ಕಾವೇರಿಯ ಒಡಲನ್ನು ತುಂಬುವ ಉಪನದಿಗಳು ಮತ್ತು ಮಳೆ ಬೀಳುವ ಪ್ರದೇಶಗಳು ಕರ್ನಾಟಕದಲ್ಲಿ ಹೆಚ್ಚಿವೆ. ಎಷ್ಟು ಎಂದರೆ ಕಾವೇರಿ ನದಿಗೆ ನೀರು ತುಂಬುವ ಜಲಮೂಲಗಳ ಪೈಕಿ (ಅವು ತುಂಬುವ ನೀರಿನ ಪ್ರಮಾಣಕ್ಕನುಸಾರವಾಗಿ) 53%ರಷ್ಟು ಕರ್ನಾಟಕದಲ್ಲಿವೆ. 30% ತಮಿಳುನಾಡಿನಲ್ಲಿವೆ. ಮಿಕ್ಕ 17% ಕೇರಳದಿಂದ ಹುಟ್ಟಿ ಹರಿಯುವ ಉಪನದಿಗಳ ಪಾಲು ಇದೆ.
ಕಾವೇರಿಯ ಒಟ್ಟು ಜಲಾನಯನ ಪ್ರದೇಶವೂ ಇದೇ ಅನುಪಾತದಲ್ಲಿದ್ದರೆ ಸಮಸ್ಯೆ ಉದ್ಭವಿಸುವುದಕ್ಕೆ ಅವಕಾಶವೇ ಇರಲಿಲ್ಲ. ನೀರನ್ನು ಅದೇ ಅನುಪಾತದಲ್ಲಿ ಹಂಚಿ ಕೈ ಕೊಡವಿಕೊಳ್ಳಬಹುದಿತ್ತು. ಆದರೆ ನದಿಯ ಜಲಾನಯನ ಪ್ರದೇಶ ತಮಿಳುನಾಡಿನಲ್ಲಿ ಹೆಚ್ಚಿದೆ, ಕರ್ನಾಟಕದಲ್ಲಿ ಕಡಿಮೆ ಇದೆ. ಅದೇಕೆ ಹಾಗಾಯಿತು ಎಂದು ಕೇಳುವ ಹಾಗಿಲ್ಲ. ಪ್ರಕೃತಿ ನಿಯಮವೇ ಹಾಗೆ. ನದಿಯ ಮುಖಜಭೂಮಿ ಸೃಷ್ಟಿಯಾಗುವುದು ಅದು ಸಾಕಷ್ಟು ದೂರ ಹರಿದ ಮೇಲೆಯೇ ಅಲ್ಲವೇ? ಒಂದು ರೀತಿಯಲ್ಲಿ ಇದನ್ನು ಹಸುವಿಗೆ ಹೋಲಿಸಬಹುದು. ಕಾವೇರಿಯೇ ಒಂದು ಹಸುವೆಂದು ಭಾವಿಸಿದರೆ ಅದಕ್ಕೆ ಮೇವಿಡುವುದು ಕರ್ನಾಟಕ, ಹಾಲು ಕರೆಯುವುದು ತಮಿಳುನಾಡು ಎಂದು ಸ್ಥೂಲವಾಗಿ ಹೇಳಬಹುದು. ಕಾವೇರಿಯ ಒಟ್ಟು ಜಲಾನಯನ ಪ್ರದೇಶದಲ್ಲಿ 54% ಭಾಗ ತಮಿಳುನಾಡಿನಲ್ಲಿದ್ದರೆ 42% ಭಾಗ ಕರ್ನಾಟಕದಲ್ಲಿದೆ. ಎಲ್ಲ ಸಮಸ್ಯೆಗೂ ಈ ಎರಡು ವ್ಯತಿರಿಕ್ತ ಅನುಪಾತಗಳೇ ಮೂಲ.
