ಈ ದೇಶದಲ್ಲಿ ಅಪ್ಪ-ಮಕ್ಕಳ ಮತ್ತು ಕುಟುಂಬ ರಾಜಕಾರಣ ಎಲ್ಲ ಪಕ್ಷಗಳಲ್ಲೂ ಇದೆ. ಆದರೆ ಪ್ರಾದೇಶಿಕ ಪಕ್ಷಗಳಲ್ಲಿ ಇದು ವಿಕೋಪಕ್ಕೆ ಹೋಗುತ್ತಿದೆ. ಅಪ್ಪ ಕಟ್ಟಿದ ಪಕ್ಷದ ಹುದ್ದೆ ಕುಟುಂಬೇತರರಿಗೆ ಸಿಗಬಾರದು ಎಂದು ಅವರ ಮಕ್ಕಳೇ ಖುರ್ಚಿಯೇರುತ್ತಿದ್ದಾರೆ. ಅಪ್ಪ ಜೀವಂತವಿರುವಾಗಲೇ ಮಕ್ಕಳಲ್ಲಿ ಅಪ್ಪನ ಖುರ್ಚಿಯನ್ನು ಗಿಟ್ಟಿಸುವ ದುರಾಸೆ ಹೆಚ್ಚುತ್ತಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಅಧಿಕಾರ ದಾಹ, ಕುಟುಂಬ ಕಲಹದಿಂದ ಪಕ್ಷಗಳು ಸಂಕಷ್ಟಕ್ಕೆ ಸಿಲುಕಿ ಕೆಲವು ಸಂದರ್ಭದಲ್ಲಿ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿವೆ. ಯಾವುದೇ ಸಿದ್ಧಾಂತವಿಲ್ಲದ ಈ ಕುಟುಂಬ ರಾಜಕೀಯ ದೇಶಕ್ಕೆ ಎಷ್ಟು ಮಾರಕ ಎನ್ನುವುದರ ಬಗ್ಗೆ ನಿಜಕ್ಕೂ ಚಿಂತನೆ ನಡೆಯಬೇಕಿದೆ.
ಅಧಿಕಾರ ಲಭಿಸಿದೊಡನೆ ಪ್ರಾದೇಶಿಕ ಪಕ್ಷಗಳಲ್ಲಿ ಕುಟುಂಬದ ಸದಸ್ಯರ ಮಧ್ಯೆಯೇ ಭಿನ್ನಮತ ಕಾಣಿಸಿಕೊಳ್ಳುವುದು ಭಾರತದ ರಾಜಕಾರಣದಲ್ಲಿ ಸಾಮಾನ್ಯವಾಗಿದೆ. ಒಂದು ಅಥವಾ ಎರಡು ಅವಧಿ ಆಳ್ವಿಕೆ ನಡೆಸಿದೊಡನೆ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ಸದಸ್ಯರ ಅಥವಾ ಸಹೋದರರ ಮಧ್ಯೆ ಭಿನ್ನಮತ ಉದ್ಭವಿಸುತ್ತಿದೆ. ತಂದೆಯ ನಂತರದ ಉತ್ತರಾಧಿಕಾರಿ ಹುದ್ದೆಯ ಮೇಲಿನ ಕಣ್ಣೇ ಇಷ್ಟೆಲ್ಲ ಕಚ್ಚಾಟಕ್ಕೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದಕ್ಕೆ ಸಾಕಷ್ಟು ಉದಾಹರಣೆ ಕೊಡಬಹುದು. ಮೊನ್ನೆ ಸಮಾಜವಾದಿ ಪಕ್ಷದಲ್ಲಿ ಎದ್ದಿದ್ದ ಬಿರುಗಾಳಿ ಇದಕ್ಕೊಂದು ಹೊಸ ಸೇರ್ಪಡೆಯಾಗಿದೆ.
ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಕಳೆದ ವಾರ ಕಾಣಿಸಿಕೊಂಡಿದ್ದ ಕುಟುಂಬ ಕಲಹ ಸದ್ಯ ತಣ್ಣಗಾಗಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಮಧ್ಯೆ ಈ ಮನಸ್ತಾಪ ಕಾಣಿಸಿಕೊಂಡಿತ್ತು. ಸಮಾಜವಾದಿ ಪಕ್ಷದ ರಾಷ್ಟ್ರೀಯ ಮುಖಂಡ ಮುಲಾಯಂ ಸಿಂಗ್ ಯಾದವ್ ತನ್ನ ಮಗ ಅಖಿಲೇಶ್‌ಗೆ ಪಟ್ಟಾಭಿಷೇಕ ನಡೆಸಿ ತನ್ನ ಸಹೋದರ ಶಿವಪಾಲ್‌ನನ್ನು ಸಚಿವನನ್ನಾಗಿ ಮಾಡಿದ್ದರು. ರಾಜ್ಯದ ಸಮಾಜವಾದಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಅಖಿಲೇಶ್ ಉಳಿಸಿಕೊಂಡಿದ್ದರು. ಅಧಿಕಾರ ಹಂಚಿಕೆಯಲ್ಲಿದ್ದ ಅಸಮಾಧಾನ ಇಬ್ಬರ ಮಧ್ಯೆ ಭುಗಿಲೆದ್ದ ಕಾರಣ ಅಖಿಲೇಶ್ ಚಿಕ್ಕಪ್ಪನನ್ನು ಸಂಪುಟದಿಂದ ವಜಾ ಮಾಡಿದರು. ಪರಿಣಾಮವಾಗಿ ಪಕ್ಷದಲ್ಲಿ ಎರಡು ಬಣ ಉಂಟಾಗಿ ಭಿನ್ನಮತ ಸೃಷ್ಟಿಯಾಗಿತ್ತು. ಆದರೆ ಮುಲಾಯಂ ಸದ್ಯ ತಣ್ಣಗಾಗಿಸಿ ಜಾಣ್ಮೆ ಮೆರೆದಿದ್ದಾರೆ.
ಮುಂದಿನ ವರ್ಷಾರಂಭದಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಸ್ಥಾನದ ಮೇಲಿನ ಕಣ್ಣು ಇಷ್ಟಕ್ಕೆಲ್ಲ ಕಾರಣವಾಗಿದೆ. ಕಳೆದ ತಿಂಗಳು ನಡೆದ ಸಮೀಕ್ಷೆಯೊಂದರಲ್ಲಿ ಸಮಾಜವದಿ ಪಕ್ಷಕ್ಕೆ ಮುನ್ನಡೆ ಸಿಗಲಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಅಖಿಲೇಶ್ ಮತ್ತೆ ಸಿಎಂ ಆಗುವ ಎಲ್ಲ ಅವಕಾಶ ಇದ್ದುದದರಿಂದ ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ಎದುರಾಗಿದೆ.
ಡಿಎಂಕೆ:
ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಂಗಂ (ಡಿಎಂಕೆ)ಯು ಇದಕ್ಕೆ ಇನ್ನೊಂದು ಉದಾಹರಣೆ. ೯೨ರ ಇಳಿವಯಸ್ಸಿನಲ್ಲೂ ಆ ಪಕ್ಷದ ಮುಖ್ಯಸ್ಥ ಎಂ. ಕರುಣಾನಿಧಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇತ್ತೀಚೆಗೆ ಜರುಗಿದ ವಿಧಾನಸಭೆ ಚುನಾವಣೆಯಲ್ಲಿ ಬಿಂಬಿಸಲ್ಪಟ್ಟಿದ್ದರು. ಅವರ ಮಗ ಎಂ. ಕೆ. ಸ್ಟಾಲಿನ್ ಸಹ ರಾಜಕಾರಣಿಯಾಗಿ ರಾಜ್ಯದಲ್ಲಿ ಹೆಸರು ಮಾಡಿದ್ದರು. ಕರುಣಾನಿಧಿ ಇನ್ನೊಬ್ಬ ಮಗ ಎಂ. ಕೆ ಅಳಗಿರಿಗೆ ಸ್ಟಾಲಿನ್‌ಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಕರುಣಾನಿಧಿ ಕೊಟ್ಟಿಲ್ಲ. ಇದರಿಂದ ಸಿಟ್ಟಿಗೆದ್ದ ಅಳಗಿರಿ ಬಂಡಾಯವೆದ್ದಾಗ ಆತನನ್ನು ಪಕ್ಷವಿರೋಧಿ ಚಟುವಟಿಕೆ ಆಧಾರದ ಮೇಲೆ ಉಚ್ಛಾಟನೆ ಮಾಡಿದ್ದರು. ಆದರೆ ಕರುಣಾನಿಧಿ ಸ್ಟಾಲಿನ್‌ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಧೈರ್ಯ ತೋರಲಿಲ್ಲ. ಏಕೆಂದರೆ ಕುಟುಂಬ ರಾಜಕಾರಣದ ವಿಚಾರ ಅದರಲ್ಲೂ ಪುತ್ರವ್ಯಾಮೋಹದ ಆರೋಪ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ. ಜೊತೆಗೆ ಅಣ್ಣ-ತಮ್ಮಂದಿರಲ್ಲೂ ಮುಂದೆ ಕಲಹ ಎದುರಾಗಬಹದೆನ್ನುವ ದೂರಾಲೋಚನೆ ಅವರಲ್ಲಿತ್ತು.
