Read - < 1 minute
ಬೆಂಗಳೂರು, ಸೆ.೧೫: ಕಾವೇರಿ ವಿಚಾರದಲ್ಲಿ ನ್ಯಾಯಾಲಯದ ಆದೇಶ ಹಾಗೂ ರಾಜ್ಯಸರ್ಕಾರದ ನಿಲುವು ವಿರೋಧಿಸಿ ಕನ್ನಡಪರ ಸಂಘಟನೆಗಳು ಇಂದು ಕರೆನೀಡಿದ್ದ ರೈಲುತಡೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಂದಿನಂತೆ ಬೆಂಗಳೂರಿನಿಂದ ರೈಲುಗಳು ಸಂಚರಿಸುತ್ತಿವೆ. ಎಲ್ಲ ಪ್ರಮುಖ ರೈಲುಗಳು ಯಾವುದೇ ವ್ಯತ್ಯಯವಿಲ್ಲದೇ, ಸಂಚಾರ ನಡೆಸುತ್ತಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಭದ್ರತೆ ಹೆಚ್ಚಿದೆ.
ಭದ್ರತೆಗಾಗಿ ಸುಮಾರು೧೫ ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು, ಮಡಿಕೇರಿ, ಹುಬ್ಬಳ್ಳಿ ಇನ್ನಿತರ ಪ್ರಮುಖ ನಗರಗಳಲ್ಲಿರುವ ರೈಲ್ವೇ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ರೈಲ್ವೇ ವಿಶೇಷ ಭದ್ರತಾ ಪಡೆಗಳು, ರ‌್ಯಾಪಿಡ್ ಆ್ಯಕ್ಷನ್ ಫೋರ್ಸ್, ಸಶಸ್ತ್ರ ಸೀಮಾಬಲ ದಳ, ಇಂಡೋ-ಟಿಬೆಟ್ ಭದ್ರತಾ ಪಡೆಗಳು, ತುರ್ತು ಪ್ರಹಾರ ದಳ ಹಾಗೂ ಅಶ್ರುವಾಯು ದಳಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಚಳವಳಿಗೆ ಅನುವು ಮಾಡದೇ ಇರಲು ರೈಲ್ವೇ ಇಲಾಖೆ ನಿರ್ಧರಿಸಿದೆ. ಹೀಗಾಗಿ ಸಾಂಕೇತಿಕವಾಗಿ ೧೦-೧೫ ನಿಮಿಷಗಳ ಕಾಲ ನಿಲ್ದಾಣದಲ್ಲಿ ರೈಲು ನಿಲ್ಲಿಸಲಾಗುತ್ತದೆ ಎನ್ನಲಾಗಿದೆ.
ಮಂಡ್ಯ : ರೈಲು ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ ೬ ಮಂದಿ ಕನ್ನಡಪರ ಹೋರಾಟಗಾರರನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಪ್ಪು ಬಾವುಟ ಪ್ರದರ್ಶಿಸಿ ನಿಲ್ದಾಣ ಪ್ರವೇಶಕ್ಕೆ ಕಾರ್ಯಕರ್ತರು ಯತ್ನಿಸಿದ್ದರು ಎನ್ನಲಾಗಿದೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗುತ್ತಾ, ನಿಲ್ದಾಣದ ಆವರಣ ಪ್ರವೇಶಿಸಿದ ಪ್ರತಿಭಟನಾಕಾರರನ್ನು ಅಲ್ಲಿಯೇ ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರ ರೈಲ್ವೇ ನಿಲ್ದಾಣದ ಬಳಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
Discussion about this post