Read - < 1 minute
ನವದೆಹಲಿ, ಸೆ.7: ಕಾಶ್ಮೀರ ಹಿಂಸಾಚಾರ ಕುರಿತಂತೆ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಸಭೆಯ ಆರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಕಾಶ್ಮೀರದಲ್ಲಿ ಉದ್ಭವಿಸಿರುವ ಹಿಂಸಾಚಾರ ವಿಚಾರವನ್ನು ಪ್ರಸ್ತಾಪಿಸಿದರು. ನಂತರ ಚರ್ಚೆ ಮಾಡಲು ಆರಂಭಿಸಿದ ನಾಯಕರು, ಕಾಶ್ಮೀರದಲ್ಲಿ ಉಂಟಾಗಿರುವ ಹಿಂಸಾಚಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿ ಕಾರಿದರು.
ಹಿಂಸಾಚಾರವನ್ನು ಹತ್ತಿಕ್ಕಬೇಕಾದರೆ ಮೊದಲು ಜನರ ಮೇಲೆ ಅಲ್ಲಿನ ಸರ್ಕಾರ ನಿಯಂತ್ರಣ ಸಾಧಿಸಬೇಕಿದೆ. ರಸ್ತೆಗಿಳಿಯುವ ಜನರು ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಇಂತಹವರಿಂದಲೇ ಕಾಶ್ಮೀರದಲ್ಲಿ ಹಿಂಸಾಚಾರ ಇಂದಿಗೂ ಮುಂದುವರೆಯಲು ಕಾರಣವಾಗುತ್ತಿದೆ ಎಂದು ಸಭೆಯಲ್ಲಿ ದೂರಲಾಯಿತು.
ಕಾಶ್ಮೀರದಲ್ಲಿ ಕರ್ಫ್ಯೂವನ್ನು ತೆರವುಗೊಳಿಸಬೇಕಾದ ಅಗತ್ಯವಿದೆ. ಶಾಲಾ-ಕಾಲೇಜುಗಳು ಆರಂಭವಾಗುವಂತೆ ಮಾಡಬೇಕು. ಜನರು ಎಂದಿನಂತೆ ಭಯಬಿಟ್ಟು ಜೀವನ ನಡೆಸುವಂತೆ ಮಾಡಬೇಕಿದೆ. ನಾಗರಿಕರ ಮೇಲೆ ನಿಯಮವನ್ನು ಹೇರಬಾರದು. ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದವರಿಗೆ ಸರ್ಕಾರ ಪರಿಹಾರ ನೀಡಬೇಕಿದೆ. ಕಾಶ್ಮೀರದಲ್ಲಿ ಬಳಕೆ ಮಾಡುತ್ತಿರುವ ಪೆಲ್ಲೆಟ್ ಗನ್ ಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಸಂಸದರು ಸಭೆಯಲ್ಲಿ ಸಲಹೆ ನೀಡಲಾಗಿದೆ.
ಇದೇ ವೇಳೆ ಸಭೆಯಲ್ಲಿದ್ದ ಕೆಲವು ಪ್ರಮುಖರು ಮಾತನಾಡಿ, ಕಾಶ್ಮೀರದ ಹಿಂಸಾಚಾರದ ಹಿಂದೆ ಪಾಕಿಸ್ಥಾನದ ನೇರ ಕೈವಾಡವಿದ್ದು, ಪ್ರತ್ಯೇಕತಾವಾದಿಗಳ ಹೆಸರಿನಲ್ಲಿ ಪಾಕಿಸ್ತಾನ ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಕಾಶ್ಮೀರದಲ್ಲಿ ಹಿಂಸಾಚಾರ ಆರಂಭವಾಗಿ ಹಲವು ದಿನಗಳು ಕಳೆದರೂ ಪರಿಸ್ಥಿತಿ ನಿಭಾಯಿಸುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದೆ. ಪರಿಸ್ಥಿತಿ ನಿಭಾಯಿಸುವ ಬದಲು ಅಲ್ಲಿ ರಾಜಕೀಯ ನಾಯಕರು ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
Discussion about this post