Read - < 1 minute
ನವದೆಹಲಿ: ಸೆ:25; ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಮಿಂಚುತ್ತಿದ್ದು , ಏಕದಿನ ಹಾಗೂ ಟ್ವೆಂಟಿ-20 ಮಾದರಿಗೂ ಕೊಹ್ಲಿ ಅವರೇ ನಾಯಕರಾಗಲಿ ಎಂದು ಹಲವಾರು ಕ್ರಿಕೆಟ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ 2019ರ ವಿಶ್ವಕಪ್ನವರೆಗೂ ಸೀಮಿತ ಓವರ್ಗಳ ನಾಯಕ ಹಾಗೂ ವಿಕೆಟ್ಕೀಪರ್ ಆಗಿ ಮಹೇಂದ್ರ ಸಿಂಗ್ ಧೋನಿಯೇ ಮುಂದುವರೆಯಲಿದ್ದಾರೆ ಎಂದು ಆಯ್ಕೆ ಮಂಡಳಿಯ ನೂತನ ಸದಸ್ಯ ಹಾಗೂ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಸಬಾ ಕರೀಮ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗ್ರೇಟ್ ಫಿನಿಶರ್ ಎಂದೇ ಖ್ಯಾತರಾಗಿರುವ ಮಹೇಂದ್ರ ಸಿಂಗ್ ಧೋನಿಯು ಇತ್ತೀಚೆಗೆ ಅಂತಿಮ ಓವರ್ಗಳಲ್ಲಿ ಎಡವುತ್ತಿರುವುದರಿಂದ ವೆಸ್ಟ್ಇಂಡೀಸ್ ವಿರುದ್ಧದ ಟ್ವೆಂಟಿ-20 ಪಂದ್ಯ ಸೇರಿದಂತೆ ಹಲವು ಪ್ರಮುಖ ಪಂದ್ಯಗಳನ್ನು ಭಾರತ ಕೈಚೆಲ್ಲಿದೆ ಎಂದು ಹಲವರು ಟೀಕಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಗೆ ಸೀಮಿತ ಓವರ್ಗಳು ಹಾಗೂ ಟ್ವೆಂಟಿ- 20 ಮಾದರಿಯ ಆಟಕ್ಕೂ ತಂಡದ ಜವಾಬ್ದಾರಿಯನ್ನು ವಹಿಸಬೇಕೆಂಬ ಮಾತುಗಳು ಕೇಳಿಬಂದಿದೆ. ಒಂದು ವೇಳೆ ಕೊಹ್ಲಿ ಈ ಮಾದರಿಗೂ ನಾಯಕನಾದರೂ ಕೂಡ 2019ರ ವಿಶ್ವಕಪ್ವರೆಗೂ ಮಹೇಂದ್ರ ಸಿಂಗ್ ಧೋನಿ ಒಬ್ಬ ಬ್ಯಾಟ್ಸ್ಮನ್ ಹಾಗೂ ವಿಕೆಟ್ಕೀಪರ್ ಆಗಿ ತಂಡದಲ್ಲಿ ಮುಂದುವರೆ ಯುತ್ತಾರೆ ಎಂದು ಸಬಾ ಕರೀಮ್ ತಿಳಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ವಿದಾಯ ಹೇಳಿದ ನಂತರ ವಿಕೆಟ್ ಕೀಪರ್ ಸ್ಥಾನ ತುಂಬಿರುವ ವೃದ್ಧಿಮಾನ್ ಶಾ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಕೂಡ ಸೀಮಿತ ಓವರ್ಗಳಲ್ಲಿ ವಿಕೆಟ್ಕೀಪಿಂಗ್ ಸಾಮಥ್ರ್ಯ ಇನ್ನು ಅವರಿಗೆ ಸಮರ್ಪಕವಾಗಿ ಒಲಿದಿಲ್ಲ. ಹಾಗೆಯೇ ತಂಡದಲ್ಲಿರುವ ಮತ್ತೊಬ್ಬ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ಗೂ ಕೂಡ ಈ ಮಾದರಿಯಲ್ಲಿ ಸಾಕಷ್ಟು ಅನುಭವವಿಲ್ಲದಿರುವುದರಿಂದ ಧೋನಿಯೇ ಸೀಮಿತ ಓವರ್ಗಳ ವಿಕೆಟ್ಕೀಪಿಂಗ್ ಸೂಕ್ತ ಆಟಗಾರ ಎಂದು ಸಬಾ ಕರೀಮ್ ತಿಳಿಸಿದ್ದಾರೆ.
ಧೋನಿಯು ದೈಹಿಕವಾಗಿ ಇನ್ನು ಸಮರ್ಥರಾಗಿರುವುದರಿಂದ 2019ರ ವಿಶ್ವಕಪ್ವರೆಗೂ ಅವರೇ ನಾಯಕ ಹಾಗೂ ವಿಕೆಟ್ಕೀಪರ್ ಆಗಿ ಮುಂದುವರೆಯಲಿ ಎಂಬುದು ಅನೇಕರ ಆಶಯವಾಗಿದೆ.
ಮುಂಬರುವ ನ್ಯೂಜಿಲೆಂಡ್ ಏಕದಿನ ಸರಣಿಯು ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ನಿಜಕ್ಕೂ ಅಗ್ನಿಪರೀಕ್ಷೆ ಆಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
Discussion about this post