Read - < 1 minute
ಸಾಥ್ ನೀಡಿದ ವಿದ್ಯಾರ್ಥಿಗಳು, ಸ್ಪಂದಿಸಿದ ಗ್ರಾಮಸ್ಥರು
ಉಡುಪಿ: ಅ:೨೦- ಶಿರ್ವ ಗ್ರಾಮ ಪಂಚಾಯತನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಕಾರ್ಯಕ್ರಮಕ್ಕೆ ಗುರುವಾರ ವಾರದ ಸಂತೆಯಲ್ಲಿ ಚಾಲನೆ ನೀಡಲಾಯಿತು.
ಗ್ರಾ.ಪಂ. ಸದಸ್ಯರೊಂದಿಗೆ ಸ್ಥಳೀಯ ವಿದ್ಯಾರ್ಥಿಗಳು ಸಂತೆಗೆ ಬಂದ ಹಿರಿಯರು, ಮಹಿಳೆಯರ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲಗಳನ್ನು ಅವರ ಮನವೊಲಿಸಿ ತಾವು ಪಡೆದುಕೊಂಡು, ಅದಕ್ಕೆ ಬದಲಾಗಿ ಬಟ್ಟೆಯ ಚೀಲಗಳನ್ನು ನೀಡಿದರು, ಮಾತ್ರವಲ್ಲ ಪ್ಲಾಸ್ಟಿಕ್ ಚೀಲಗಳ ಬಳಕೆಯಿಂದ ಆಗುವ ಪರಿಸರ ಹಾನಿಯನ್ನು ತಿಳಿಸಿ, ಮುಂದೆಯೂ ಈ ಬಟ್ಟೆಯ ಚೀಲಗಳನ್ನೇ ಬಳಸುವಂತೆ ಮನವಿ ಮಾಡಿದರು. ಗ್ರಾಮಸ್ಥರು ಕೂಡ ಇದಕ್ಕೆ ಉತ್ತಮ ಸ್ಪಂದನೆ ನೀಡಿದರು.
ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ವಿಲ್ಸನ್ ರೊಡ್ರಿಗಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರೋಟರಿ ಅಧ್ಯಕ್ಷ ಡಾ.ಅರುಣ್ ಹೆಗ್ಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಶಿರ್ವ ರೋಟರಿಯಿಂದ ಈಗಾಗಲೇ ಗ್ರಾಮದ ಆಸಕ್ತ ಮಹಿಳೆಯರಿಗೆ ಬಟ್ಟೆಚೀಲ ತಯಾರಿಕೆ, ಪೇಪರ್ ಚೀಲ ತಯಾರಿಕೆಯ ಬಗ್ಗೆ ಉಚಿತವಾಗಿ 7 ದಿನಗಳ ತರಬೇತಿ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಪೇಟೆಗೆ ಬರುವಾಗ ಬಟ್ಟೆ ಕೈಚೀಲಗಳನ್ನು ಬಳಸುವಂತೆ ಕರೆಯಿತ್ತರು.
ಪಂಚಾಯತ್ ಅಧ್ಯಕ್ಷೆ ರಂಜನಿ ಪೂಜಾರಿ, ರೋಟರಿ ಸಹಾಯಕ ಗವರ್ನರ್ ಡಾ.ಗುರುರಾಜ್ ಕರಪತ್ರ ಬಿಡುಗಡೆ ಮಾಡಿದರು.
ನಂತರ ಶಿರ್ವ ಪೇಟೆಯ ಎಲ್ಲಾ ಅಂಗಡಿಗಳಿಗೆ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪಂಚಾಯತ್ ಸದಸ್ಯರು, ರೋಟರಿ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರು ಭೇಟಿ ನೀಡಿ, ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ದೇವದಾಸ್ ನಾಯಕ್, ಮಾಜಿ ಅಧ್ಯಕ್ಷ ಹಸನಬ್ಬಶೇಖ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಲೀನಾ ಮತಾಯಸ್,ರೋಟರಿ ನಿಕಟಪೂರ್ವ ಅಧ್ಯಕ್ಷ ಮೆಲ್ವಿನ್ ಡಿಸೋಜ,ಕಾಲೇಜಿನ ಉಪನ್ಯಾಸಕಿ ಲಕ್ಷ್ಮೀ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ವೈ.ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪಂಚಾಯತ್ ಸದಸ್ಯ ಕೆ.ಆರ್.ಪಾಟ್ಕರ್ ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಸುನಿಲ್ ಕಬ್ರಾಲ್ ಧನ್ಯವಾದವಿತ್ತರು.
Discussion about this post