Read - < 1 minute
ಉಡುಪಿ, ಅ.7: ನಗರದ ಪೋಸ್ಟ್ ಆಫೀಸ್ ರಸ್ತೆಯಲ್ಲಿ ವಿದ್ಯುತ್ ತಂತಿ ತಗಲಿ ಮೃತಪಟ್ಟ ಕೋತಿಯೊಂದಕ್ಕೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ವಿಧಿವತ್ತಾಗಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಗುರುವಾರ ಮಧ್ಯಾಹ್ನ 3 ಗಂಟೆಗೆ ಸುಮಾರು 15 ವರ್ಷ ವಯಸ್ಸಿನ ಈ ಗಂಡು ಕೋತಿ ಮರದಿಂದ ಕಟ್ಟಡಕ್ಕೆ ಜಿಗಿಯುವಾಗ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಾಗಿ ವಿದ್ಯುತ್ ಅಘಾತವಾಗಿ ಕೆಳಗೆ ಬಿದ್ದು ಮೃತಪಟ್ಟಿತು.
ವಿಷಯ ತಿಳಿದ ನಾಗರಿಕ ಸಮಿತಿಯ ಪ್ರದಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು, ಕೋತಿ ವನ್ಯ ಜೀವಿಯಾಗಿರುವುದರಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕರಾವಳಿಯಲ್ಲಿ ಕೋತಿಯನ್ನು ಹನುಮಂತ ದೇವರು ಎಂದು ಪೂಜಿಸುವ ಧಾರ್ಮಿಕ ನಂಬಿಕೆಯಂತೆ ಕೋತಿ ಶವದ ಮೇಲೆ ಹೂವಿನ ಮಾಲೆ ಹಾಕಿ, ತಮಟೆ ಭಾರಿಸಿದರು. ದಾರಿಯಲ್ಲಿ ಸಾಗುತ್ತಿದ್ದ ಸಾರ್ವಜನಿಕ ಶವದ ಮೇಲೆ ಹಣವನ್ನೂ ಹಾಕಿದರು.
ನಂತರ ಸ್ಥಳಕ್ಕೆ ಬಂದ ಪ್ರಾದೇಶಿಕ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ ಮತ್ತು ಅರಣ್ಯ ರಕ್ಷಕ ದೇವರಾಜ ಪಾಣ ಅವರಿಗೆ ಜನರಿಂದ ಸಂಗ್ರಹವಾದ ಹಣವನ್ನು ಅರ್ಪಿಸಿ, ನಿತ್ಯಾನಂದ ಒಳಕಾಡು ಅವರ ಉಚಿತ ಅಂಬ್ಯುಲೆನ್ಸ್ ನಲ್ಲಿ ಕೋತಿಯ ಶವವನ್ನು ಆದಿಉಡುಪಿಯ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಆವರಣಕ್ಕೆ ಸಾಗಿಸಿ, ಶವಸಂಸ್ಕಾರ ನಡೆಸಲಾಯಿತು.
Discussion about this post