Read - < 1 minute
ನವದೆಹಲಿ, ಅ.19: ದೇಶದ ಮೊದಲ ಸ್ವದೇಶಿ ನಿರ್ಮಿತ ಪರಮಾಣು ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿಹಂತ್ ನೌಕಾಪಡೆಗೆ ಸೇರ್ಪಡೆಯಾಗಿದ್ದು, ಸೇವೆಯನ್ನು ಆರಂಭಿಸಿದೆ.
ಆರು ಸಾವಿರ ಟನ್ ಸಾಮಥ್ರ್ಯದ ಅಣು ಚಾಲಿತ ಐಎನ್ಎಸ್ ಅರಿಹಂತ್ ಜಲಾಂತರ್ಗಾಮಿಯನ್ನು ನೌಕಾ ಪಡೆಯ ಸೇವೆಗೆ ಸೇರ್ಪಡೆ ಮಾಡುವ ಮೂಲಕ ಭಾರತ ಸದ್ದಿಲ್ಲದೆ ‘ನ್ಯೂಕ್ಲಿಯರ್ ಟ್ರಯಾಡ್’ ಅಂದರೆ ಸಮುದ್ರ, ಭೂಮಿ ಮತ್ತು ಆಗಸದಿಂದ ಎದುರಾಗುವ ಪರಮಾಣು ದಾಳಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದಂತಾಗಿದೆ.
ಐಎನ್ಎಸ್ ಅರಿಹಂತ್ ಜಲಾಂರ್ಗಾಮಿಯನ್ನು ಕಳೆದ ಆಗಸ್ಟ್ ತಿಂಗಳಲ್ಲೇ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು. ಆದರೆ ಆ ಕುರಿತ ರಹಸ್ಯವನ್ನು ಕಾಯ್ದಿರಿಸಬೇಕಾಗಿದ್ದರಿಂದ ಆ ಕೂಡಲೇ ಆ ಸುದ್ದಿಯನ್ನು ಬಹಿರಂಗಪಡಿಸಲಾಗಿರಲಿಲ್ಲ ಎಂದು ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ತಿಳಿಸಿದ್ದಾರೆ.
ಐಎನ್ಎಸ್ ಅರಿಹಂತ್ ಸೇರ್ಪಡೆಯ ಮೂಲಕ ಭಾರತೀಯ ನೌಕಾಪಡೆಗೆ ಸಮುದ್ರ, ಭೂಮಿ ಮತ್ತು ಆಗಸದಿಂದ ಎದುರಾಗುವ ಪರಮಾಣು ದಾಳಿಗಳನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯ ಒದಗಿದೆ. ಪರಮಾಣು ಅಸ್ತ್ರಗಳನ್ನು ತಾನೇ ಮೊದಲಾಗಿ ಬಳಸದಿರುವ ಭಾರತದ ಘೋಷಿತ ನೀತಿಗೆ ಅನುಗುಣವಾಗಿ ಐಎನ್ಎಸ್ ಅರಿಹಂತ್, ಭಾರತಕ್ಕೆ ಎರಡನೇ ಸಾಲಿನ ಪರಮಾಣು ಸಾಮರ್ಥ್ಯವನ್ನು ಒದಗಿಸಿದೆ.
ಐಎನ್ಎಸ್ ಅರಿಹಂತ್ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆಯಾಗಿದ್ದು 2009 ರಲ್ಲಿ ಬಿಡುಗಡೆಯಾದ ಪರಮಾಣು ಚಾಲಿತ ಕ್ಷಿಪಣಿ ಜಲಾಂತರ್ಗಾಮಿ ಅರಿಹಂತ್ ವರ್ಗದ ಪ್ರಮುಖ ಹಡಗು ಆಗಿದೆ. ಇದು ಆರಂಭದಲ್ಲಿ 2012ರಲ್ಲಿ ಸಮುದ್ರದಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಲ್ಲಿತ್ತು. ಆದರೆ ಅದು ನಡೆದಿದ್ದು 2014ರಿಂದ.ಸತತ ಪ್ರಾಯೋಗಿಕ ಪರೀಕ್ಷೆಗಳ ಮೂಲಕ ಇದೀಗ ನೌಕೆ ಸಮುದ್ರಕ್ಕೆ ಇಳಿದಿದೆ. ನೌಕೆಯ ಪರಮಾಣು ರಿಯಾಕ್ಟರ್ ನ್ನು ರಷ್ಯಾದ ಸಹಾಯದಿಂದ ಕಟ್ಟಲಾಗಿತ್ತು.
ಪ್ರಧಾನ ಮಂತ್ರಿಗಳ ಕಾರ್ಯಾಲಯದ ಮೇಲ್ವಿಚಾರಣೆ ಮೇರೆಗೆ ಈ ಯೋಜನೆಯನ್ನು ಅತ್ಯಾಧುನಿಕ ತಂತ್ರಜ್ಞಾನ ನೌಕೆ ಕಾರ್ಯಕ್ರಮದಡಿಯಲ್ಲಿ ಮಾಡಲಾಗಿದ್ದು ಇದಕ್ಕೆ ರಕ್ಷಣಾ ಇಲಾಖೆ, ಅಣುಶಕ್ತಿ ಕೇಂದ್ರ ಮತ್ತು ಖಾಸಗಿ ಕಂಪೆನಿಗಳು ನೆರವು ನೀಡಿವೆ. ರಷ್ಯಾದ ಅಕುಲಾ-1 ದರ್ಜೆಯ ನೌಕಾಪಡೆಯ ಮಾದರಿಯಲ್ಲಿ ಐಎನ್ಎಸ್ ಅರಿಹಂತ್ ಜಲಾಂತರ್ಗಾಮಿ ನೌಕೆಯನ್ನು ವಿನ್ಯಾಸಗೊಳಿಸಲಾಗಿದ್ದು ಅದರ 83 ಎಮ್ ಡಬ್ಲ್ಯು ಜಲ ರಿಯಾಕ್ಟರ್ ನ್ನು ಕೂಡ ರಷ್ಯಾದ ನೆರವಿನಿಂದ ಕಟ್ಟಲಾಗಿದೆ. ಐಎನ್ಎಸ್ ಅರಿಹಂತ್ ನ 100 ಸಿಬ್ಬಂದಿಗಳಿಗೆ ರಷ್ಯಾದ ವಿಶೇಷ ತಜ್ಞರು ತರಬೇತಿ ನೀಡಿದ್ದಾರೆ.
Discussion about this post