ಕಾವೇರಿ ಕೊಳ್ಳದಲ್ಲಿ ವಾರ್ಷಿಕ ಸರಾಸರಿ 740 ಟಿಎಂಸಿ ಮಳೆಯಾಗುತ್ತದೆ. ಪ್ರತಿ ವರ್ಷವೂ ಇಷ್ಟು ಆಗೇ ತೀರುತ್ತದೆ ಎನ್ನುವಂತಿಲ್ಲ. ವ್ಯತ್ಯಾಸವನ್ನು ಪ್ಲಸ್ ಅಥವಾ ಮೈನಸ್ 20 ಟಿಎಂಸಿ ಎಂದು ತೆಗೆದುಕೊಂಡರೆ 720ರಿಂದ 760 ಟಿಎಂಸಿ ಆಗುತ್ತದೆ ಎಂದು ಹೇಳಬಹುದು. ಸದ್ಯ ನ್ಯಾಯಾಧಿಕರಣ ಕೊಟ್ಟ ತೀರ್ಪಿನ ಪ್ರಕಾರ, ಹಂಚಿಕೆಯಾಗಬೇಕಾದ ನೀರಿನ ಪ್ರಮಾಣ: ತಮಿಳುನಾಡು – 419 ಟಿಎಂಸಿ, ಕರ್ನಾಟಕ – 270 ಟಿಎಂಸಿ, ಕೇರಳ – 30 ಟಿಎಂಸಿ ಮತ್ತು ಪಾಂಡಿಚೇರಿ – 7 ಟಿಎಂಸಿ. ಒಟ್ಟು – 726 ಟಿಎಂಸಿ. “ಇತ್ಯಾದಿ” ಎಂಬ ಕಾಲಮ್‌ನಲ್ಲಿ ನ್ಯಾಯಾಧಿಕರಣ 14 ಟಿಎಂಸಿ ನೀರನ್ನು ಕಾಯ್ದಿರಿಸಿದೆ. ಅಲ್ಲಿ-ಇಲ್ಲಿ ಕಳೆದುಹೋಗುವ, ಯಾರ ಲೆಕ್ಕಕ್ಕೂ ಸಿಗದ ನೀರನ್ನೆಲ್ಲ ಈ “ಇತ್ಯಾದಿ” ಎಂದು ಭಾವಿಸಬಹುದು. ನ್ಯಾಯಾಧಿಕರಣ ಮುಂದುವರೆದು, ಕರ್ನಾಟಕವು ಪ್ರತಿವರ್ಷ ಮಳೆಯಾಗಲಿ ಇಲ್ಲದಿರಲಿ, ಒಟ್ಟು 192 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲೇಬೇಕು ಎಂದು ತಾಕೀತು ಮಾಡಿದೆ. ಅಂದರೆ ತಮಿಳುನಾಡಿನಲ್ಲಿ ಒಂದು ವರ್ಷ ಒಂದೇ ಒಂದು ಹನಿ ಮಳೆ ಬೀಳದೇ ಹೋದರೂ ಕರ್ನಾಟಕದ ಕಡೆಯಿಂದ ಹರಿದುಬರುವ ಕಾವೇರಿ ನೀರಿನ 192 ಟಿಎಂಸಿ ದಕ್ಕುತ್ತದೆ ಎಂದು ಅರ್ಥ. 192 ಟಿಎಂಸಿ ನೀರನ್ನು ಹರಿಸಿದ ಮೇಲೆ ಕರ್ನಾಟಕದ ಬಳಿ ಉಳಿಯುವ ನೀರೆಲ್ಲ ನಮ್ಮದೇ. ಅದು ನ್ಯಾಯಾಧಿಕರಣ ನಿಗದಿಪಡಿಸಿದ 270 ಟಿಎಂಸಿಗಿಂತ ಹೆಚ್ಚಾಗಿದ್ದರೂ ತಮಿಳುನಾಡಾಗಲೀ ನ್ಯಾಯಾಧಿಕರಣವಾಗಲೀ ಯಾವ ಕ್ಯಾತೆಯನ್ನೂ ತೆಗೆಯುವುದಿಲ್ಲ; ತೆಗೆಯುವಂತಿಲ್ಲ – ಇದು ತೀರ್ಪು.
ಅಂದರೆ, ಇದನ್ನು ಸರಳವಾಗಿ ಹೀಗೆ ಬಿಡಿಸಿ ಹೇಳಬಹುದು: (1) ತಮಿಳುನಾಡು ಕರ್ನಾಟಕದಿಂದ ಪಡೆಯುವ ನೀರು 192 ಟಿಎಂಸಿ; ಮಳೆ/ಉಪನದಿಗಳಿಂದ ದಕ್ಕಿಸಿಕೊಳ್ಳಬೇಕಾದ ನೀರು (419-192) = 227 ಟಿಎಂಸಿ. (2) ಕರ್ನಾಟಕ ತಮಿಳುನಾಡಿಗೆ ಹರಿಸುವ ನೀರು 192 ಟಿಎಂಸಿ; ಮಳೆ/ಉಪನದಿಗಳಿಂದ ಪಡೆಯಬಹುದಾದ ನೀರು 270 ಟಿಎಂಸಿ. ಈ ತೀರ್ಪಿನಲ್ಲಿ ಮೇಲುಮೇಲಕ್ಕೆ ಯಾವುದೇ ತೊಂದರೆ ನಮಗೆ ಕಾಣಿಸುವುದಿಲ್ಲ. ತಮಿಳುನಾಡಿಗೆ 192 ಟಿಎಂಸಿ ನೀರು ಹರಿಸಿಬಿಟ್ಟರೆ ನಮ್ಮ ಜವಾಬ್ದಾರಿ ಮುಗಿಯಿತು; ಮಿಕ್ಕಿದ್ದೆಲ್ಲವನ್ನೂ ನಾವು ಅನುಭವಿಸಬಹುದು ಎಂಬ ಭ್ರಮೆ ಹುಟ್ಟಬಹುದು. ಆದರೆ, ಇಲ್ಲಿ ನಾವು ಪ್ರತಿ ರಾಜ್ಯ ಪಡೆಯುವ ಮಳೆಯ ಪ್ರಮಾಣ ಮತ್ತು ಉಪನದಿಗಳಿಂದ ಕಾವೇರಿಯ ಒಡಲಿಗೆ ಬಂದು ಸೇರುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಬೇಕಾಗುತ್ತದೆ. ಕಾವೇರಿ ಕೊಳ್ಳದಲ್ಲಿ ಸಂಚಯವಾಗುವ ಒಟ್ಟು 740 ಟಿಎಂಸಿಯಲ್ಲಿ ಕರ್ನಾಟಕದ ಕೊಡುಗೆ 53% – ಅಂದರೆ 392 ಟಿಎಂಸಿ, ತಮಿಳುನಾಡಿನ ಕೊಡುಗೆ 30% – ಅಂದರೆ 222 ಟಿಎಂಸಿ ಮತ್ತು ಕೇರಳದ ಕೊಡುಗೆ 17% – ಅಂದರೆ 125 ಟಿಎಂಸಿ (ನಿಖರ ಬೆಲೆ 125.80. ಲೆಕ್ಕಾಚಾರದ ಅನುಕೂಲಕ್ಕಾಗಿ 0.80 ಟಿಎಂಸಿಯನ್ನು ಕೈಬಿಡಲಾಗಿದೆ). ಕರ್ನಾಟಕವು ತನ್ನ ಕೊಡುಗೆಯಾದ 392 ಟಿಎಂಸಿಯಲ್ಲಿ 192 ಟಿಎಂಸಿಯನ್ನು ತಮಿಳುನಾಡಿಗೆ ಹರಿಸಿದರೆ ಅದರ ಬಳಿ ಉಳಿಯುವುದು 200 ಟಿಎಂಸಿ ಮಾತ್ರ! ಹಾಗಿರುವಾಗ ಅದು ನ್ಯಾಯಾಧಿಕರಣ ದಯಪಾಲಿಸಿರುವ 270 ಟಿಎಂಸಿಯನ್ನು ಎಲ್ಲಿಂದ ಪಡೆಯಬೇಕು? ತನ್ನ 70 ಟಿಎಂಸಿ ಕೊರತೆಯನ್ನು ಅದು ಹೇಗೆ ತುಂಬಿಸಿಕೊಳ್ಳಬೇಕು? ನ್ಯಾಯಾಧಿಕರಣ ಆಗ ಕೇರಳದ ಕಡೆ ಬೆರಳು ತೋರಿಸಬಹುದು. ಕೇರಳ ತನ್ನ ಕೊಡುಗೆಯಾದ 125 ಟಿಎಂಸಿಯಲ್ಲಿ ವಾಪಸು ಪಡೆಯುತ್ತಿರುವುದು 30 ಟಿಎಂಸಿ ಮಾತ್ರ. ಹಾಗಾಗಿ ಉಳಿದ 95 ಟಿಎಂಸಿ ಕರ್ನಾಟಕಕ್ಕೇ ಅಲ್ಲವೇ – ಎಂದು ನ್ಯಾಯಾಧಿಕರಣ ಹೇಳಬಹುದು. ಈ 95 ಟಿಎಂಸಿ ನೀರಿನಲ್ಲಿ 7 ಟಿಎಂಸಿ ಪಾಂಡಿಚೇರಿಗೂ 14 ಟಿಎಂಸಿ “ಇತ್ಯಾದಿ” ವಿಭಾಗಕ್ಕೂ ಮೀಸಲಾಗಿವೆ. ಈ 21 ಟಿಎಂಸಿಯನ್ನು ಕಳೆದರೆ 74 ಟಿಎಂಸಿ ಉಳಿಯುತ್ತದೆ. ಹೀಗಾಗಿ ಕರ್ನಾಟಕ ರಾಜ್ಯವು ನ್ಯಾಯಾಧಿಕರಣ ವಿಧಿಸಿದ 270 ಟಿಎಂಸಿಗಿಂತ 4 ಟಿಎಂಸಿಯನ್ನು ಹೆಚ್ಚುವರಿಯಾಗಿ ಪಡೆಯುತ್ತದೆ – ಇದು ನ್ಯಾಯಾಧಿಕರಣದ ಲೆಕ್ಕಾಚಾರ.
ಈಗ ನೀರು ಹಂಚಿಕೆ ಯಾವ ಬಗೆಯಲ್ಲಿ ಆಗಬೇಕು ಎಂದು ಯೋಚಿಸುವ ಮೊದಲು ನ್ಯಾಯಾಧಿಕರಣದ ತೀರ್ಪಿನಲ್ಲಿರುವ ದೋಷಗಳತ್ತ ಸ್ವಲ್ಪ ಗಮನ ಹರಿಸೋಣ. ನೀರಿನ ಕೊಡುಗೆಯಲ್ಲಿ ಕರ್ನಾಟಕದ ಪಾಲು 53%, ತಮಿಳುನಾಡಿನದ್ದು 30%. 