ಬೆಂಗಳೂರು, ಸೆ.15: ಕಾವೇರಿ ಗಲಭೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸದೆ ಕರ್ತವ್ಯ ಲೋಪವೆಸಗಿದ 9 ಮಂದಿ ಇನ್ಸ್ ಪೆಕ್ಟರ್ ಳನ್ನು ಅಮಾನತು ಮಾಡಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಗರ ಪೊಲೀಸ್ ಆಯುಕ್ತರು ಕೋರಿಕೆ ಸಲ್ಲಿಸಿದ್ದಾರೆ.
ನಗರದ 16 ಪೊಲೀಸ್ ಠಾಣೆಗಳಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣಗೊಂಡು ವಾಹನಗಳಿಗೆ ಬೆಂಕಿ ಹಚ್ಚಿ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಗೋಲಿಬಾರ್ ಗೆ ಒಬ್ಬರು ಬಲಿಯಾದರೆ, ಲಾಠಿಚಾರ್ಜ್ ಭೀತಿಯಿಂದ ಕಟ್ಟಡದಿಂದ ಬಿದ್ದು ಮತ್ತೊಬ್ಬರು ಮೃತಪಟ್ಟಿದ್ದಾರೆ. ಕಾವೇರಿ ನದಿ ಪಾತ್ರದ ಅತ್ಯಂತ ಸೂಕ್ಷ್ಮ ಪ್ರದೇಶಗಳಾದ ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಿಗಿಂತಲೂ ಅತಿ ಹೆಚ್ಚು ಪ್ರಕ್ಷುಬ್ಧ ಸ್ಥಿತಿ ಬೆಂಗಳೂರಿನಲ್ಲಿ ನಿರ್ಮಾಣವಾಗಿತ್ತು.
ಕೆಲವು ಘಟನೆಗಳಲ್ಲಿ ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ದುರ್ಲಾಭ ಪಡೆದವು. ಇದನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಗಲಭೆಯ ಕಾರಣಕ್ಕಾಗಿ ಈವರೆಗೂ ಸುಮಾರು 550ಕ್ಕೂ ಜನರನ್ನು ಬಂಧಿಸಲಾಗಿದೆ. ಒಟ್ಟು 1800 ಹೆಚ್ಚು ಮಂದಿಯನ್ನು ಗುರುತಿಸಲಾಗಿದ್ದು, ಎಲ್ಲರನ್ನು ಜಾಮೀನು ರಹಿತ ಆರೋಪದಡಿ ಬಂಧಿಸಿ ಜೈಲಿಗಟ್ಟುವ ಪ್ರಯತ್ನ ನಡೆದಿದೆ.
ಇನ್ನೊಂದೆಡೆ ಕೆಳಹಂತದ ಅಧಿಕಾರಿಗಳನ್ನು ಸಿಕ್ಕಿಸುವ ತಯಾರಿಯೂ ನಡೆಯುತ್ತಿದೆ. ಹಾಗಾದರೆ ಇಡೀ ಘಟನೆಯಲ್ಲಿ ಉನ್ನತ ಅಧಿಕಾರಿಗಳ ಮತ್ತು ಆಯಕಟ್ಟು ಹುದ್ದೆಯಲ್ಲಿ ಕುಳಿತಿರುವವರ ಪಾತ್ರ ಏನು ಎಂಬ ಪ್ರಶ್ನೆ ಉದ್ಬವಿಸಿದೆ.
ಮುನ್ನೆಚ್ಚರಿಕೆಯ ವೈಫಲ್ಯ:
ಸೆ.5ರಂದು ಸುಪ್ರೀಂಕೋರ್ಟ್ ಕಾವೇರಿ ನದಿ ನೀರು ವಿವಾದದಲ್ಲಿ ತೀರ್ಪು ನೀಡಲಿದ್ದು, ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಎರಡು ರಾಜ್ಯಗಳಿಗೆ ಮುನ್ನೆಚ್ಚರಿಕೆಯಾಗಿ ನೀಡಿತ್ತು.
