Read - < 1 minute
ಬೆಂಗಳೂರು, ಅ.12: ಕಾವೇರಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಜಲಾನಯನ ಭಾಗದಲ್ಲಿ ವಾಸ್ತವ ಸ್ಥಿತಿ ಅಧ್ಯಯನ ಮಾಡಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದ ಕೇಂದ್ರ ಅಧ್ಯಯನ ತಂಡದ ವರದಿ ಬುಧವಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿಲಿದೆ.
ಕಾವೇರಿ ಜಲಾನಯನ ಭಾಗದಲ್ಲಿ ವಸ್ತುಸ್ಥಿತಿ ಅಧ್ಯಯನಕ್ಕಾಗಿ ಸುಪ್ರೀಂಕೋರ್ಟ್ ನ ನಿರ್ದೇಶನದಂತೆ ಕೇಂದ್ರ ಸರ್ಕಾರ ತಂಡವನ್ನು ಉಭಯ ರಾಜ್ಯಗಳಿಗೆ ಕಳುಹಿಸಿತ್ತು.
12 ಅಧಿಕಾರಗಳನ್ನೊಳಗೊಂಡ ಉನ್ನತ ಮಟ್ಟದ ತಾಂತ್ರಿಕ ಅಧ್ಯಯನ ಸಮಿತಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ತಲಾ ಎರಡು ದಿನಗಳ ಕಾಲ ವಾಸ್ತವ ಸ್ಥಿತಿ ಅಧ್ಯಯನವನ್ನು ಮಾಡಿತ್ತು.
ಅಧ್ಯಯನ ಸಂದರ್ಭದಲ್ಲಿ ಪಡೆದಿರುವ ಮಾಹಿತಿಯನ್ನಾಧರಿಸಿ ಸಿದ್ಧಪಡಿಸಿರುವ ವರದಿಯನ್ನು ತಂಡ ಇಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕರ್ನಾಟಕದ ಹೇಮಾವತಿ, ಕೆಆರ್ ಎಸ್ ಜಲಾಶಯಗಳು ಹಾಗೂ ಅಚ್ಚುಕಟ್ಟು ಪ್ರದೇಶಗಳ ವಾಸ್ತವ ಸ್ಥಿತಿ ಅಧ್ಯಯನ ಮಾಡಿತ್ತು. ಅದೇರೀತಿ ತಮಿಳುನಾಡಿನ ಭವಾನಿ ಮತ್ತು ಮೆಟ್ಟೂರು ಜಲಾಶಯಗಳ ವಸ್ತುಸ್ಥಿತಿಯನ್ನು ತಂಡ ಪರಿಶೀಲನೆ ನಡೆಸಿತ್ತು.
ಈ ನಾಲ್ಕೂ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯ ಬಗ್ಗೆ ವಾಸ್ತವ ಸ್ಥಿತಿಯನ್ನು ಸ್ಥಳ ಪರಿಶೀಲನೆ ಮಾಡಿ ತಂಡ ಅಧ್ಯಯನ ಮಾಡಿತ್ತು. ಈಗಾಗಲೇ ದೆಹಲಿಗೆ ಮರಳಿರುವ ತಂಡ ಉಭಯ ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿದಾಗ ಕಂಡು ಬಂದ ವಾಸ್ತವ ಸಂಗತಿಗಳು ಹಾಗೂ ಉಭಯ ರಾಜ್ಯಗಳ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ದೊರೆತ ಮಾಹಿತಿಯನ್ನು ಆಧರಿಸಿ ತನ್ನ ವರದಿಯನ್ನು ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿದೆ.
ಅ.17ಕ್ಕೂ ಮುನ್ನ ಉಭಯರಾಜ್ಯಗಳಲ್ಲಿ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ಸುಪ್ರೀಂಕೋರ್ಟ್ ನ ಸಲ್ಲಿಸಬೇಕಿದೆ.
Discussion about this post