ನವದೆಹಲಿ:ಸೆ:18:ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಎಂಬ್ರೇಯರ್ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ಅಪರಾಧ ದಳ(ಸಿಬಿಐ)ದ ಅಧಿಕಾರಿಗಳು ರಕ್ಷಣಾ ಇಲಾಖೆ ಅಧಿಕಾರಿಗಳ ವಿರುದ್ಧ ಅಧಿಕೃತ ತನಿಖೆ ಆರಂಭಿಸಿದ್ದಾರೆ.
ಹಗರಣವನ್ನು ಇಂದು ಅಧಿಕೃತವಾಗಿ ಕೈಗೆತ್ತಿಕೊಂಡಿರುವ ಸಿಬಿಐ ಅಧಿಕಾರಿಗಳು, ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಎಂಬ್ರೇಯರ್ ವಿಮಾನ ಖರೀದಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಕೂಡ ಭಾಗಿಯಾಗಿದ್ದು, ತಾನು ಸಂಶೋಧಿಸಿದ್ದ ರಾಡಾರ್ ಗಳನ್ನು ಈ ವಿಮಾನಗಳಿಗೆ ಅಳವಡಿಸಲು ಡಿಆರ್ ಡಿಒ ಮುಂದಾಗಿತ್ತು. ಹೀಗಾಗಿ ಡಿಆರ್ ಡಿಒ ಅಧಿಕಾರಿಗಳನ್ನು ಕೂಡ ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಮಾನ ಖರೀದಿಯಲ್ಲಿ ನೇರ ಮತ್ತು ಪರೋಕ್ಷವಾಗಿ ಸಂಬಂಧ ಹೊಂದಿರುವ ಸಂಸ್ಥೆಯ ಷೇರುದಾರರು, ಕಚ್ಛಾ ಸಾಮಗ್ರಿ ವಿತರಕರ ಮೇಲೂ ಸಿಬಿಐ ನಿಗಾ ವಹಿಸಿದ್ದು, ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳ ಸಂಗ್ರಹಕ್ಕೆ ಸಿಬಿಐ ಮುಂದಾಗಿದೆ.
ಡಿಆರ್ ಡಿಒ ವಿಜ್ಞಾನಿಗಳು ಸಂಶೋಧಿಸಿದ್ದ ನೂತನ ರಾಡಾರ್ ಗಳನ್ನು ವಿಮಾನಕ್ಕೆ ಅಳವಡಿಸುವ ಸಲುವಾಗಿ 2008ರಲ್ಲಿ ಭಾರತ ಬ್ರೆಜಿಲ್ ಮೂಲದ ಎಂಬ್ರೇಯರ್ ವಿಮಾನ ತಯಾರಿಕಾ ಸಂಸ್ಥೆಯಿಂದ 208 ಮಿಲಿಯನ್ ಡಾಲರ್ ಮೊತ್ತದಲ್ಲಿ ವಿಮಾನಗಳನ್ನು ಖರೀದಿಸಿತ್ತು. ಈ ಒಪ್ಪಂದವನ್ನು ಕುದುರಿಸಲು ಭಾರತ ಮೂಲದ ಬ್ರಿಟನ್ ಪ್ರಜೆ ಭಾರಿ ಪ್ರಮಾಣದಲ್ಲಿ ಎಂಬ್ರೇಯರ್ ಸಂಸ್ಥೆಯಿಂದ ಕಿಕ್ ಬ್ಯಾಕ್ ಪಡೆದಿದ್ದ ಎಂದು ಬ್ರೆಜಿಲ್ ನ ಖ್ಯಾತ ಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿ ಬೆನ್ನಲ್ಲೇ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಬ್ರೆಜಿಲ್ ಮೂಲದ ಎಂಬ್ರೇಯರ್ ಸಂಸ್ಥೆಯಿಂದ ಸ್ಪಷ್ಟನೆ ಕೇಳಿದ್ದರು. ಅಲ್ಲದೆ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐ ಸಂಸ್ಥೆಯನ್ನೂ ಕೇಳಿದ್ದರು. ಈ ಹಿನ್ನಲೆಯಲ್ಲಿ ತನಿಖೆ ಆರಂಭವಾಗಿದೆ.
Discussion about this post