ಮಡಿಕೇರಿ ಅ.24 : ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸ್ನೇಹ ಮಿಲನ ಕಾರ್ಯಕ್ರಮ ಅ.29 ರಂದು ನಗರದ ಪೊಲೀಸ್ ಮೈತ್ರಿ ಭವನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎ. ಅಪ್ಪಯ್ಯ, ಅ.29 ರಂದು ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಮೈತ್ರಿ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದ್ದು, ಸಭೆಯಲ್ಲಿ ಪರಸ್ಪರ ಕುಂದುಕೊರತೆಗಳ ಸಮಾಲೋಚನೆ ನಡೆಸಲಾಗುವುದು.
11 ಗಂಟೆಯ ನಂತರ ನಡೆಯುವ ಸ್ನೇಹ ಮಿಲನ ಸಭಾ ಕಾರ್ಯಕ್ರಮದಲ್ಲಿ ಕೆಎಸ್ಆರ್ಪಿಯ ಎಡಿಜಿಪಿ ಕಮಲ್ ಪಂತ್, ಸಿಐಡಿ ವಿಭಾಗದ ಎಸ್ಪಿ ಟಿ.ಆರ್. ಸುರೇಶ್ ಹಾಗೂ ಕೊಡಗು ಜಿಲ್ಲಾ ಎಸ್ಪಿ ಡಾ.ರಾಜೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದೆಹಲಿಯ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರನ್ನು ಕೂಡ ಆಹ್ವಾನಿಸಲಾಗಿದ್ದು, ಆಗಮಿಸುವ ಸಾಧ್ಯತೆಗಳಿದೆಯೆಂದು ಎಂ.ಎ. ಅಪ್ಪಯ್ಯ ತಿಳಿಸಿದರು.
ಸಭೆಯಲ್ಲಿ ಸಂಘದ ಚಟುವಟಿಕೆ ಹಾಗೂ ಆಯವ್ಯಯದ ಬಗ್ಗೆ ಚರ್ಚಿಸಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಹುತಾತ್ಮರಿಗೆ ಹಾಗೂ ಮೃತ ಸದಸ್ಯರಿಗೆ ಸಭೆಯಲ್ಲಿ ಗೌರವ ನಮನ ಸಲ್ಲಿಸಲಾಗುವುದೆಂದು ಅಪ್ಪಯ್ಯ ಹೇಳಿದರು. ಇತ್ತೀಚೆಗೆ ಹಿರಿಯ ನಾಗರಿಕರ ದಿನಾಚರಣೆಯಂದು ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಕೊಂಪುಳಿರ ಪೊನ್ನಮ್ಮ ಅವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದೆಂದು ಮಾಹಿತಿ ನೀಡಿದರು.
ಸಂಘದಲ್ಲಿ ಒಟ್ಟು 740 ಸದಸ್ಯರಿದ್ದು, ಮರಣ ನಿಧಿಯನ್ನು ಕೂಡ ಸ್ಥಾಪಿಸಲಾಗಿದೆಯೆಂದು ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಅಚ್ಚುತನ್ ನಾಯರ್, ನಿರ್ದೇಶಕರುಗಳಾದ ಎನ್.ಕೆ. ಮಾದಯ್ಯ, ಚೀಯಣ್ಣ ಹಾಗೂ ಕುಶಾಲಪ್ಪ ಉಪಸ್ಥಿತರಿದ್ದರು.
news by: Indresh.
Discussion about this post