740 ಟಿಎಂಸಿಯನ್ನು ಈ ಅನುಪಾತದ ಮೇಲೆ ಭಾಗ ಮಾಡಿದರೆ ಕರ್ನಾಟಕಕ್ಕೆ 392 ಟಿಎಂಸಿ ಮತ್ತು ತಮಿಳುನಾಡಿಗೆ 222 ಟಿಎಂಸಿ ಹೋಗುತ್ತವೆ. ಮಿಕ್ಕ ನೀರನ್ನು ಕೇರಳ, ಪಾಂಡಿಚೇರಿಗಳು ಹಂಚಿಕೊಳ್ಳಬಹುದು ಎನ್ನೋಣ. ಇಲ್ಲಿ ಕರ್ನಾಟಕಕ್ಕೆ ತಮಿಳುನಾಡಿಗಿಂತ 170 ಟಿಎಂಸಿ ಅಧಿಕ ನೀರು ಸಿಗುತ್ತದೆ ಎಂಬುದನ್ನು ಗಮನಿಸಬೇಕು. ಕಾವೇರಿಯ ಒಟ್ಟು ಜಲಾನಯನ ಪ್ರದೇಶಗಳಲ್ಲಿ ಕರ್ನಾಟಕದಲ್ಲಿ 42% ಮತ್ತು ತಮಿಳುನಾಡಿನಲ್ಲಿ 54% ಹಂಚಿಕೊಂಡಿದೆ. ಕಾವೇರಿ ನೀರನ್ನು ಈ ಅನುಪಾತದ ಮೇಲೆ ಹಂಚಬೇಕು ಎಂದು ವಾದಿಸಿದರೆ, ಕರ್ನಾಟಕಕ್ಕೆ ಸಿಗುವ ನೀರು 310 ಟಿಎಂಸಿ; ತಮಿಳುನಾಡಿನದ್ದು 399 ಟಿಎಂಸಿ. ಅಂದರೆ ಇಲ್ಲೂ ಕರ್ನಾಟಕವು ನ್ಯಾಯಾಧಿಕರಣ ಸದ್ಯಕ್ಕೆ ವಿಧಿಸಿರುವ ನೀರಿನ ಪ್ರಮಾಣಕ್ಕಿಂತ 40 ಟಿಎಂಸಿ ಹೆಚ್ಚು ನೀರನ್ನೇ ಪಡೆಯುತ್ತದೆ ಎಂಬುದನ್ನು ಗಮನಿಸಬಹುದು. ಯಾವ ರೀತಿಯಲ್ಲಿ ಲೆಕ್ಕ ಹಾಕಿದ್ದರೂ ಕರ್ನಾಟಕಕ್ಕೆ 310 ಅಥವಾ ಅದಕ್ಕಿಂತ ನೀರು ಸಿಗಲೇಬೇಕಾಗಿತ್ತು. ಆದರೆ ನ್ಯಾಯಾಧಿಕರಣ ನಮಗೆ ಕೊಟ್ಟಿರುವುದು 270 ಟಿಎಂಸಿ ಮಾತ್ರ! ಹಾಗಾದರೆ ಅದು ಯಾವ ಅನುಪಾತವನ್ನು ಆಧಾರವಾಗಿಟ್ಟುಕೊಂಡು ನೀರಿನ ಹಂಚಿಕೆ ಮಾಡಿದೆ? ಕರ್ನಾಟಕದ ವಕೀಲರಿಗೆ ಈ ಅಂಶವನ್ನು ಮುಂದಿಟ್ಟುಕೊಂಡು ವಾದಿಸಲು ಬಹಳಷ್ಟು ಅವಕಾಶ ಇತ್ತು.
ಕಾವೇರಿ ನ್ಯಾಯಾಧಿಕರಣವು ನೀರಿನ ಹಂಚಿಕೆ ಮಾಡುವಾಗ ನೆನಪಿಡಬೇಕಿದ್ದ ಸಂಗತಿ ಇದು: ಒಂದು ನದಿಯ ನೀರನ್ನು ಎರಡು ರಾಜ್ಯಗಳಿಗೆ ಹಂಚಿಕೊಡುವಾಗ ಯಾವ ರಾಜ್ಯದ ಕೊಡುಗೆ ಎಷ್ಟು ಎಂಬುದನ್ನೂ ಅವುಗಳಲ್ಲಿ ಹರಡಿರುವ ಜಲಾನಯನ ಪ್ರದೇಶವನ್ನೂ ಪರಿಗಣಿಸಬೇಕು. ಬೇಸಾಯಕ್ಕಾಗಿ ನೀರು ಹಂಚುವಾಗ ಜಲಾನಯನ ಪ್ರದೇಶದ ವಿಸ್ತೀರ್ಣವೇ ಮುಖ್ಯವಾದರೂ ಹಂಚಿದ ನೀರನ್ನು ಆಯಾ ರಾಜ್ಯಗಳು ಕುಡಿಯುವ ಮತ್ತು ಇತರ ಉದ್ದೇಶಗಳಿಗಾಗಿಯೂ ಬಳಸುವ ಅಧಿಕಾರ ಪಡೆದಿವೆ. ಕುಡಿವ ನೀರಿಗಾಗಿ ನದಿ ನೀರನ್ನು ಬಳಸುತ್ತವೆ ಎಂದಾದಾಗ, ಆಯಾ ರಾಜ್ಯದ ನೀರಿನ ಕೊಡುಗೆಯನ್ನೂ ನಾವು ಪರಿಗಣಿಸಬೇಕಾಗುತ್ತದೆ. ಕಾವೇರಿಗೆ ಕರ್ನಾಟಕದ ನೀರಿನ ಕೊಡುಗೆ ತಮಿಳುನಾಡಿಗಿಂತ 23% ಹೆಚ್ಚಾಗಿದೆ (53% – 30%). ಹಾಗೆಯೇ ಜಲಾನಯನ ಪ್ರದೇಶದ ವಿಷಯದಲ್ಲಿ ತಮಿಳುನಾಡಿನ ನೆಲದ ವಿಸ್ತೀರ್ಣ ಕರ್ನಾಟಕದ್ದಕ್ಕಿಂತ 12% ಹೆಚ್ಚಿದೆ (54% – 42%). ಒಂದು ರೀತಿಯಲ್ಲಿ ಇವೆರಡೂ ಸರಿಸಮವಾದ ಪಾಲು ಪಡೆಯುವುದೇ ಸೂಕ್ತ. ಆದರೆ ನದಿಯ ನೀರು ಪ್ರಮುಖವಾಗಿ ಬೇಸಾಯಕ್ಕೆ ಒದಗಬೇಕಾದ್ದರಿಂದ ಜಲಾನಯನ ಯಾವ ರಾಜ್ಯದಲ್ಲಿ ಹೆಚ್ಚಿದೆಯೋ ಅದಕ್ಕೆ ಹೆಚ್ಚಿನ ನೀರೊದಗಿಸುವುದು ಸರಿ. ಆ ದೃಷ್ಟಿಯಲ್ಲಿ ನೋಡಿದಾಗ ತಮಿಳುನಾಡು ನೀರಿನ ಪಾಲಿನಲ್ಲಿ ತುಸು ಹೆಚ್ಚು ಪಡೆದರೆ ತೊಂದರೆಯಿಲ್ಲ.