Read - 2 minutes
ಬೆಂಗಳೂರು, ಅ.7: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್.ಝಾ ನೇತೃತ್ವದ ಅಧ್ಯಯನ ತಂಡ ಇಂದು ಮಂಡ್ಯ ಜಿಲ್ಲೆಯ ವಿವಿಧ ಕೆರೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿನ ರೈತರ ಬೆಳಗಳ ವಾಸ್ತವ ಸ್ಥಿತಿಯ ಅಧ್ಯಯನ ನಡೆಸಿದೆ. ಶನಿವಾರವೂ ಈ ತಂಡ ಪರಿಶೀಲನೆ ನಡೆಸಿ ಮಾಹಿತಿಯನ್ನು ಕಲೆ ಹಾಕಲಿದೆ.
ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಸಭೆ ನಡೆಸಿ ರಾಜ್ಯ ಸರ್ಕಾರದಿಂದ ಮಾಹಿತಿ ಪಡೆದ ಕೇಂದ್ರದ ಅಧ್ಯಯನ ತಂಡ ಮಧ್ಯಾಹ್ನದಿಂದ ಸಂಜೆವರೆಗೆ ಮಂಡ್ಯ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕೆಲವು ಕಡೆ ಸ್ಥಳ ಪರಿಶೀಲನೆ ಮಾಡಿತು.
ಹೆಲಿಕಾಫ್ಟರ್ ಮೂಲಕ ಬೆಂಗಳೂರಿನಿಂದ ತೆರಳಿದ ಅಧ್ಯಯನ ತಂಡವು ಮದ್ದೂರು ತಲುಪಿತು. ನಂತರ ತಾಲ್ಲೂಕಿನ ತೈಲೂರು, ಸೋಮನಹಳ್ಳಿ, ಹೆಮ್ಮನಹಳ್ಳಿ, ದೊಡ್ಡ ಅರಸಿನಕೆರೆ, ಹನುಮಂತನಗರ, ಕೆ.ಎಂ.ದೊಡ್ಡಿ, ಮಾದರಹಳ್ಳಿ, ಮಳವಳ್ಳಿ, ಶೆಟ್ಟಿಹಳ್ಳಿ, ಕಿರುಗಾವಲು, ಚಾಮನಹಳ್ಳಿ, ಕೌಡ್ಲೆ ಮತ್ತಿತರ ಕೆರೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯ ವಸ್ತುಸ್ಥಿತಿಯನ್ನು ಅಧ್ಯಯನ ಮಾಡಿತು. ವಿವಿಧ ಕೆರೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿತು. ಮದ್ದೂರಿನಿಂದ ಹೆಲಿಕಾಪ್ಟರ್ ಮೂಲಕ ಸಂಜೆ ಕೆಆರ್ ಎಸ್ ಗೆ ತೆರಳಿ ಜಲಾಶಯದ ಪರಿಶೀಲನೆ ನಡೆಸಿ ಅಲ್ಲೇ ವಾಸ್ತವ್ಯ ಹೂಡಲಿದೆ.
ಅಧ್ಯಯನ ಪ್ರವಾಸ ಕೈಗೊಳ್ಳುವ ಮುನ್ನ ವಿಧನಸೌಧದಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ ಕುಂಟಿಯಾ, ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್, ಜಲ ಸಂಪನ್ಮೂಲ ಇಲಾಖೆ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಿಕ್ಕರಾಯಪ್ಪ ಅವರಿಂದ ಮಾಹಿತಿ ಪಡೆಯಲಾಯಿತು.
ಕಾವೇರಿ ಜಲಾನಯನ ಭಾಗದಲ್ಲಿ ಮಳೆ ಅಭಾವದಿಂದ ಬೆಳೆ ಹಾನಿ, ಜಲಾಶಯಗಳಲ್ಲಿ ನೀರಿನ ಕೊರತೆ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ನಗರ, ಪಟ್ಟಣಗಳಿಗೆ ಕುಡಿಯುವ ನೀರಿನ ಅಗತ್ಯತೆ ಬಗ್ಗೆ ಕೇಂದ್ರದ ಅಧ್ಯಯನ ತಂಡಕ್ಕೆ ಮಾಹಿತಿ ಒದಗಿಸಲಾಯಿತು.
ಪವರ್ ಪಾಯಿಂಟ್ ಪ್ರೆಜೆಂಟೇಶನ್ ಮೂಲಕ ಕೇಂದ್ರ ತಂಡಕ್ಕೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಯಿತು. ಕಾವೇರಿ ಜಲಾನಯನ ಭಾಗದ ಕೆಆರ್ಎಸ್, ಹಾರಂಗಿ, ಹೇಮಾವತಿ, ಹಾಗೂ ಕಬಿನಿ ಜಲಾಶಯಗಳ ಪರಿಶೀಲನೆಯನ್ನು ಕೇಂದ್ರ ತಂಡ ನಡೆಸಲಿದೆ.
