ಬೆಂಗಳೂರು, ಸೆ.7: ಸವೋಚ್ಛ ನ್ಯಾಯಾಲಯದ ಆದೇಶದಂತೆ ನಿನ್ನೆ ರಾತ್ರಿಯಿಂದ ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಈ ಭಾಗದ ಕೃಷಿಗೆ ನೀರು ಒದಗಿಸುವುದಾಗಿ ಇಂದು ಸಂಜೆ ಭರವಸೆ ನೀಡಿದ್ದಾರೆ.
ಮಾಧ್ಯಮ ಸಂಪಾದಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿರುವ ಅವರು, ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಲೇ ಬೇಕು. ಇದರ ಹೊರತಾಗಿ ನಮಗೆ ಬೇರೆ ಯಾವುದೇ ದಾರಿಯಿಲ್ಲ ಎಂದಿರುವ ಅವರು, ಸದ್ಯ ಕುಡಿಯುವ ನೀರಿಗೆ ಕೊರೆತೆಯಿಲ್ಲ ಎಂದು ಹೇಳಿದ್ದಾರೆ.
ತಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಸಿದ್ಧರಾಮಯ್ಯ, ಹಿಂದಿನ ಸರ್ಕಾರದ ಅವಧಿಯಲ್ಲೂ ತಮಿಳುನಾಡಿಗೆ ನೀರು ಬಿಡಲಾಗಿತ್ತು. ಅಲ್ಲದೇ ಅಂದು ಸರ್ಕಾರ ನಿರ್ಧಾರ ಕೈಗೊಳ್ಳುವ ಮುನ್ನ ಪ್ರತಿಪಕ್ಷಗಳನ್ನು ಸಂಪರ್ಕಿಸಿರಲಿಲ್ಲ ಎಂದು ದೂರಿದ್ದಾರೆ.
ಕಾವೇರಿ ವಿಚಾರದಲ್ಲಿ ರಾಜ್ಯದ ಪರ ವಾದ ಮಾಡಿರುವ ಫಾಲಿ ನಾರಿಮನ್ ಪರ ವಕಾಲತ್ತು ವಹಿಸಿರುವ ಸಿದ್ಧರಾಮಯ್ಯ, ಸೆಪ್ಟೆಂಬರ್ ೫ರಂದು ಸುಪ್ರೀಂ ಹೊರಡಿಸಿದ್ದ ಆದೇಶ ತಮಿಳುನಾಡು ಪರವಾಗಿತ್ತು. ವಾದ ಮಂಡನೆ ವೇಳೆ ನಾರೀಮನ್ ಅವರು ತಮಿಳುನಾಡಿಗೆ ನೀರು ಬಿಡುವುದೇ ಇಲ್ಲ ಎಂದು ಹೇಳಿರಲಿಲ್ಲ. 10 ಸಾವಿರ ಕ್ಯೂಸೆಕ್ಸ್ ನೀರನ್ನು ೬ ದಿನಗಳ ಬಿಡುಗಡೆ ಮಾಡಲು ಕರ್ನಾಟಕ ಸಿದ್ಧವಿದೆ ಎಂದು ಹೇಳಿದ್ದರು. ಆದರೆ, ಸುಪ್ರೀಂ 10 ದಿನಗಳ ಕಾಲ ೧೫ ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತು ಎಂದಿದ್ದಾರೆ.
ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ರಾಜ್ಯದ ಇನ್ನಿತರೆ ಜಿಲ್ಲೆಗಳಿಗೆ ಕೇವಲ ಕುಡಿಯುವುದಕ್ಕೇ 28 ಟಿಎಂಸಿ ನೀರಿನ ಅಗತ್ಯವಿದೆ. ಇನ್ನು ಕೃಷಿ ಬಳಕೆಗೆ 47 ಟಿಎಂಸಿಯಷ್ಟು ನೀರಿನ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಮಳೆಯಾಗಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದವರು ತಿಳಿಸಿದ್ದಾರೆ.
ಕಾವೇರಿ ವಿವಾದ ಕುರಿತಂತೆ ಕಾವೇರಿ ಮೇಲ್ವಿಚಾರಣಾ ಸಮಿತಿಯನ್ನು ಶೀಘ್ರದಲ್ಲೇ ಸಂಪರ್ಕಿಸಲಾಗುತ್ತದೆ. ನಂತರ ಆದೇಶ ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಬಳಿ ಮತ್ತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
Discussion about this post