ಸೆ.5ರ ತೀರ್ಪಿಗೆ ಅಗತ್ಯ ಬಂದೋಬಸ್ತ್ ಕೈಗೊಂಡ ಪೊಲೀಸರು ಬಂದ್ ಸಂದರ್ಭದಲ್ಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದರು.
ಅನಂತರ ಬೆಂಗಳೂರಿನಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆದಾಗ ತಮಿಳುನಾಡಿನಲ್ಲಿ ವ್ಯಾಪಕ ಪ್ರಚಾರವಾಗಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ತಮಿಳುನಾಡು ಪೊಲೀಸರು ಹಾಗೂ ಗುಪ್ತಚರ ಇಲಾಖೆ ಕರ್ನಾಟಕಕ್ಕೆ ಮಾಹಿತಿ ನೀಡಿ ಸಂಭವನೀಯ ಗಲಭೆಗಳ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿತ್ತು ಎನ್ನಲಾಗಿದೆ.
ಗಲಭೆಗೂ ಮುನ್ನ ಡಿಜಿ ಕಚೇರಿಯಲ್ಲಿ ನಡೆದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು. ಆ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರು ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆ ನನ್ನದು, ಪರಿಸ್ಥಿತಿ ತಿಳಿಯಾಗಿದೆ. ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದ್ದರು ಎಂದು ತಿಳಿದು ಬಂದಿದೆ.
ಸೋಮವಾರ ಬೆಳಿಗ್ಗೆ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದು ಎರಡು ಬಸ್ ಗಳಿಗೆ ಕಲ್ಲು ತೂರಿದ ಘಟನೆ ಕುರಿತು ತಮಿಳುನಾಡು ಪೊಲೀಸರು ತಕ್ಷಣವೇ ಕರ್ನಾಟಕ್ಕೆ ಮಾಹಿತಿ ರವಾನಿಸಿದ್ದರು ಎನ್ನಲಾಗಿದೆ. ಆಗಲೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳದೆ ಸಿಆರ್ ಪಿಎಫ್ ಮತ್ತು ಆರ್ ಎಎಫ್ 10 ತುಕಡಿಗಳನ್ನು ಆಯಕಟ್ಟಿಗೆ ನಿಯೋಜಿಸದೆ ತಟಸ್ಥವಾಗಿರಿಸಲಾಗಿತ್ತು ಎನ್ನಲಾಗಿದೆ.
ಮೈಸೂರು ರಸ್ತೆಯಲ್ಲಿ ಗಲಭೆ ಹೆಚ್ಚಾಗಿ ವಾಹನಗಳಿಗೆ ಬೆಂಕಿ ಹಚ್ಚಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾದಾಗ ತರಾತುರಿಯಲ್ಲಿ ಗೃಹ ಸಚಿವರು ಅಧಿಕಾರಿಗಳ ಸಭೆ ನಡೆಸಿ ಕಾನೂನು ಸುವ್ಯವಸ್ಥೆಯತ್ತ ಗಮನ ಹರಿಸಿದ್ದಾರೆ.
ಗೋಲಿಬಾರ್ ಗೆ ಆದೇಶ ನೀಡಿದವರು ಯಾರು?:
ನಿಯಮಗಳ ಪ್ರಕಾರ 50ರಿಂದ 100ಜನರ ಗುಂಪು ಗಲಭೆ ಮಾಡಿ ಶಾಂತಿ ಕದಡಲು ಪ್ರಯತ್ನ ಮಾಡಿದರೆ ಲಘು ಲಾಠಿ ಪ್ರಹಾರ ನಡೆಸಿ ಅಥವಾ ಬಲ ಪ್ರಯೋಗ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತರಬೇಕು. 50 ರಿಂದ 250 ಜನರ ಗುಂಪು ಸೇರಿದಾಗ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಬಹುದು.