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಧಿಕರಣವು ಕಾವೇರಿ ನೀರನ್ನು ಹೇಗೆ ಹಂಚಬಹುದಿತ್ತು, ನೋಡೋಣ. ಮೊದಲನೆಯದಾಗಿ ಕೇರಳ ಮತ್ತು ಪಾಂಡಿಚೇರಿಗಳ ವಿಚಾರದಲ್ಲಿ ವಿವಾದವೇನಿಲ್ಲ. ಕೇರಳ ಸದ್ಯಕ್ಕೆ ತನಗೆ 100 ಟಿಎಂಸಿ ಕಾವೇರಿ ನೀರು ಬೇಕು ಎಂದು ಹೇಳುತ್ತಿದ್ದರೂ, ಅಲ್ಲಿ ವ್ಯವಸಾಯಕ್ಕೆ ಬೇರೆ ಹಲವು ನೀರಿನ ಮೂಲಗಳಿರುವುದರಿಂದ ಮತ್ತು ಕೇರಳದಲ್ಲಿ ಪ್ರತಿವರ್ಷ ಉತ್ತಮ ಮಳೆಯಾಗುವುದರಿಂದ ಹೆಚ್ಚಿನ ನೀರನ್ನೇನೂ ಕೊಡಬೇಕಿಲ್ಲ ಎನ್ನೋಣ. ಇನ್ನು, ಕಾವೇರಿಯ ನೀರಿಗೆ ಪಾಂಡಿಚೇರಿಯ ಕೊಡುಗೆ ಏನೂ ಇಲ್ಲ. ಅದು ಕಾವೇರಿಯ ಜಲಾನಯನ ಪ್ರದೇಶದಲ್ಲಿರುವುದರಿಂದ ಮತ್ತು ಲಾಗಾಯ್ತಿನಿಂದ ಬೇಸಾಯಕ್ಕೆ ಕಾವೇರಿಯನ್ನು ಅವಲಂಬಿಸಿರುವುದರಿಂದ ಕಾವೇರಿ ನೀರನ್ನು ಅದಕ್ಕೂ ಹಂಚುವ ಪದ್ಧತಿ ಮುಂದುವರಿದಿದೆ ಅಷ್ಟೆ. ಹೊಸದಾಗಿ ಲೆಕ್ಕಾಚಾರ ಹಾಕುವಾಗಲೂ ಕೇರಳಕ್ಕೆ 30 ಟಿಎಂಸಿ ಮತ್ತು ಪಾಂಡಿಚೇರಿಗೆ 7 ಟಿಎಂಸಿ ನೀರನ್ನು ಕೊಟ್ಟುಬಿಡೋಣ. ಹಾಗೆಯೇ 3 ಟಿಎಂಸಿ ನೀರನ್ನು “ಇತ್ಯಾದಿ” ಪಟ್ಟಿಗೆ ಸೇರಿಸೋಣ. ಆಗ 740ರಲ್ಲಿ ಉಳಿಯುವುದು 700 ಟಿಎಂಸಿ. ಇದನ್ನು ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿರುವ ಜಲಾನಯನ ಪ್ರದೇಶದ ಅನುಪಾತದಲ್ಲಿ (42% : 54%) ಹಂಚಿದರೆ ಕರ್ನಾಟಕ ಪಡೆಯುವ ನೀರು 294 ಟಿಎಂಸಿ, ತಮಿಳುನಾಡು ಪಡೆಯುವುದು 378 ಟಿಎಂಸಿ. ಒಟ್ಟು: 672 ಟಿಎಂಸಿ. ಉಳಿಯುವುದು: 28 ಟಿಎಂಸಿ. ಈ ನೀರನ್ನು ನಾವು “ಏರಿಳಿತ” ಅಥವಾ “ಆಪತ್ಕಾಲ ನಿಧಿ” ಎಂದು ಪರಿಗಣಿಸಬಹುದು. ಅಂದರೆ ಪ್ರತಿ ವರ್ಷದ ಮಳೆಯ ಪ್ರಮಾಣದಲ್ಲಿ ಒಂದಷ್ಟು ವ್ಯತ್ಯಯಗಳು ಇದ್ದೇ ಇರುವುದರಿಂದ 28 ಟಿಎಂಸಿ ನೀರನ್ನು ಆ ವ್ಯತ್ಯಾಸಗಳ ಲೆಕ್ಕಾಚಾರ ಸರಿದೂಗಿಸಲು ಬಳಸಬಹುದು. ಯಾವ ವರ್ಷ ಕಾವೇರಿ ಕೊಳ್ಳದಲ್ಲಿ ಸರಿಯಾಗಿ 740 ಟಿಎಂಸಿಗಳಷ್ಟು ಮಳೆಯಾಗುತ್ತದೋ ಆಗ ಈ 28 ಟಿಎಂಸಿಯನ್ನು ಎರಡೂ ರಾಜ್ಯಗಳಿಗೆ ಸಮನಾಗಿ ಹಂಚಬಹುದು. ಆಗ ಕರ್ನಾಟಕದ ಪಾಲು 294+14 = 308 ಟಿಎಂಸಿ ಆಗುತ್ತದೆ. ತಮಿಳುನಾಡಿನದ್ದು 378+14 = 392 ಟಿಎಂಸಿ ಆಗುತ್ತದೆ. ಕರ್ನಾಟಕದಲ್ಲಿ ಸಂಗ್ರಹವಾಗುವ ಕಾವೇರಿ ನೀರಿನ ಪ್ರಮಾಣ (ಕೇರಳದಿಂದ ಹರಿದು ಬರುವ ಉಪನದಿಗಳ ನೀರಿನ ಪ್ರಮಾಣವೂ ಸೇರಿ) 392 + 125 = 517 ಟಿಎಂಸಿ ಆಗಿರುವುದರಿಂದ, ಮತ್ತು ಇದರಲ್ಲಿ 30 ಟಿಎಂಸಿ ನೀರನ್ನು ಕೇರಳ ವಾಪಸು ಪಡೆಯುವುದರಿಂದ, ಕರ್ನಾಟಕ ಪ್ರತಿ ವರ್ಷ ಕಡ್ಡಾಯವಾಗಿ ತಮಿಳುನಾಡಿಗೆ ಬಿಡಬೇಕಾದ ನೀರು (517 – 30 – 308) ಟಿಎಂಸಿ = 179 ಟಿಎಂಸಿಗಳು ಎಂದು ನಿಗದಿಪಡಿಸಬಹುದು.
ಈ ಹಂಚಿಕೆಯ ಅನುಕೂಲಗಳು ಈ ರೀತಿ ಇವೆ:
(1) ಸದ್ಯಕ್ಕೆ ನ್ಯಾಯಾಧಿಕರಣವು ಕರ್ನಾಟಕ ಕಡ್ಡಾಯವಾಗಿ ತಮಿಳುನಾಡಿಗೆ ಬಿಡಬೇಕಾದ ವಾರ್ಷಿಕ ಜಲಪ್ರಮಾಣ 192 ಟಿಎಂಸಿಗಳಿರಬೇಕೆಂದು ನಿಗದಿಗೊಳಿಸಿದೆ. ತನಗೆ ಸಿಗುವ 392 ಟಿಎಂಸಿಯಲ್ಲಿ 192 ಟಿಎಂಸಿ ನೀರನ್ನು ಕರ್ನಾಟಕವು ಕಡ್ಡಾಯವಾಗಿ ಪಕ್ಕದ ರಾಜ್ಯಕ್ಕೆ ಬಿಟ್ಟುಕೊಡಬೇಕೆಂದು ಅಪೇಕ್ಷಿಸುವುದು ಖಂಡಿತಾ ನ್ಯಾಯವಲ್ಲ. ಹೊಸ ಲೆಕ್ಕಾಚಾರದ ಪ್ರಕಾರ 179 ಟಿಎಂಸಿಗಳನ್ನು ತಮಿಳುನಾಡಿಗೆ ಬಿಡುವುದು ನ್ಯಾಯಯುತ ಅಲ್ಲವಾದರೂ ಕಡಿಮೆ ಅನ್ಯಾಯವೆನಿಸುವ ನಿರ್ಣಯ. ಹೊಸ ಹಂಚಿಕೆಯ ಪ್ರಕಾರ ಕರ್ನಾಟಕ 13 ಟಿಎಂಸಿಗಳಷ್ಟು ಕಡಿಮೆ ನೀರನ್ನು ಬಿಡುತ್ತದೆ ಮತ್ತು (ಮುಖ್ಯವಾಗಿ) 38 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಉಳಿಸಿಕೊಳ್ಳುತ್ತದೆ.
(2) ತಮಿಳುನಾಡು ಮಳೆ ಮತ್ತು ಕರ್ನಾಟಕದಿಂದ ಹರಿದು ಬರುವ ಕಾವೇರಿ – ಈ ಎರಡೂ ಮೂಲಗಳಿಂದ ಪಡೆಯಬಯಸುವ ಒಟ್ಟು ನೀರಿನ ಪ್ರಮಾಣ 392 ಟಿಎಂಸಿ (ಮೇಲಿನ ಲೆಕ್ಕಾಚಾರದ ಪ್ರಕಾರ). ಇದರಲ್ಲಿ 222 ಟಿಎಂಸಿಯನ್ನು ತಮಿಳುನಾಡೇ ಮಳೆಯ ಮೂಲಕ ತುಂಬಿಕೊಳ್ಳುತ್ತದೆ. ಉಳಿದ 170 ಟಿಎಂಸಿಯನ್ನು ಅದು ಕಾವೇರಿಯಿಂದ ಪಡೆಯಬೇಕಾಗಿದೆ. ಕರ್ನಾಟಕವು 179 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದರಿಂದ, ಅದರಲ್ಲಿ 170 ಟಿಎಂಸಿಯನ್ನು ಪಡೆದು, ಮಿಕ್ಕ ನೀರನ್ನು ಅದು ಪಾಂಡಿಚೇರಿಗೆ ಬಿಡಬಹುದು. ಪಾಂಡಿಚೇರಿ ಕೇಳಿರುವ 7 ಟಿಎಂಸಿ ಬೇಡಿಕೆಯೂ ಇಲ್ಲಿ ಸುಸೂತ್ರವಾಗಿ ಪರಿಹಾರವಾದಂತಾಯಿತು.