ನಾಳೆ ಬೆಳಗ್ಗೆ ಕೆಆರ್ ಎಸ್ ರಸ್ತೆ ಮೂಲಕ ಹೊರಡುವ ಅಧ್ಯಯನ ತಂಡವು ಮಾರ್ಕೋನಹಳ್ಳಿ, ಅಶೋಕನಗರ, ಚಿನಕುರಳಿ, ನಿಯಮಗಿರಿ, ಮಂಡಗೆರೆ ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲಿದೆ.
ನಂತರ ಹಾಸನ ಜಿಲ್ಲೆ ವ್ಯಾಪ್ತಿಯ ಗೊರೂರು ತಲುಪಿ ಹೇಮಾವತಿ ಜಲಾಶಯ ವೀಕ್ಷಿಸಲಿದೆ. ಹೇಮಾವತಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ವೀಕ್ಷಣೆ ಮಾಡಲಿದೆ. ಕಾವೇರಿ ಜಲಾನಯನ ಭಾಗದಲ್ಲಿ ಎರಡು ದಿನ ಗಳ ಸಮೀಕ್ಷೆ ಮುಗಿಸಿ ನಾಳೆ ರಾತ್ರಿ ತಮಿಳುನಾಡಿನ ಮೆಟ್ಟೂರಿಗೆ ಪ್ರಯಾಣ ಬೆಳಸಲಿದೆ ಎಂದು ಅಧಿಕೃತ ಮೂಲಕಗಳು ತಿಳಿಸಿದೆ.
ಮಂಡ್ಯ: ಜಿ.ಎಸ್.ಝಾ ನೇತೃತ್ವದ ಕೇಂದ್ರ ಅಧ್ಯಯನ ತಂಡದಲ್ಲಿ ಆಯೋಗದ ಸದಸ್ಯ ಎಸ್.ಮಸೂದ್ ಹುಸೇನ್, ಗೋದಾವರಿ ಮತ್ತು ಕೃಷ್ಣ ಕೊಳ್ಳದ ಮುಖ್ಯ ಇಂಜಿನಿಯರ್ ಆರ್.ಕೆ.ಗುಪ್ತ, ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯ ಕಾರ್ಯದರ್ಶಿಗಳು ಅಥವಾ ಅವರಿಂದ ನಿಯೋಜಿತ ಹಿರಿಯ ಅಧಿಕಾರಿಗಳು, ಕಾವೇರಿ ಕೊಳ್ಳದ ನಾಲ್ಕು ರಾಜ್ಯಗಳ ಜಲ ಸಂಪನ್ಮೂಲ ಇಲಾಖೆಗಳ ಇಂಜಿನಿಯರ್ ಗಳು ಈ ತಂಡದಲ್ಲಿದ್ದಾರೆ.
ಅಳಲುತೋಡಿಕೊಂಡ ರೈತರು:
ಕಳೆದ ಬಾರಿ ಮಳೆಯಿಲ್ಲದೆ ಸಾಲಬಾಧೆಯಿಂದ 120ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಾರಿ ಬೆಳೆಗಳಿಗೆ ನೀರಿಲ್ಲ ರೈತರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಅಂತರ್ಜಲ ಕುಸಿದಿದೆ ಎಂದು ತಾಲ್ಲೂಕಿನ ಹೆಮ್ಮನಹಳ್ಳಿಗೆ ಭೇಟಿ ನೀಡಿದ ಕೇಂದ್ರದ ಝಾ ನೇತೃತ್ವದ ಜಲತಾಂತ್ರಿಕ ಸಮಿತಿಯ ಮುಂದೆ ರೈತರು ಅಳಲು ತೋಡಿಕೊಂಡ ಪರಿ ಇದಾಗಿತ್ತು.
ಕಾವೇರಿಕೊಳ್ಳಗಳ ನೈಜ ಸ್ಥಿತಿ ಅಧ್ಯಯನ ಮಾಡಲು ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಗೆ ಆಗಮಿಸಿದ ತಾಂತ್ರಿಕ ತಂಡದ ಅಧಿಕಾರಿಗಳ ಎದುರು ರೈತರು ತಮ್ಮ ಪರಿಸ್ಥಿತಿಯನ್ನು ವಿವರಿಸಿದರು.