250ರಿಂದ 500 ಜನರ ಗುಂಪು ಗಲಭೆ ಮಾಡಿದರೆ ಟಿಯರ್ ಗ್ಯಾಸ್ ಅಥವಾ ವಾಟರ್ ಜೆಟ್ ಗಳನ್ನು ಬಳಸಿ ಪರಿಸ್ಥಿತಿಯನ್ನು ತಹಬಂದಿಗೆ ತರಬೇಕು. 500ಕ್ಕಿಂತಲೂ ಹೆಚ್ಚು ಜನ ಗುಂಪು ಸೇರಿದಾಗ ಪರಿಸ್ಥಿತಿ ನಿಯಂತ್ರಿಸಲು ಅಸಾಧ್ಯ ಎನಿಸಿದಾಗ ಉನ್ನತ ಪ್ರಾಧಿಕಾರಗಳ ಅನುಮತಿ ಪಡೆದು ಗೋಲಿಬಾರ್ ಮಾಡಲು ಅವಕಾಶವಿದೆ.
ಆದರೆ, ಸೋಮವಾರ ಸಂಜೆ ಹೆಗ್ಗನಹಳ್ಳಿಯಲ್ಲಿ ಸುಮಾರು 500ಕ್ಕಿಂತಲೂ ಹೆಚ್ಚು ಮಂದಿಯ ಗುಂಪು ಹೊಯ್ಸಳ ವಾಹನಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಲಾಠಿಚಾರ್ಜ್ ಮಾಡಿ ಟಿಯರ್ ಗ್ಯಾಸ್ ಅಥವಾ ವಾಟರ್ ಜೆಟ್ ಯಂತ್ರ ಬಳಸದೆ ಏಕಾಏಕಿ ಗೋಲಿಬಾರ್ ಮಾಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಗೋಲಿಬಾರ್ ಗೆ ಆದೇಶ ನೀಡಿದವರು ಯಾರು ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
ರಾಜ್ಯದಲ್ಲಿ 16 ವಾಟರ್ ಜೆಟ್ ಯಂತ್ರಗಳಿವೆ. ಬೆಂಗಳೂರಿನಲ್ಲಿ 8 ವಾಟರ್ ಜೆಟ್ ಯಂತ್ರಗಳಿದ್ದು, ಅವುಗಳಲ್ಲಿ ಮೂರು ದುರಸ್ತಿಯಲ್ಲಿವೆ. ಉಳಿದ ಐದನ್ನು ಗಲಭೆ ಸಂದರ್ಭದಲ್ಲಿ ಬೆಂಗಳೂರಿನ ಗಡಿಭಾಗಕ್ಕೆ ನಿಯೋಜಿಸಲಾಗಿತ್ತು ಎನ್ನಲಾಗಿದೆ.
ಗಲಭೆ ನಿಯಂತ್ರಿಸಲು ರಾಜ್ಯಾದ್ಯಂತ 16 ಕಡೆ ಅಶ್ರುವಾಯು ಬಳಸಲಾಗಿದೆ. ಬೆಂಗಳೂರಿನಲ್ಲಿ ಟಿಯರ್ ಗ್ಯಾಸ್ ಲಭ್ಯವಿಲ್ಲದೇ ಇದುದ್ದರಿಂದ ಹೆಗ್ಗನಹಳ್ಳಿಯಲ್ಲಿ ಏಕಾಏಕಿ ಗೋಲಿಬಾರ್ ಮಾಡಲು ಆದೇಶ ನೀಡಲಾಗಿದೆ ಎಂಬ ಮಾಹಿತಿಗಳು ಕೇಳಿ ಬಂದಿದೆ.
