ಬೆಂಗಳೂರು, ಅ.26: ಮೈನಿಂಗ್ ಕಂಪೆನಿಗೆ ಪರವಾನಗಿ ನೀಡಲು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದ ಪ್ರಕರಣದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಪ್ರಕರಣದಿಂದ ನ್ಯಾಯಾಲಯ ಇಂದು ಖುಲಾಸೆಗೊಳಿಸಿದೆ. ಈ ಮೂಲಕ ಬಿಎಸ್‌ವೈಗೆ ಬಿಗ್ ರಿಲೀಫ್ ದೊರೆತಂತಾಗಿದೆ.
ಈ ಕುರಿತಂತೆ ಇಂದು ತೀರ್ಪು ನೀಡಿರುವ ಸಿಬಿಐ ವಿಶೇಷ ನ್ಯಾಯಾಧೀಶ ಆರ್.ಬಿ. ಧರ್ಮಗೌಡರ್, ಯಡಿಯೂರಪ್ಪ, ಅವರ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಸೇರಿದಂತೆ ಒಟ್ಟು ೧೩ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ.
ಸುಮಾರು 400 ಪುಟಗಳ ತೀರ್ಪಿನ ಪ್ರಮುಖ ಅಂಶಗಳನ್ನು ಓದಿದ ನ್ಯಾಯಾಧೀಶರು, ಯಡಿಯೂರಪ್ಪ ಸೇರಿದಂತೆ 13 ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಕಿಡಿ ಕಾರಿದರು.
ಈ ಕುರಿತಂತೆ ಮಾತನಾಡಿರುವ ಬಿಎಸ್‌ವೈ ಪರ ವಕೀಲ ನಾಗೇಶ್, ಬಿಎಸ್‌ವೈ ವಿರುದ್ಧದ ಆರೋಪ ಸಾಬೀತುಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಕೋರ್ಟ್ ಅವರನ್ನು ದೋಷಮುಕ್ತಗೊಳಿಸಿದೆ ಎಂದಿದ್ದಾರೆ.
ಈ ವಿಚಾರದಲ್ಲಿ ವಾದ ಮಂಡಿಸಿದ್ದ ನಾಗೇಶ್, ಯಡಿಯೂರಪ್ಪ ಅವರ ವಿರುದ್ಧ ದುರುದ್ದೇಶಪೂರಕವಾಗಿ ಆರೋಪ ಹೊರಿಸಲಾಗಿದೆ. ಯಡಿಯೂರಪ್ಪ ಅವರು ಯಾವುದೇ ಸಂದರ್ಭದಲ್ಲೂ ತಮ್ಮ ಅಧಿಕಾರವನ್ನು ಮತ್ತು ಮುಖ್ಯಮಂತ್ರಿಗಳ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡಿಲ್ಲ ಎಂದು ವಾದಿಸಿದ್ದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಂದಾಲ್ ಗ್ರೂಪ್‌ನ ಸೌತ್‌ವೆಸ್ಟ್ ಮೈನಿಂಗ್ ಕಂಪನಿಗೆ ಗಣಿ ಪರವಾನಗಿ ಮಂಜೂರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಿಂದಾಲ್ ಕಂಪನಿಯು ೨೦೦೬ರ ಮಾರ್ಚ್ ನಂತರ ೨೦೧೧ರವರೆಗೆ ಯಡಿಯೂರಪ್ಪ ಪುತ್ರರ ಒಡೆತನದ ಕಂಪನಿಗೆ ಮೂರು ಬಾರಿ ಹಣ ಸಂದಾಯ ಮಾಡಿದೆ. ಆನಂತರ ಆ ಹಣವನ್ನು ಪ್ರೇರಣಾ ಟ್ರಸ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ಈ ಅವಧಿಯಲ್ಲಿ ಯಡಿಯೂರಪ್ಪಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಜಿಂದಾಲ್ ಕಂಪನಿಗೆ ಅನುಕೂಲ ಮಾಡಿಕೊಡಲು ಯಡಿಯೂರಪ್ಪ ಸಿಎಂ ಕಚೇರಿ ಹಾಗೂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ತನ್ಮೂಲಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ವೇಳೆ ಕೈಗೊಂಡ ಪ್ರತಿಜ್ಞಾ ವಿಧಿ ಮತ್ತು ಸಂವಿಧಾನದ ಮೂಲ ಆಶಯವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ದೂರು ದಾಖಲಾಗಿದ್ದು, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದರು.
ಇಂದು ತೀರ್ಪು ಪ್ರಕಟವಾಗುವ ವಿಚಾರ ತಿಳಿದಿತ್ತಾದ್ದರಿಂದ ನ್ಯಾಯಾಲಯದ ಆವರಣದಲ್ಲಿ ವಿಚಾರಣೆಯಲ್ಲಿ ಯಡಿಯೂರಪ್ಪ, ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ ಕುಮಾರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಹಾಗೂ ಜಿಂದಾಲ್ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಇದಲ್ಲದೆ ಬಿಎಸ್‌ವೈ ಆಪ್ತ ಎಂಪಿ ರೇಣುಕಾಚಾರ್ಯ ಸೇರಿದಂತೆ ಅಪಾರ ಪ್ರಮಾಣದ ಬೆಂಬಲಿಗರು ಕಲಾಪದಲ್ಲಿ ಹಾಜರಿದ್ದರು.
ಸತ್ಯಮೇವ ಜಯತೆ: ಬಿಎಸ್‌ವೈ
ಇಂದಿನ ತೀರ್ಪು ಕುರಿತಂತೆ ಮಾತನಾಡಿರುವ ಯಡಿಯೂರಪ್ಪ, ಸತ್ಯಮೇವ ಜಯತೆ, ಅಂತಿಮವಾಗಿ ನಮಗೆ ನ್ಯಾಯ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪಿತೂರಿಯಿಂದಾಗಿ ನನ್ನ ವಿರುದ್ಧ ಆರೋಪ ಮಾಡಲಾಗಿತ್ತು. ಆದರೆ ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇತ್ತು. ಈಗ ನನಗೆ ನ್ಯಾಯ ಸಿಕ್ಕಿದೆ. ನನ್ನ ವಿರುದ್ಧ ವಿನಾಕಾರಣ ಆರೋಪ ಹೊರಿಸಿದ್ದು ಸಾಬೀತಾಗಿದೆ. ನ್ಯಾಯಾಲಯದ ತೀರ್ಪಿನಿಂದ ಬಲಬಂತಾಗಿದ್ದು, ನನ್ನ ಕಷ್ಟಕ್ಕೆ ನ್ಯಾಯ ಸಿಕ್ಕಿದೆ, ನೆಮ್ಮದಿ ಸಿಕ್ಕಿದೆ. ಐದು ವರ್ಷಗಳಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದ್ದು, ಕೋರ್ಟ್ ತೀರ್ಪಿಗೆ ನಾನು ಬೆಲೆ ಕಟ್ಟಲಾಗಲ್ಲ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಬಲ ಸಿಕ್ಕಂತಾಗಿದ್ದು, ಬಿಜೆಪಿ ಲಕ್ಷಾಂತರ ಬೆಂಬಲಿಗರಿಗೆ ಸಮಾಧಾನ ಸಿಕ್ಕಿದೆ. ನನ್ನನ್ನು ಬೆಂಬಲಿಸಿದ ಎಲ್ಲ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
Discussion about this post