ಮಕ್ಕಳಿಬ್ಬರ ಮಧ್ಯೆ ಗಲಾಟೆ ತಪ್ಪಿಸಲು ತಾನು ಜೀವಂತವಿರುವವರೆಗೆ ತಾನೇ ಪಕ್ಷದ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಕರುಣಾನಿಧಿ ಮಗಳು ಕನಿಮೋಳಿ ಸಹ ರಾಜಕಿಯದಲ್ಲಿದ್ದಾರೆ. ಈಕೆ ಸ್ಟಾಲಿನ್ ಬೆಂಬಲಿಗಳು. ಸದ್ಯ ಕರುಣಾನಿಧಿ ಹಿಡಿತದಲ್ಲೇನೋ ಪಕ್ಷ ಇದೆ. ಅದರ ಅವರ ನಂತರ ಮಕ್ಕಳಲ್ಲಿ ಅಧಿಕಾರಕ್ಕಾಗಿ ಕಲಹ ಭುಗಿಲೇಳುವುದರಲ್ಲಿ ಅನುಮಾನವೇ ಇಲ್ಲ.
ತೆಲುಗುದೇಶಂ:
ಎನ್.ಟಿ. ರಾಮರಾವ್ ಅವರ ತೆಲುಗುದೇಶಂ ಪಕ್ಷದ ಹಿಡಿತ ಈಗ ಚಂದ್ರಬಾಬು ನಾಯ್ಡು ಕೈಲಿದೆ. ಎನ್ಟಿಆರ್ ನಿಧನಾನಂತರ ಅವರ ಪತ್ನಿ ಲಕ್ಷ್ಮೀ ಪಾರ್ವತಿ ಅಧ್ಯಕ್ಷೆಯಾದರೂ ಚಂದ್ರಬಾಬು ನಾಯ್ಡು (ಎನ್ಟಿಆರ್ ಅಳಿಯ) ಅವರಿಂದ ಪಕ್ಷವನ್ನೇ ಹೈಜಾಕ್ ಮಾಡಿದ್ದರು. ನಂತರ ಪಕ್ಷವನ್ನು ಕಟ್ಟಿ ಬೆಳೆಸಿದರು. ಅದರೆ ಇದಕ್ಕೆ ಎನ್‌ಟಿಆರ್ ಪುತ್ರ ಎನ್. ಬಾಲಕೃಷ್ಣ, ಲಕ್ಷ್ಮೀ ಪಾರ್ವತಿ ಮತ್ತು ಪುತ್ರಿ ಪುರಂದೇಶ್ವರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇವರ ವೈಷಮ್ಯ ಎಲ್ಲಿಯವರೆಗೆ ಬೆಳೆಯಿತೆಂದರೆ ಪುರಂದೇಶ್ವರಿ ಯುಪಿಎ ಸರ್ಕಾರದಲ್ಲ್‌ಸಚಿವೆಯಾಗಿದ್ದರು. ನಂತರ ಬಿಜೆಪಿ ಸೇರಿದರು. ಆದರೆ ನಾಯ್ಡುಗೆ ಬಿಜೆಪಿ ಸಖ್ಯವಿದ್ದುದರಿಂದ ಪುರಂದೇಶ್ವರಿಗೆ ಬಿಜೆಪಿಯಲ್ಲಿ ಯಾವ ಹುದ್ದೆಯೂ ಸಿಗದಂತೆ ಮಾುಡಿದರು.