ಗೋಲಿಬಾರ್ ನಿಂದ ಮೃತಪಟ್ಟ ವ್ಯಕ್ತಿಗೆ ಪರಿಹಾರ ನೀಡಲಾಗಿದೆ. ಆದರೆ, ಘಟನೆಯ ವೈಫಲ್ಯಗಳ ಬಗ್ಗೆ ಈವರೆಗೂ ಯಾವುದೇ ತನಿಖೆ ನಡೆದಿಲ್ಲ. ಪೊಲೀಸರು ಕನ್ನಡ ಹೋರಾಟಗಾರರ ಬೆನ್ನುಬಿದ್ದು ಅವರನ್ನು ಬಂಧಿಸಿ ಜೈಲಿಗಟ್ಟುವುದರಲ್ಲೇ ನಿರತರಾಗಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ವಜಾಗೆ ಆಗ್ರಹ
ಬೆಂಗಳೂರಿನಲ್ಲಿ ಕಾವೇರಿ ವಿವಾದ ಸಂಬಂಧ ನಡೆದ ಗಲಭೆ, ಹಿಂಸಾಚಾರ ಪ್ರಕರಣಗಳಲ್ಲಿ ಅಮಾಯಕ ಕನ್ನಡಿಗರನ್ನು ಅನಗತ್ಯವಾಗಿ ನಗರ ಪೊಲೀಸರು ಬಂಧಿಸಿ ಹಿಂಸಿಸಿದ್ದಾರೆ ಎಂದು ಆರೋಪಿಸಿರುವ ವಿವಿಧ ಕನ್ನಡಪರ ಸಂಘಟನೆಗಳು ಇದಕ್ಕೆ ನಗರ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಹರಿಶೇಖರನ್ ಅವರೇ ಕಾರಣವಾಗಿದ್ದು, ಅವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿವೆ.
ತಮಿಳುನಾಡು ಮೂಲದ ಹರಿಶೇಖರನ್ ಅವರು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದು, ಕಾವೇರಿ ವಿವಾದದಲ್ಲಿ ಉಂಟಾದ ಗಲಭೆ ಸಂದರ್ಭದಲ್ಲಿ ತಮ್ಮ ಭಾಷಾಪ್ರೇಮವನ್ನು ಮೆರೆಯುವ ಮೂಲಕ ಕನ್ನಡ ವಿರೋಧಿ ಧೋರಣೆ ಅನುಸರಿಸಿ ನೂರಾರು ಕನ್ನಡಪರ ಹೋರಾಟಗಾರರ ಮೇಲೆ ಅನಾವಶ್ಯಕವಾಗಿ ದೂರು ದಾಖಲಿಸಿ ಜೈಲಿಗಟ್ಟಿದ್ದಾರೆ ಮತ್ತು ಅವರಿಗೆ ಜಾಮೀನು ಸಿಗದಂತೆ ಮಾಡುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರರು ಆರೋಪಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಒಕ್ಕೂಟ, ಕನ್ನಡ ಚಳವಳಿ ಕೇಂದ್ರ ಸಮಿತಿ, ಕನ್ನಡ ಸೇನೆ, ಸಾರ್ವಜನಿಕ ಜಾಗೃತಿ ವೇದಿಕೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಇವರ ಈ ರೀತಿಯ ಕಾರ್ಯವೈಖರಿ ತೀವ್ರವಾಗಿ ವಿರೋಧಿಸಿವೆ. ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಂಧಿಸಿರುವ ಅಮಾಯಕ ಕನ್ನಡಿಗರನ್ನು ಕೂಡಲೇ ಬೇಷರತ್ ಆಗಿ ಬಿಡುಗಡೆ ಮಾಡಬೇಕೆಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ತಮಗೆ ಸಿಕ್ಕಿರುವ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅಮಾಯಕ ಕನ್ನಡಿಗರನ್ನು ಬಂಧಿಸಿ ಅವರ ಭವಿಷ್ಯದ ಜತೆ ಚಲ್ಲಾಟವಾಡುವ ಯಾವುದೇ ಕನ್ನಡ ವಿರೋಧಿ ಅಧಿಕಾರಿಗಳ ದರ್ಪವನ್ನು ನಾವು ಸಹಿಸುವುದಿಲ್ಲ ಎಂದು ಅವರು ವಿವರಿಸಿದರು.
