Read - < 1 minute
ನವದೆಹಲಿ/ಬೆಂಗಳೂರು. ಸೆ.13: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹಾಗೂ ದ್ವೇಷ ಹಬ್ಬಿಸುವ ಸುದ್ದಿ/ಕಾರ್ಯಕ್ರಮಗಳನ್ನು ಪದೇ ಪದೇ ಪ್ರಸಾರ ಮಾಡಿರುವ ಕೆಲವು ಟಿವಿ ಚಾನೆಲ್ ಗಳ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಯಮ ಪಾಲಿಸುವಂತೆ ಸಲಹೆ ನೀಡಿದೆ.
ಈ ರೀತಿ ಪ್ರಸಾರ ಮಾಡಿದಲ್ಲಿ ಕಾವೇರಿ ವಿವಾದದಿಂದ ಬಾಧಿತವಾದ ಎರಡೂ ರಾಜ್ಯಗಳಲ್ಲಿ ಉದ್ವಿಗ್ನತೆ ಹೆಚ್ಚಲಿದೆ. ಸತ್ಯಾಂಶ ಪರಿಶೀಲಿಸಿಯೇ ಪ್ರಸಾರ ಮಾಡುವಂತೆ ಎಲ್ಲ ಚಾನೆಲ್ ಗಳಿಗೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅದು ಸೂಚನೆ ನೀಡಿದೆ.
ಸ್ಥಳೀಯ ಮಾಧ್ಯಮಗಳು, ಕೇಬಲ್ ನೆಟ್ ವರ್ಕ್ ಗಳು ರಾಷ್ಟ್ರೀಯ ಹಿತದೃಷ್ಟಿಯಿಂದ ಹಿಂಸೆ, ಗಲಭೆಗಳ ವರದಿ ಪ್ರಸಾರದಲ್ಲಿ ಮಾಧ್ಯಮ ಧರ್ಮ ಪಾಲಿಸಬೇಕೆಂದು ಕೇಳಿಕೊಳ್ಳಲಾಗಿದೆ. ಹಿಂಸೆಗೆ ಪ್ರೇರಣೆ ನೀಡಬಲ್ಲ ಯಾವುದೇ ಸುದ್ದಿ ಅಥವಾ ಕಾರ್ಯಕ್ರಮ ಪ್ರಸಾರ ಮಾಡಬಾರದು, ಹಿಂಸೆ/ಹಾನಿಯ ದೃಶ್ಯಗಳ ಪ್ರಸಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.
ಅದೇ ರೀತಿ, ಹಿಂಸೆ ಅಥವಾ ಗಲಭೆ ಘಟನೆಗಳ ನೇರ ಪ್ರಸಾರ ಅಥವಾ ಫೈಲ್ ಕ್ಲಿಪ್ಪಿಂಗ್ ಗಳ ಪ್ರಸಾರ ಮಾಡದಂತೆಯೂ ಅದು ಸುದ್ದಿ ಮಾಧ್ಯಮಗಳನ್ನು ಕೇಳಿಕೊಂಡಿದೆ. ಪ್ರಸಾರ ಸಂದರ್ಭದಲ್ಲಿ ಪದ ಬಳಕೆಯ ಬಗೆಗೂ ಕಟ್ಟೆಚ್ಚರ ವಹಿಸಬೇಕಾಗಿದೆ ಎಂದು ಸಲಹೆ ನೀಡಲಾಗಿದೆ.
ಎಲ್ಲ ಚಾನೆಲ್ ಗಳು ಕಾರ್ಯಕ್ರಮ ಪ್ರಸಾರ ಹಾಗೂ ಜಾಹೀರಾತು ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಸೂಚಿಸಲಾಗಿದೆ.
Discussion about this post