆಯ ವಿಧಾನಗಳಲ್ಲಿ ಪಾಕಿಸ್ಥಾನಕ್ಕೆ ಇರುವ ನಂಬಿಕೆ ಎಷ್ಟು ಆಳವಾಗಿದೆ ಎಂದರೆ, ಅದು ಈ ಭಯೋತ್ಪಾದನೆಯನ್ನು ತನ್ನದೇ ಬಲೂಚಿ, ಸಿಂ, ಖೈಬರ್ ಬಖ್ತೂನ್ ಮತ್ತಿತರ ಬುಡಗಟ್ಟು ಜನರ ಮೇಲೆ ಪ್ರಯೋಗಿಸಲೂ ಹೇಸುತ್ತಿಲ್ಲ ಎಂದು ಭಾರತ ಅದರ 33ನೆಯ ಅವೇಶನದಲ್ಲಿ ಹೇಳಿದೆ.
ಉರಿಯಲ್ಲಿ ನಡೆದ ಇತ್ತೀಚಿನ ಭಯೋತ್ಪಾದಕ ದಾಳಿಯು 19 ಮಂದಿ ಭಾರತೀಯ ಯೋಧರನ್ನು ಬಲಿತೆಗೆದುಕೊಂಡು 20ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳ್ಳುವಂತೆ ಮಾಡಿತು. ಇದು ಪಾಕಿಸ್ಥಾನದಲ್ಲಿರುವ ಭಯೋತ್ಪಾದನೆಯ ಮೂಲಸೌಕರ್ಯ ಈಗಲೂ ಅತ್ಯಂತ ಸಕ್ರಿಯವಾಗಿರುವುದನ್ನು ಎತ್ತಿತೋರುತ್ತಿದೆ. ಈ ಭಯೋತ್ಪಾದಕರಿಂದ ವಶಪಡಿಸಿಕೊಂಡಿರುವ ಜಿಪಿಎಸ್, ಗ್ರೆನೇಡ್ ಗಳು, ಸಂಪರ್ಕ ಮ್ಯಾಟ್ರಿಕ್ಸ್ ಶೀಟ್ಸ್, ಸಾಧನಗಳೆಲ್ಲ ಪಾಕಿಸ್ಥಾನದಲ್ಲಿ ತಯಾರಾದವು. ನುಸುಳುವಿಕೆ ಮತ್ತು ದಾಳಿಯ ವಿಧಾನಗಳು ಕೂಡಾ ಪಾಕ್ ನೆಲದಲ್ಲಿನ ಭಯೋತ್ಪಾದಕ ಗುಂಪುಗಳು ಅನುಸರಿಸುವಂಥದ್ದೇ ಆಗಿವೆ. 2008ರಲ್ಲಿ ಮುಂಬೈ ಭಯೋತ್ಪಾದಕ ದಾಳಿ ಮತ್ತು ಪಠಾಣ್ಕೋಟ್ ದಾಳಿಗಳಲ್ಲಿ ಶಾಮೀಲಾದವರನ್ನು ನ್ಯಾಯದ ಕಟಕಟೆಗೆ ತರುವಲ್ಲಿ ಪಾಕ್ ಯಾವ ರೀತಿ ಗಂಭೀರ ಕ್ರಮ ಕೈಗೊಳ್ಳುತ್ತಿದೆ ಎಂಬುದನ್ನು ತಾನು ಇನ್ನೂ ಕಾದು ನೋಡುತ್ತಿದ್ದೇನೆ ಎಂದು ಭಾರತ ತಿಳಿಸಿದೆ.
ವಿಶ್ವಸಮುದಾಯ ಭಯೋತ್ಪಾದಕರೆಂದು ಗುರುತಿಸಿಕೊಂಡಿರುವ ಗುಂಪುಗಳು ಮತ್ತು ಅವುಗಳ ನಾಯಕರು ಪಾಕ್ ಬೀದಿಗಳಲ್ಲಿ ಮುಕ್ತವಾಗಿ ಓಡಾಡುತ್ತಿದ್ದಾರೆ.ಸಕ್ರಿಯರಾಗಿ ಕಾರ್ಯಾಚರಿಸುತ್ತಿದ್ದಾರೆ. ಅಲ್ಲದೆ ರಾಜಾರೋಷವಾಗಿ ಭಯೋತ್ಪಾದನೆಗೆ ನಿ ಸಂಗ್ರಹಿಸುವ ಕಾರ್ಯದಲ್ಲೂ ತೊಡಗಿವೆ. ಇದು ಅಂತರ್ರಾಷ್ಟ್ರೀಯ ಬದ್ಧತೆಯನ್ನು ಪಾಕ್ ಹೇಗೆ ಉಲ್ಲಂಘಿಸುತ್ತಿದೆ ಎಂಬುದಕ್ಕೆ ಸಾಕ್ಷಿ. ಬೇಜವಾಬ್ದಾರಿಯುತ ಮತ್ತು ಸಂಕುಚಿತ ಸ್ವಾರ್ಥಕ್ಕಾಗಿ ಭಯೋತ್ಪಾದನೆ ಬೆಂಬಲಿಸುವ ಪಾಕ್ ನಿಲುವು ದಕ್ಷಿಣ ಏಷ್ಯಾದಿಂದಾಚೆಗೂ ಶಾಂತಿಗೆ ಬೆದರಿಕೆಯೊಡ್ಡುತ್ತಿದೆ ಎಂದು ಭಾರತ ವಿವರಿಸಿದೆ.
Discussion about this post