ಹರಿಶೇಖರನ್ ಅವರು ಇಂತಹ ಕೃತ್ಯ ಮಾಡಿದ್ದರೆ ತಕ್ಷಣವೇ ಅವರನ್ನು ಸರ್ಕಾರ ವಜಾಗೊಳಿಸಬೇಕು. ಗಲಭೆ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು, ಅಮಾಯಕರನ್ನು ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ನಮ್ಮ ಕಚೇರಿಗೆ ಹಲವಾರು ಜನ ದೂರವಾಣಿ ಕರೆ ಮಾಡಿ ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಇವರ ಉನ್ನತ ಹುದ್ದೆಗಳನ್ನು ಈ ನೆಲ, ಭಾಷೆ ಬಗ್ಗೆ ಅಭಿಮಾನ ಇರುವ ಅಧಿಕಾರಿಗಳಿಗೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಭಾಷಾಸೇಡಿನ ಮನೋಭಾವ ಬಿಟ್ಟು ಒಕ್ಕೂಟದ ವ್ಯವಸ್ಥೆಯಲ್ಲಿ ಎಲ್ಲರೂ ಕೆಲಸ ಮಾಡಬೇಕಾಗಿರುವುದು ಕರ್ತವ್ಯವಾಗಿರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ಯಾರೇ ಅಧಿಕಾರಿಗಳು ಕನ್ನಡ ವಿರೋಧಿ ಕೆಲಸ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೆ.12ರಂದು ನಡೆದ ಗಲಭೆ ಸಂದರ್ಭದಲ್ಲಿ ಯಾವೊಬ್ಬ ತಮಿಳರ ಮೇಲೂ ಹಲ್ಲೆಯಾಗಿಲ್ಲ. ವಾಹನಗಳನ್ನು ಯಾರು ಸುಟ್ಟರು ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಬಂಧಿತರಾಗಿರುವ ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಕನ್ನಡ ಸೇನೆ ಕುಮಾರ್ ಮಾತನಾಡಿ, ಗಲಭೆ ನೆಪದಲ್ಲಿ ಮನೆಯಲ್ಲಿದ್ದವರನ್ನು ಬಂಧಿಸಿ ವಿನಾಕಾರಣ ಮೊಕದ್ದಮೆ ದಾಖಲು ಮಾಡಲಾಗಿದೆ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಜೀವಜಲಕ್ಕಾಗಿ ಹೋರಾಟ ಮಾಡುತ್ತಿರುವವರ ಜೀವನದ ಜತೆ ಯಾವ ಅಧಿಕಾರಿಗಳೂ ಚೆಲ್ಲಾಟವಾಡಬಾರದು ಎಂದು ಎಚ್ಚರಿಕೆ ನೀಡಿದರು.
ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಗುರುನಾರಾಯಣ್ ಕುಮಾರ್ ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಹರಿಶೇಖರನ್ ಅವರನ್ನು ಸೇವೆಯಿಂದ ವಜಾ ಮಾಡಬೇಕು. ಕನ್ನಡಿಗರ ವಿರುದ್ಧ ಪ್ರತಿಕಾರದ ಮನೋಭಾವ ಹೊಂದಿದ್ದಾರೆ. ನಮ್ಮ ಜಲಾಶಯಗಳ ನೀರನ್ನು ಉಳಿಸಿಕೊಳ್ಳಲು ನಾವೂ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ಅನಗತ್ಯವಾಗಿ ಅಮಾಯಕರನ್ನು ಬಂಧಿಸಲಾಗಿದೆ. ಗಲಭೆ ಮಾಡಿರುವವರನ್ನು ಬಂಧಿಸಿ ಶಿಕ್ಷಿಸುವುದರಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ, ಈ ನೆಪದಲ್ಲಿ ಅಮಾಯಕ ಕನ್ನಡಿಗರನ್ನು ಬಂಧಿಸುವುದು ಖಂಡನೀಯ ಎಂದು ಹೇಳಿದ್ದಾರೆ.
ಇದೇ ರೀತಿ ಹಲವಾರು ಕನ್ನಡಪರ ಸಂಘಟನೆಗಳವರು ಹೆಚ್ಚುವರಿ ಪೊಲೀಸ್ ಆಯುಕ್ತರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Discussion about this post