Read - < 1 minute
ಮಡಿಕೇರಿ, ಅ.18: ನಗರದ ಶ್ರೀ ಕಾವೇರಿ ಭಕ್ತ ಮಂಡಳಿಯಿಂದ 62ನೇ ವರ್ಷದ ಕಾವೇರಿ ತೀರ್ಥ ವಿತರಣಾ ಕಾರ್ಯಕ್ರಮ ಆಕರ್ಷಕ ಕಾವೇರಿ ರಥದ ಮೆರವಣಿಗೆಯ ಮೂಲಕ ಸಾಂಗವಾಗಿ ನೆರವೇರಿತು.
ಕಾವೇರಿ ಭಕ್ತಮಂಡಳಿಯ ಪದಾಧಿಕಾರಿಗಳು ತಲಕಾವೇರಿಯಿಂದ ತಂದ ಪವಿತ್ರ ಕಾವೇರಿ ತೀರ್ಥವನ್ನು ಕಾವೇರಿ ರಥದ ಮೆರವಣಿಗೆಯ ಮೂಲಕ ನಗರದ ಸಾರ್ವಜನಿಕರಿಗೆ ವಿತರಿಸಿದರು.
ಹಿರಿಯ ಕಲಾವಿದ ದಿವಂಗತ ಅಣ್ಣು ಅವರು ಆರು ದಶಕಗಳ ಹಿಂದೆ ತಾವೇ ಶ್ರೀ ಕಾವೇರಿ ಮಾತೆಯ ಕಲಾಕೃತಿಯನ್ನು ರಚಿಸಿ, ಅದನ್ನು ಕಾವೇರಿ ತೀರ್ಥದೊಂದಿಗೆ ನಗರದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಭಕ್ತ ಸಮುದಾಯಕ್ಕೆ ತಲುಪಿಸುವ ಮಹತ್ತರ ಕಾರ್ಯವನ್ನು ಆರಂಭಿಸಿದ್ದರು. ಇದೀಗ ಅವರ ಮಕ್ಕಳಾದ ಕಲಾವಿದ ರವಿ ಮತ್ತು ಜಾಜಿ ಅವರುಗಳು ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರದೊಂದಿಗೆ ಕಾವೇರಿ ರಥದ ಮೂಲಕ ತೀರ್ಥ ವಿತರಿಸುತ್ತಿದ್ದಾರೆ.
ಆಕರ್ಷಕ ಕಾವೇರಿ ಮಂಟಪದ ಮೆರವಣಿಗೆಯನ್ನು ನಗರದ ಮ್ಯಾನ್ಸ್ ಕಾಂಪೌಂಡ್ ವಿಭಾಗ, ಶ್ರೀ ಓಂಕಾರೇಶ್ವರ ದೇವಸ್ಥಾನ ವಿಭಾಗ, ಚಿಕ್ಕಪೇಟೆ, ಗೌಳಿ ಬೀದಿ, ಮಹದೇವಪೇಟೆ ಸೇರಿದಂತೆ ವಿವಿಧೆಡೆಗಳಲ್ಲಿ ನಡೆಸುವ ಮೂಲಕ ಕಾವೇರಿ ತೀರ್ಥವನ್ನು ಭಕ್ತ ಜನಬಾಂಧವರಿಗೆ ವಿತರಿಸುವ ಕಾರ್ಯ ನಡೆಯಿತು.
—>
News by: ಇಂದ್ರೇಶ್, ಮಡಿಕೇರಿ
—>
Discussion about this post