Read - < 1 minute
ಕಲ್ಲಿಕೋಟೆ: ಉರಿಯಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದಕರು ನಡೆಸಿದ ಭಯೋತ್ಪಾದಕ ದಾಳಿಯ ಉದ್ವಿಗ್ನತೆಯ ನಡುವೆಯೇ , ಕೇರಳದ ಮಲಬಾರ್ ಪ್ರದೇಶ ಕಲ್ಲಿಕೋಟೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಶುಕ್ರವಾರ ಚಾಲನೆ ಲಭಿಸಿದೆ. ಪಕ್ಷದ ವರಿಷ್ಠ ನಾಯಕರು ಇಷ್ಟರಲ್ಲೇ ಕಲ್ಲಿಕೋಟೆಗೆ ತಲುಪಿದ್ದಾರೆ. ದೇಶದಲ್ಲಿ ಸುರಕ್ಷತೆಯಿಲ್ಲದೆ ಅಭಿವೃದ್ಧಿಯ ಗುರಿ ಸಾಧಿಸಲಾಗದು ಎಂದು ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಕಾರ್ಯಕಾರಿಣಿಯಲ್ಲಿ ಒತ್ತಿ ಹೇಳಲಾಯಿತು.
ಮೂರು ದಿನಗಳ ಈ ಅಧಿವೇಶನದಲ್ಲಿ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸರಣಿ ಸಭೆಗಳು ನಡೆದವು. ದೇಶವು ಪ್ರಧಾನಿ ಮೋದಿ ನಾಯಕತ್ವದಿಂದ ಏನನ್ನು ನಿರೀಕ್ಷಿಸುತ್ತಿದೆಯೋ ಅದನ್ನು ಪೂರೈಸಲು ಕೇಂದ್ರ ಸರಕಾರ ಬದ್ಧವಾಗಿರುವುದನ್ನು ಅಧಿವೇಶನ ಮತ್ತೊಮ್ಮೆ ದೃಢೀಕರಿಸಿದೆ.
ಬಿಜೆಪಿ ಜನರ ಪಕ್ಷವಾಗಿದ್ದು, ಜನತೆಯ ನಿರೀಕ್ಷೆಯನ್ನು ಬಿಜೆಪಿ ಆದ್ಯತೆಯಾಗಿ ಪರಿಗಣಿಸುತ್ತದೆ. ಪ್ರಧಾನಿ ಮೋದಿಯವರು ಜನತೆಯ ಭಾವನೆಯನ್ನು ಗುರುತಿಸಿದ್ದು, ಈಗ ನಾವು ಅವರಿಗಾಗಿ ಇಲ್ಲಿ ಎದುರು ನೋಡುತ್ತಿದ್ದೇವೆ. ಇಡಿ ದೇಶವೇ ಅವರು ಇಲ್ಲಿಂದ ನೀಡುವ ಸಂದೇಶಕ್ಕಾಗಿ ಕಾಯುತ್ತಿದೆ ಎಂದು ಬಿಜೆಪಿ ವಕ್ತಾರ ಶಹನಾವಾಜ್ ಹುಸೇನ್ ಸುದ್ದಿಗಾರರಿಗೆ ತಿಳಿಸಿದರು.
ಶುಕ್ರವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಸಭೆ ಕಡವು ರೆಸಾರ್ಟನಲ್ಲಿ ಆರಂಭಗೊಂಡಿತು. ಈ ಸಭೆಯು ಬಿಜೆಪಿಯ ರಾಷ್ಟ್ರೀಯ ಮಂಡಳಿ ಸಭೆಯ ಕಾರ್ಯಸೂಚಿ ಮತ್ತು ನಿರ್ಣಯಗಳಿಗೆ ಅಂತಿಮ ಸ್ವರೂಪ ನೀಡುತ್ತದೆ.
ಶನಿವಾರ ಅಪರಾಹ್ನ ಪ್ರಧಾನಿ ಮೋದಿಯವರು ಆಗಮಿಸಲಿದ್ದು, ಅಪರಾಹ್ನ 3ಗಂಟೆಗೆ ಬೀಚ್ನಲ್ಲಿ ಭಾರೀ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ. 10ಲಕ್ಷಕ್ಕೂ ಅಧಿಕ ಜನರು ಇದರಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಗರೀಬ್ ಕಲ್ಯಾಣ್ ಗುರಿ
ಬಿಜೆಪಿ `ಗರೀಬ್ ಕಲ್ಯಾಣ್'(ಬಡವರ ಕಲ್ಯಾಣ)ಕಾರ್ಯಸೂಚಿಗೆ ಆದ್ಯತೆ ನೀಡಿದ್ದು, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ದೇಶದ ಅಭಿವೃದ್ಧಿಯ ಫಲವು ಕೊಟ್ಟ ಕೊನೆಯ ವ್ಯಕ್ತಿಗೂ ತಲುಪುವಂತೆ ಮಾಡುವ ಕಾರ್ಯಯೋಜನೆಯೊಂದನ್ನು ಪ್ರಕಟಿಸಲಿದೆ.
ಇದೇ ವೇಳೆ ಅಭಿವೃದ್ಧಿಯ ಗುರಿ ಸಾಧಿಸಬೇಕಾದರೆ, ದೇಶದಲ್ಲಿ ಭದ್ರತೆ ಅತ್ಯಂತ ಮಹತ್ವವಾದುದು. ಸುರಕ್ಷೆಯಿಲ್ಲದೆ ಅಭಿವೃದ್ಧಿ ಅಸಾಧ್ಯ. ಈ ಹಿನ್ನೆಲೆಯಲ್ಲಿ ಪಾಕ್ ಪ್ರಾಯೋಜಿತ ಭಯೋತ್ಪಾದನೆಗೆ ಅಂತ್ಯವೊಂದನ್ನು ಹೇಳುವ ಕಾಲ ಬಂದಿದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ.
ಪಾಕ್ ಗಡಿಗೆ ತಾಗಿಕೊಂಡಿರುವ ಉರಿಯಲ್ಲಿ ಪಾಕ್ನ ಜೈಶ್-ಇ-ಮೊಹಮ್ಮದ್ ಮತ್ತು ಲಷ್ಕರ್ ತೊಯ್ಬಾ ಭಯೋತ್ಪಾದಕರು ಸೇನಾ ಶಿಬಿರವೊಂದಕ್ಕೆ ಕಳೆದ ಭಾನುವಾರ ದಾಳಿ ನಡೆಸಿ 18ಮಂದಿ ಯೋಧರ ಹತ್ಯೆಗೈದ ಕೃತ್ಯವನ್ನು ಕೇಂದ್ರ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಪಾತಕಿಗಳನ್ನು ದಂಡಿಸದೆ ಬಿಡಲಾಗದೆಂದು ಪ್ರಧಾನಿ ಮೋದಿ ಸಂಕಲ್ಪ ತಳೆದಿದ್ದಾರೆಂದರು.
Discussion about this post