ಬೆಂಗಳೂರು, ಸೆ.4: ಗೋವು ಭಗವಂತನ ಸೃಷ್ಟಿಯ ಅದ್ಭುತ, ಸಕಲ ರೋಗನಿವಾರಕವಾದ ಗೋಮೂತ್ರ ಪರಮಾದ್ಭುತ, ಗೋಮೂತ್ರ ವಸ್ತುವಿನಲ್ಲಿರುವ ಋಣಾತ್ಮಕತೆಯನ್ನು ಧನಾತ್ಮಕವಾಗಿಸುವ ವಿಶೇಷ ಶಕ್ತಿಯನ್ನು ಹೊಂದಿದೆ ಮಾತ್ರವಲ್ಲ, ಎಂತಹಾ ವಿಷವೇ ಆದರೂ ಅದನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಗೋಮೂತ್ರದ ಬಳಕೆಯಿಂದ ಗೋವಿಗೂ ತೊಂದರೆ ಇಲ್ಲ, ಬಳಸುವವರಿಗೂ ಸಮಸ್ಯೆ ಇಲ್ಲ, ರೈತರಿಗೂ ಲಾಭದಾಯಕ, ಅದೇ ಗೋಮಾಂಸದ ಬಳಕೆಯಿಂದ ಗೋವುಗಳ ಮಾರಣಹೋಮವಾಗುತ್ತದೆ, ಗೋಮಾಂಸ ಸೇವನೆಯಿಂದ ಮಾರಣಾಂತಿಕ ಕಾಯಿಲೆ ಬರುತ್ತದೆ, ರೈತರಿಗೂ ಸಮಸ್ಯೆ, ಕಸಾಯಿಖಾನೆಗಳಲ್ಲಿ ಕೆಲಸ ಮಾಡುವವರು ನೆಮ್ಮದಿಯ ಜೀವನ ನೆಡಸಲಾರರು. ಹಾಗಾಗಿ ಗವ್ಯೋತ್ಪನ್ನದ ಚಕ್ರವನ್ನು ಅಮೃತ ಚಕ್ರ ಎನ್ನಬಹುದಾಗಿದ್ದು, ಗೋಮಾಂಸದ ಬಲಕೆ ವಿಷಚಕ್ರವಾಗಿದೆ. ಸರ್ಕಾರಗಳು ಈ ಬಗ್ಗೆ ಎಚ್ಚೆತ್ತು ಗೋಮಾಂಸದ ಬದಲು, ಗೋಮೂತ್ರವನ್ನು ರಫ್ತುಮಾಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.
ಗೋವಿಗಾಗಿ ಮೀಸಲಾಗಿರುವ ಗೋಮಾಳಗಳನ್ನು ನುಂಗಿರುವ ಪರಿಣಾಮ, ಗೋವುಗಳು ತಿನ್ನಲು ಏನೂ ಸಿಗದೆ ಹಾದಿಬೀದಿಗಳಲ್ಲಿ ಸಿಗುವ ಮಾರಣಾಂತಿಕವಾದ ಪ್ಲಾಸ್ಟಿಕ್ ತಿಂದು ಮರಣವನ್ನಪ್ಪುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ ಜನಾಂದೋಲನವನ್ನು ಮಾಡಲು ಗೋಯಾತ್ರೆಗಳನ್ನುಸಂಕಲ್ಪಿಸಲಾಗಿದೆ ಎಂದ ಶ್ರೀಗಳು. ಸರ್ಕಾರಗಳು ಗೋವಿನ ಕುರಿತಾದ ವಿಚಾರಗಳತ್ತ ಗಮನಹರಿಸಲಿ, ಜನರು ಗವ್ಯೋತ್ಪನ್ನವನ್ನು ಬಳಸುವಂತಾಗಲಿ ಎಂಬ ಸಂದೇಶವನ್ನು ನೀಡಿದರು.
ವಿಭೂತಿಪುರ ಸಂಸ್ಥಾನ ಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಂತಸಂದೇಶ ನೀಡಿ, ತಾಯಿಯನ್ನು ಬಿಟ್ಟರೆ ಭಾವಕ್ಕೆ ಸ್ಪಂದಿಸುವುದು ಗೋವು ಮಾತ್ರ, ಹಿಂದೆ ಗೋವಿನಿಂದ ಸಂಪತ್ತನ್ನು ಅಳೆಯಲಾಗುತ್ತಿತ್ತು ಎಂದ ಶ್ರೀಗಳು, ಮುಂಬರುವ ಗೋಯಾತ್ರೆಗೆ ಎಲ್ಲರೀತಿಯ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು.
ಯೋಗಗುರುವಾಗಿ ಗೋವಿನ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಉಮಾಮಹೇಶ್ವರ್ ಹಾಗೂ ಗೋಸೇವಕ ಸುಬ್ರಹ್ಮಣ್ಯ ಪ್ರಸಾದ್ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಉಮಾಮಹೇಶ್ವರ್ ಅವರು ಗೋವು ಹಾಗು ಯೋಗದ ಕುರಿತು ವಿಚಾರಗಳನ್ನು ಹಂಚಿಕೊಂಡರು. ಶ್ರೀಭಾರತೀಪ್ರಕಾಶನವು ಹೊರತಂದ ಗಮಕ ಕಲಾದರ್ಶನ ಪುಸ್ತಕವನ್ನು ಗಮಕಕಲಾ ಪರಿಷತ್ತಿನ ಎಂ ಆರ್ ಸತ್ಯನಾರಾಯಣ್ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಉದ್ಯಮಿಗಳಾದ ಶ್ರೀಸುರೇಶ್ ಶೆಟ್ಟಿ ಅವರು ಲೋಕಾರ್ಪಣೆ ಮಾಡಿದರು. ಪುಸ್ತಕದ ಲೇಖಕರಾದ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ದಂಪತಿಗಳು, ನೃತ್ಯಕಲಾ ಅಕಾಡೆಮಿಯ ಅಧ್ಯಕ್ಷರಾದ ಗಂಗಮ್ಮಾ ಕೇಶವಮೂರ್ತಿ, ಗಮಕಕಲಾ ಪರಿಷತ್ತಿನ ಎಂ ಆರ್ ಸತ್ಯನಾರಾಯಣ್, ಉದ್ಯಮಿಗಳಾದ ಶ್ರೀಸುರೇಶ್ ಶೆಟ್ಟಿ ಅವರುಗಳನ್ನು ಶ್ರೀಗಳು ಆಶೀರ್ವದಿಸಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ವಾಣಿಶ್ರೀ ಪಳ್ಳತ್ತಡ್ಕ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಸಾಮಾಜಿಕ ಕಾರ್ಯಕರ್ತರಾದ ಚಕ್ರವರ್ತಿ ಸೂಲಿಬೇಲೆ, ನಿತ್ಯಾನಂದ ಸೂರ್ಯವಂಶಿ, ಹಿರಿಯ ನ್ಯಾಯವಾದಿಗಳಾದ ಪ್ರಮೀಳಾ ನೇಸರ್ಗಿ, ಮಂಡ್ಯಾದ ಹುತಾತ್ಮ ಯೋಧ ಜಯರಾಮೇಗೌಡ ಅವರ ಪತ್ನಿ ಹಾಗೂ ಚೈನಾದ ಗಡಿಯಲ್ಲಿ ನಿಂತು ದೇಸಕಾಯುವ ಯೋಧ ಬೈರೇಶ್ ಉಪಸ್ಥಿತರಿದ್ದು ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
Discussion about this post