ಗದ್ದೆಗಳು ಒಣಗಿವೆ. ಚಾನಲ್ಗಳಲ್ಲಿ ನೀರು ಬರುತ್ತಿಲ್ಲ. ಒಂದು ಬೆಳೆಯನ್ನೂ ಬೆಳೆಯಲಾಗುತ್ತಿಲ್ಲ. ನೀರಾವರಿ ಪ್ರದೇಶವಾದರೂ ನೀರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. 900 ಅಡಿ ಆಳಕ್ಕೆ ಬೋರ್ ಕೊರೆದರೂ ನೀರು ಬರುತ್ತಿಲ್ಲ. ಕೆರೆ-ಕಟ್ಟೆಗಳಲ್ಲೂ ಕೂಡ ನೀರಿಲ್ಲ. ನಿಗದಿಯಂತೆ ಮಳೆಯಾಗಿಲ್ಲ. ಜಾನುವಾರುಗಳಿಗೂ ಕೂಡ ನೀರು ಇಲ್ಲ ಎಂದು ರೈತರು ಅಧಿಕಾರಿಗಳ ಮುಂದೆ ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಿದರು.
ವಸ್ತುಸ್ಥಿತಿ ಅಧ್ಯಯನ ಮಾಡಿ ಸುಪ್ರೀಂಕೋರ್ಟ್ ಗೆ ಅಂತಿಮ ವರದಿ
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿನ ಕಾವೇರಿ ಜಲಾನಯನ ಭಾಗದ ವಸ್ತುಸ್ಥಿತಿ ಅಧ್ಯಯನ ಮಾಡಿ ಸುಪ್ರೀಂಕೋರ್ಟ್ ಗೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಕೇಂದ್ರ ಅಧ್ಯಯನ ತಂಡದ ನೇತೃತ್ವ ವಹಿಸಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಮತ್ತಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮತ್ತು ನಾಳೆ ಕರ್ನಾಟಕದ ಕಾವೇರಿ ಜಲಾನಯನ ಭಾಗದಲ್ಲಿ ಪ್ರವಾಸ ಕೈಗೊಂಡು ವಸ್ತವ ಸ್ಥಿತಿ-ಗತಿಯನ್ನು ಅಧ್ಯಯನ ಮಾಡುತ್ತೇವೆ. ನಂತರ ತಮಿಳುನಾಡಿಗೂ ತೆರಳಿ ಅಲ್ಲಿನ ವಸ್ತು ಸ್ಥಿತಿಯನ್ನು ಪರಿಶೀಲಿಸಿ ಅಧ್ಯಯನದ ವರದಿಯನ್ನು ಸಿದ್ದಪಡಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗುವುದು ಎಂದರು.
ಉಭಯ ರಾಜ್ಯಗಳ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ, ಬೆಳೆ ಪರಿಸ್ಥಿತಿ ಸೇರಿದಂತೆ ಸಮಗ್ರವಾಗಿ ವಸ್ತುಸ್ಥಿತಿಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
ಕೇಂದ್ರ ತಂಡದ ಜೊತೆ ರಮ್ಯಾ ಪ್ರತ್ಯಕ್ಷ:
ಇದಕ್ಕಿದ್ದ ಹಾಗೆ ಕಾವೇರಿ ಜಲಾನಯನ ಪ್ರದೇಶದ ಅಧ್ಯಯನಕ್ಕೆ ಬಂದಿರುವ ಕೇಂದ್ರ ತಂಡದ ಜೊತೆ ಮಾಜಿ ಸಂಸದೆ ರಮ್ಯಾ ಕಾಣಿಸಿಕೊಂಡು ಅಚ್ಚರಿಮೂಡಿಸಿದರು.
ಮದ್ದೂರು ಪ್ರವಾಸಿ ಮಂದಿರದಲ್ಲಿ ರಮ್ಯಾ ಮಾತನಾಡಿ, ಕೇಂದ್ರ ತಂಡ ಇಲ್ಲಿನ ವಾಸ್ತವ ಸ್ಥಿತಿ ಅಧ್ಯಯನ ಮಾಡುತ್ತಿದೆ,
ಅವರ ಜೊತೆ ನಾನೂ ಹೋಗಿ ಸ್ಥಳೀಯ ಸಮಸ್ಯೆ ಮನವರಿಕೆ ಮಾಡಿಕೊಡುತ್ತಿದ್ದೇನೆ, ಮನವಿ ಮುಖಾಂತರ ಇಲ್ಲಿನ ಸಮಸ್ಯೆ ವಿವರಿಸಿದ್ದೇನೆ. ಯಾವ ಕಾರಣಕ್ಕೂ ನೀರು ಬಿಡೋಕೆ ಆಗಲ್ಲ ಅನ್ನೋದೂ ಮನವರಿಕೆ ಮಾಡಿಬಿಟ್ಟಿದ್ದೇನೆ ಎಂದು ಹೇಳಿದರು.
Discussion about this post