(3) ಈ ಹೊಸ ಹಂಚಿಕೆ ಯಾವ ರಾಜ್ಯಕ್ಕೂ ಅನ್ಯಾಯ ಮಾಡಿಲ್ಲ. ತಮಿಳುನಾಡು ತನ್ನ ಈಗಿನ ಪ್ರಮಾಣಕ್ಕಿಂತ ಹೊಸ ಲೆಕ್ಕಾಚಾರದ ಪ್ರಕಾರ 27 ಟಿಎಂಸಿಗಳಷ್ಟು ಕಡಿಮೆ ನೀರನ್ನು ಪಡೆಯುತ್ತದೆ. ಕರ್ನಾಟಕ ಈಗಿರುವುದಕ್ಕಿಂತ 38 ಟಿಎಂಸಿ ಹೆಚ್ಚುವರಿ ನೀರನ್ನು ಪಡೆಯುತ್ತದೆ. 53% ಭಾಗ ನೀರಿನ ಕೊಡುಗೆ ಇರುವ ಮತ್ತು 42% ಜಲಾನಯನ ಪ್ರದೇಶ ಪಡೆದಿರುವ ಕರ್ನಾಟಕಕ್ಕೆ ಇದರಿಂದ ತಕ್ಕಮಟ್ಟಿನ ನ್ಯಾಯ ಒದಗಿಸಿದಂತಾಗಿದೆ.
(3) ಎರಡೂ ರಾಜ್ಯಗಳ ನದಿ ನೀರಿನ ಹಂಚಿಕೆಯನ್ನು 294 ಮತ್ತು 378 ಟಿಎಂಸಿ ಎಂದೇ ಇಟ್ಟುಕೊಳ್ಳಬೇಕು. 28 ಟಿಎಂಸಿ ನೀರನ್ನು ಆಪತ್ಕಾಲ ನಿಧಿ ಎಂದೇ ಪರಿಗಣಿಸಬೇಕು. ಯಾವ ವರ್ಷ ಮುಂಗಾರು-ಹಿಂಗಾರು ಸುಸೂತ್ರವಾಗಿದ್ದು ಕೆರೆಕೋಡಿಗಳು ತುಂಬಿ ಹರಿದು ಜಲಾಶಯಗಳು ಭರ್ತಿಯಾಗುತ್ತವೋ ಆಗ ಮಾತ್ರ 28 ಟಿಎಂಸಿಯನ್ನು ಸಮಪಾಲು ಮಾಡಿ ಎರಡೂ ರಾಜ್ಯಗಳಿಗೆ ಹಂಚಬೇಕು. ಸರಿಯಾಗಿ ಮಳೆಯಾಗದ ವರ್ಷದಲ್ಲಿ ಕರ್ನಾಟಕ, ತಮಿಳುನಾಡುಗಳಿಗೆ ಹಂಚಿಕೆಯಾಗುವ ಕಾವೇರಿಯ ಪ್ರಮಾಣವನ್ನು 294 ಮತ್ತು 378 ಟಿಎಂಸಿಗಳಿಗೇ ನಿರ್ದಿಷ್ಟಪಡಿಸಬೇಕು. ಕರ್ನಾಟಕ ಮತ್ತು ಕೇರಳ ರಾಜ್ಯಗಳು ತಮ್ಮ ಮುಂಗಾರು ಮಳೆಯ ಹೆಚ್ಚಿನ ಭಾಗವನ್ನು ಪಡೆಯುವುದು ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ. ಆಗಸ್ಟ್ ಅಂತ್ಯಕ್ಕೆ ಕರ್ನಾಟಕದಲ್ಲಿರುವ ಕಾವೇರಿ ಕೊಳ್ಳದಲ್ಲಿ ಕನಿಷ್ಠ 300 ಟಿಎಂಸಿ ನೀರು ಸಂಗ್ರಹವಾಗದೇ ಹೋದರೆ, ಕರ್ನಾಟಕವು ತಮಿಳುನಾಡಿಗೆ ಹರಿಸಬೇಕಾದ ನೀರಿನಲ್ಲಿ 14 ಟಿಎಂಸಿ ಕಡಿತ ಮಾಡಬೇಕು. ಅಂದರೆ ಆ ವರ್ಷ ಕರ್ನಾಟಕವು ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣ 165 ಟಿಎಂಸಿ ಮಾತ್ರ ಆಗಿರಬೇಕು.