ಜೆಡಿಎಸ್:
ಕರ್ನಾಟಕದ ಜಾತ್ಯತೀತ ಜನತಾದಳದಲ್ಲೂ ಅಪ್ಪ-ಮಕ್ಕಳ ರಾಜ್ಯಭಾರವೇ ನಡೆದಿದೆ. ಎರಡನೆಯ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಮೊದಲ ಪುತ್ರ ಮಂತ್ರಿ ಪ್ರಭಾವಿ ಸ್ಥಾನಕ್ಕಷ್ಟೇ ತೃಪ್ತಿ ಪಡಬೇಕಾಯಿತು. ನಂತರ ಮಕ್ಕಳಲ್ಲಿ ಮತ್ತೆ ಅಧಿಕಾರಕ್ಕಾಗಿ ಕಚ್ಚಾಟ ನಡೆಯಬಾರದೆಂದು ತೀರ್ಮಾನಿಸಿ ದೇವೇಗೌಡರೇ ಪಕ್ಷದ ಪರಮೋಚ್ಛ ನಾಯಕರಾಗಿದ್ದಾರೆ. ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿದ್ದಾರೆ. ಜೆಡಿಎಸ್ ಮುಂದೆ ಅಧಿಕಾರಕ್ಕೆ ಬಂದರೆ ಅವರೇ ಸಿಎಂ ಅಭ್ಯರ್ಥಿ ಎಂದು ಬಿಂಬಿತರಾಗುತ್ತಿದ್ದಾರೆ. ಕುಮಾರಸ್ವಾಮಿ ಪತ್ನಿಯೂ ರಾಜಕೀಯದಲ್ಲಿದ್ದಾರೆ.ರೇವಣ್ಣ ಅವರ ಪತ್ನಿ, ಪುತ್ರ ರಾಜಕೀಯಕ್ಕೆ ಧುಮುಕಿದ್ದಾರೆ. ಕುಟುಂಬ ರಾಜಕಾರಣವೇ ಇಲ್ಲಿ ನೆಲೆಯೂರಿದೆ.
ಆರ್‌ಜೆಡಿ:
ಲಾಲೂ ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳದಲ್ಲೂ ಅವರ ಇಬ್ಬರು ಪುತ್ರರು ಮತ್ತು ಒಬ್ಬ ಮಗಳು ತಂದೆ ಹೊಂದಿದ್ದ ಸ್ಥಾನಕ್ಕಾಗಿ ಈಗಿಂದಲೇ ಯತ್ನ ನಡೆಸಿದ್ದಾರೆ. ಪುತ್ರರಾದ ತೇಜಸ್ವಿ ಮತ್ತು ತೇಜ್ ಪ್ರತಾಪ್ ಮತ್ತು ಪುತ್ರಿ ಮಿಸಾ ಭಾರತಿ ಅವರಲ್ಲಿ ಯಾವುದೇ ಕಲಹ ಕಾಣಿಸಿಕೊಳ್ಳಬಾರದೆಂದು ಸದ್ಯಕ್ಕೆ ತೇಜಸ್ವಿ ಅವರನ್ನು ಬಿಹಾರದ ಉಪಮುಖ್ಯಮಂತ್ರಿಯನ್ನಾಗಿ, ಇನ್ನೊಬ್ಬ ಮಗನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ. ಹಿರಿತನ ಮತ್ತು ರಾಜಕೀಯದ ಅನುಭವದ ದೃಷ್ಟಿಯಿಂದ ಇದು ಸಮ್ಮತ ಎಂದು ಅಭಿಪ್ರಾಯ ಪಡಲಾಗುತ್ತಿದೆ.
ಶಿವಸೇನಾ:
ಕಟ್ಟಾ ಹಿಂದೂ ನಾಯಕರಾಗಿದ್ದ ಬಾಳಾ ಸಾಹೇಬ್ ಠಾಕ್ರೆ ೧೯೬೬ರಲ್ಲೇ ಸ್ಥಾಪಿಸಿದ ಪಕ್ಷ ಶಿವಸೇನೆ. ಠಾಕ್ರೆ ಹಿರಿಯ ಮಗ ಉದ್ಧವ್ ಮತ್ತು ಸಹೋದರ ಸಂಬಂಧಿ ರಾಜ್ ಠಾಕ್ರೆ ಜೊತೆ ಸೇರಿ ೨೦೧೩ರವರೆಗೆ ಕಾಪಾಡಿಕೊಂಡು ಬಂದಿದ್ದರು. ೨೦೦೫ರಲ್ಲಿ ಠಾಕ್ರೆ ವೃದ್ಧಾಪ್ಯದಿಂದಾಗಿ ಹಿರಿಯ ಮಗ ಉದ್ಧವ್‌ನನ್ನು ಪಕ್ಷದ ಮುಖ್ಯಸ್ಥ ಎಂದು ಬಿಂಬಿಸಿದ ನಂತರ ಕಚ್ಚಾಟ ಆರಂಭವಾಗಿತ್ತು. ಏಕೆಂದರೆ ರಾಜ್ ಠಾಕ್ರೆ ಸಹ ಪ್ರಭಾವಿ ಮತ್ತು ತನ್ನದೇ ಆದ ವರ್ಚಸ್ಸಿನಿಂದ ಜನಮನಗೆದ್ದಿದ್ದರು. ಇದರಿಂದ ಬೇಸರಗೊಂಡ ರಾಜ್ ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಕಟ್ಟಿದರು. ೨೦೧೨ರಲ್ಲಿ ಠಾಕ್ರೆ ಮರಣಹೊಂದಿದರು. ಕೆಲವು ತಿಂಗಳಿನಿಂದ ಮತ್ತೆ ಇಬ್ಬರನ್ನೂ ಒಂದೆಡೆ ಸೇರಿಸುವ ಯತ್ನ ನಡೆಯುತ್ತಿದೆ.
