Read - < 1 minute
ಬೆಂಗಳೂರು, ಅ.10: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಶುಕ್ರವಾರದಿಂದ ಆರಂಭಗೊಂಡ ಆಯುಧ ಪೂಜೆ ಇಂದು ಕೂಡ ಮುಂದುವರೆದಿತ್ತು. ನಿರಂತರ ರಜೆಯ ಹಿನ್ನೆಲೆಯಲ್ಲಿ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಶುಕ್ರವಾರವೇ ಆಯುಧ ಪೂಜೆ ಮಾಡಲಾಗಿತ್ತು.
ಇಂದು ವಸತಿ ಸಚಿವ ಎಂ. ಕೃಷ್ಣಪ್ಪ ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಆಯುಧ ಪೂಜೆ ಮಾಡಿದರು. ಕಚೇರಿ ನವೀಕರಣದ ಹಿನ್ನೆಲೆಯಲ್ಲಿ ಕೃಷ್ಣಪ್ಪ ಅವರ ಕಚೇರಿಯಲ್ಲಿ ಶುಕ್ರವಾರ ಅಯುಧ ಪೂಜೆ ಮಾಡಿರಲಿಲ್ಲ.
ಇಂದು ಬೆಳಗ್ಗೆಯಿಂದಲೇ ಖಾಸಗಿ ಕಚೇರಿಗಳು ಸೇರಿದಂತೆ ವಿವಿಧ ಕಾರ್ಖಾನೆ, ಅಂಗಡಿ, ಮಳಿಗೆಗಳು ಹಾಗೂ ವಾಹನಗಳಿಗೆ ಪೂಜೆ ಸಲ್ಲಿಸುತ್ತಿರುವುದು ನಗರದೆಲ್ಲೆಡೆ ಕಂಡುಬಂದಿತು.
ಶನಿವಾರ ಹಾಗೂ ಭಾನುವಾರ ಬಹುತೇಕ ಖಾಸಗಿ ಸಂಸ್ಥೆಗಳು ಹಾಗೂ ಕಂಪನಿಗಳಲ್ಲಿ ಆಯುಧ ಪೂಜೆ ಮಾಡಲಾಗಿತ್ತು. ಕಚೇರಿಗಳು, ವಾಹನಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿತ್ತು.
ಇಂದು ಬಹುತೇಕ ಜನರು ತಮ್ಮ ಸ್ವಂತ ಮನೆ ಹಾಗೂ ವಾಹನಗಳಿಗೆ ತಳಿರು, ತೋರಣ ಹಾಗೂ ಹೂವಿನಿಂದ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಹೀಗಾಗಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದಲೂ ನಿರಂತರವಾಗಿ ಆಯುಧ ಪೂಜೆ ಕಾರ್ಯಕ್ರಮಗಳು ನಡೆದವು.
Discussion about this post