(4) ಈ ಹೊಸ ಲೆಕ್ಕಾಚಾರದಲ್ಲಿ ಆಯಾ ರಾಜ್ಯದ ಒಟ್ಟು ಜಲಾನಯನ ಭೂಭಾಗದ ಅನುಪಾತದಲ್ಲೇ ನೀರಿನ ಹಂಚಿಕೆಯಾಗುವುದರಿಂದ ಯಾರಿಗೂ ಅನ್ಯಾಯವಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಳೆಯ ಲೆಕ್ಕಾಚಾರದಲ್ಲಿ ಕರ್ನಾಟಕ ದೊಡ್ಡ ಪ್ರಮಾಣದ ಅನ್ಯಾಯಕ್ಕೆ ಒಳಗಾಗುತ್ತಿತ್ತು. ಕೊಡುಗೆಯ ದೃಷ್ಟಿಯಲ್ಲಿ ನೋಡಿದರೆ 222 ಟಿಎಂಸಿ, ಜಲಾನಯನ ಪ್ರದೇಶದ ವ್ಯಾಪ್ತಿಯ ದೃಷ್ಟಿಯಿಂದ ನೋಡಿದರೆ 399 ಟಿಎಂಸಿ ಪಡೆಯಬೇಕಿದ್ದ ತಮಿಳುನಾಡು ಅವೆರಡಕ್ಕೂ ಅತೀತವಾದ 419 ಟಿಎಂಸಿ ನೀರನ್ನು ಪಡೆಯುತ್ತಿತ್ತು. ಈ ತಪ್ಪನ್ನು ಹೊಸ ಲೆಕ್ಕಾಚಾರ ತಕ್ಕಮಟ್ಟಿಗೆ ಸರಿಪಡಿಸುತ್ತದೆ.
(5) ಈ ಮೇಲಿನ ಎಲ್ಲಾ ಲೆಕ್ಕಾಚಾರಗಳನ್ನೂ ಕರ್ನಾಟಕ, ತಮಿಳುನಾಡುಗಳಲ್ಲಿರುವ ಜಲಾನಯನ ಪ್ರದೇಶದ ವಿಸ್ತೀರ್ಣದ ಆಧಾರದಲ್ಲಿ ಮಾಡಲಾಗಿದೆ. ಇದು ಅರ್ಧ ಶತಮಾನದ ಕಾಲಕ್ಕೂ ಒಂದೇ ತೆರನಾಗಿರುವುದು ಸಾಧ್ಯವಿಲ್ಲ. ಅಲ್ಲದೆ ಎರಡೂ ರಾಜ್ಯಗಳಲ್ಲಿ ಕಾಲಕಾಲಕ್ಕೆ ಹೊಸ ಪಟ್ಟಣಗಳು, ನಗರಗಳು ಬೆಳೆಯುವುದು ಕೂಡ ಸಹಜ. ಬೇಸಾಯ ಮಾತ್ರವಲ್ಲದೆ ಕೈಗಾರಿಕೆ ಮತ್ತು ಕುಡಿವ ನೀರಿಗೂ ಎರಡೂ ರಾಜ್ಯಗಳು ಕಾವೇರಿಯನ್ನು ಅವಲಂಬಿಸಿವೆ. ಹಾಗಾಗಿ, ಕಾವೇರಿ ನದಿ ನೀರಿನ ಹಂಚಿಕೆಯ ಲೆಕ್ಕಾಚಾರವನ್ನು ಈ ಎಲ್ಲ ವಿಷಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರತಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಿಸಬೇಕು. ಕರ್ನಾಟಕದಲ್ಲಿ ಬೇಸಾಯ ಭೂಮಿ ಹೆಚ್ಚಾದರೆ ಅದಕ್ಕೆ ತಕ್ಕಂತೆ ಕಾವೇರಿ ನೀರಲ್ಲೂ ಪಾಲು ಸಿಗುವಂತಾಗಬೇಕು.
ಸಂಗ್ರಹವಾಗಿ ಹೇಳುವುದಾದರೆ, ಹೊಸ ಲೆಕ್ಕಾಚಾರದ ಪ್ರಕಾರ ವಿವಿಧ ರಾಜ್ಯಗಳು ಪಡೆಯಬಹುದಾದ ನೀರಿನ ಪ್ರಮಾಣ (ಟಿಎಂಸಿಗಳಲ್ಲಿ): ಕರ್ನಾಟಕ – 308; ತಮಿಳುನಾಡು – 392; ಕೇರಳ – 30; ಪಾಂಡಿಚೇರಿ – 7; ಇತರ – 3. ಒಟ್ಟು – 740 ಟಿಎಂಸಿ. ಕರ್ನಾಟಕ ರಾಜ್ಯ ತಮಿಳುನಾಡಿಗೆ ಹರಿಸಬೇಕಾದ (ಇದರಲ್ಲಿ ಪಾಂಡಿಚೇರಿಯ ಪಾಲೂ ಸೇರಿದೆ) ನೀರು – 179 (ಉತ್ತಮ ಮುಂಗಾರು ಇದ್ದಾಗ) ಮತ್ತು 165 (ಮುಂಗಾರು ಕೈಕೊಟ್ಟಾಗ).
ಒಟ್ಟಲ್ಲಿ, ಪರಿಹಾರ ನಮ್ಮ ಮುಂದಿದೆ. ಇದನ್ನು ಅಳವಡಿಸಿಕೊಂಡು ಕರ್ನಾಟಕಕ್ಕೆ ಆಗುತ್ತಿರುವ ತಪ್ಪನ್ನು ಸರಿಪಡಿಸುವ ಮತ್ತು ಕಾವೇರಿ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವ ಇಚ್ಛಾಶಕ್ತಿಯನ್ನು ನಮ್ಮ ರಾಜಕಾರಣಿಗಳು ಮತ್ತು ವಕೀಲರು ತೋರಿಸಬೇಕು ಅಷ್ಟೆ.
Discussion about this post