ಜೆಎಂಎಂ:
ಜಾರ್ಖಂಡ್‌ನ ಶಿಬು ಸೊರೆನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾದಲ್ಲಿ ಪಕ್ಷದ ಉನ್ನತ ಹುದ್ದೆಗಾಗಿ ಕುಟುಂಬ ಕಲಹ ೨೦೦೯ರಲ್ಲೇ ಕಾಣಿಸಿಕೊಂಡಿದೆ. ಸೊರೆನ್ ಅವರ ಹಿರಿಯ ಪುತ್ರ ದುರ್ಗಾ ಸೊರೆನ್ ಎಂಎಲ್‌ಎ ಆಗಿದ್ದಾಗ ಅಕಾಲಿಕ ಸಾವನ್ನಪ್ಪಿದರು. ಇವರ ಸ್ಥಾನವನ್ನು ಅವರ ಪತ್ನಿ ಸೀತಾ ಸೊರೆನ್ ತುಂಬುತ್ತಿದ್ದಾರೆ. ಈ ಮಧ್ಯೆ ಸೊರೆನ್ ಅವರ ಇನ್ನಿಬ್ಬರು ಪುತ್ರರಾದ ಹೇಮಂತ್ ಮತ್ತು ಬಸಂತ್ ತಾವೇ ಮುಂದಾಳತ್ವ ವಹಿಸಬೇಕೆಂದು ಹಠ ಹಿಡಿದಿದ್ದು ಅಂತಃಕಲಹ ಮುಂದುವರೆದಿದೆ. ಆದರೆ ಸೊಸೆ ಸೀತಾ ಸದ್ಯ ಎಮ್ಮೆಲ್ಲೆ ಆಗಿರುವುದರಿಂದ ವಿವಾದ ಇತ್ಯರ್ಥವಾಗದೆ ಉಳಿದಿದೆ. ಹೇಮಂತ್ ಮುಂದಿನ ಸಿಎಂ ಉಮೇದುವಾರ ತಾನೇ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಶಿಬು ಸಾಕಷ್ಟು ಸಂದರ್ದಲ್ಲಿ ಹೇಮಂತ್ ವಿರುದ್ದ ಕಿಡಿಕಾರಿದ್ದಾರೆ. ಇನ್ನೊಬ್ಬ ಮಗ ಬಸಂತ್ ರಾಜ್ಯಸಭೆ ಸದಸ್ಯರಾಗಿದ್ದಾರೆ.
ತೆಲಂಗಾಣ ರಾಷ್ಟ್ರ ಸಮಿತಿ:
ತೆಲಂಗಾಣದಲ್ಲಿ ಸದ್ಯ ಅಧಿಕಾರದಲ್ಲಿರುವ ಈ ಪಕ್ಷದ ಮುಖ್ಯಸ್ಥ ಅಲ್ಲಿನ ಹಾಲಿ ಸಿಎಂ ಕೆ. ಚಂದ್ರಶೇಖರರಾವ್. ಅವರ ಹಿರಿಯ ಮಗ ರಾಮರಾವ್ ಅಪ್ಪನ ಸಂಪುಟದಲ್ಲಿ ಪ್ರಭಾವಿ ಸಚಿವ. ರಾವ್ ಅವರ ಮಗಳು ಕವಿತಾ ಲೋಕಸಭೆ ಸದಸ್ಯೆ. ಸದ್ಯ ಇವರಲ್ಲಿ ಅಂತಃಕಲಹ ಇಲ್ಲ.
Discussion about this post