ನವದೆಹಲಿ, ಸೆ.20: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯವಾಗಿದ್ದು, ಸೆ.21ರಿಂದ 27ರವರೆಗೂ ಪ್ರತಿದಿನ ಆರು ಸಾವಿರ ಕ್ಯೂಸೆಕ್ಸ್‌ನಂತೆ 42 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ರಾಜ್ಯಕ್ಕೆ ಸುಪ್ರಿಂ ಕೋರ್ಟ್ ಆದೇಶ ನೀಡಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಕುರಿತಾಗಿ ರಾಜ್ಯ ಸರ್ಕಾರ ಸಲ್ಲಿಸಿದ್ಛ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಆದೇಶ ನೀಡಿದೆ.
ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲ ಫಾಲಿ ಎಸ್. ನಾರಿಮನ್, ರಾಜ್ಯದ ಜಲಾಶಯದ ಕುರಿತಾಗಿ ಅಂಕಿಅಂಶಗಳ ಸಹಿತ ವಾದ ಮಂಡಿಸಿದರು. ತಮಿಳುನಾಡಿಗೆ ಇನ್ನು ಮುಂದೆ ನೀರು ಬಿಡಲು ಸಾಧ್ಯವಿಲ್ಲ. ನಮಗೆ ನೀರೇ ಇಲ್ಲ ಎಂದ ಮೇಲೆ ನೀರು ಬಿಡುವುದು ಹೇಗೆ. ಹಾಗಾಗಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ಕೋರ್ಟ್‌ನಿಂದ ಯಾವುದೇ ತಾತ್ಕಾಲಿಕ ಆದೇಶ ಬೇಡ ಎಂದು ಮನವಿ ಮಾಡಿದರು ಆದರೆ, ಇದಕ್ಕೆ ಮನ್ನಣೆ ನೀಡದ ಕೋರ್ಟ್, ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದೆ.
ನೀರು ಹಂಚಿಕೆ ವಿಚಾರ ಕಾವೇರಿ ಮೇಲುಸ್ತುವಾರಿ ಸಮಿತಿಗೆ ಬಿಡಿ. ಅಪರೂಪಕೊಮ್ಮೆ ಸಾಮಾನ್ಯ ವರ್ಷದಂತೆ ಮಳೆಯಾಗುತ್ತದೆ. ಹೀಗಾಗಿ ಈ ವರ್ಷ ಜಲ ಸಂಕಷ್ಟದ ವರ್ಷ ಎಂದು ಮೇಲುಸ್ತುವಾರಿ ಸಮಿತಿಯೇ ಹೇಳಿದೆ. ಆದಾಗ್ಯೂ ೧೦ ದಿನಗಳ ಕಾಲ ದಿನಂಪ್ರತಿ ಮೂರು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಮೇಲುಸ್ತುವಾರಿ ಸಮಿತಿ ಆದೇಶಿಸಿದ್ದು, ಅದನ್ನು ನಾವು ಕೋರ್ಟ್ ನಲ್ಲಿ ಪ್ರಶ್ನಿಸುತ್ತೇವೆ ಎಂದು ನಾರಿಮನ್ ತಿಳಿಸಿದರು.
ನಾರಿಮನ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಮಿಳುನಾಡು ವಕೀಲರು, ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶದಿಂದ ನಾವು ನೊಂದಿದ್ದೇವೆ ಮತ್ತು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ ಎಂದು ವಾದಿಸಿದರು.
Discussion about this post