Read - < 1 minute
ಬೆಂಗಳೂರು, ಅ.18: ಕೋಮುಭಾವನೆ ಕೆರಳಿಸಿ ಜಾತಿ, ಧರ್ಮಗಳ ನಡುವೆ ಒಡಕು ಉಂಟು ಮಾಡುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರೆಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಗೋವಿಂದ್ ಕಾರಜೋಳ ಕಿಡಿಕಾರಿದ್ದಾರೆ.
ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ನಗರ ಜಿಲ್ಲೆ ಎಸ್ಸಿ-ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಕಲಿ ಜಾತ್ಯಾತೀತ ಪಕ್ಷ. ಕೇವಲ ವೋಟ್ ಬ್ಯಾಂಕ್ ಗಾಗಿ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಮೂಗಿಗೆ ತುಪ್ಪ ಸವರುತ್ತ ಬಂದಿದೆ ಎಂದು ಟೀಕಿಸಿದರು.
ಮಾಜಿ ಸಚಿವ, ದಲಿತ ಮುಖಂಡ ವಿ. ಶ್ರೀನಿವಾಸ್ ಪ್ರಸಾದ್ ಪಕ್ಷ ತೊರೆದಿರುವುದು ಕಾಂಗ್ರೆಸ್ ನ ನಿಜವಾದ ಬಣ್ಣ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಯಾರಾದರೂ ಉದ್ದಾರವಾಗಿದ್ದರೆ ಅದು ಕಾಂಗ್ರೆಸ್ನವರು ಮಾತ್ರ. ದೀನದಲಿತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಇವರು ಈ ಸಮುದಾಯದ ಅಭಿವೃದ್ದಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ತಾನೊಂದೇ ಜಾತ್ಯಾತೀತ ಪಕ್ಷ. ಉಳಿದೆಲ್ಲವೂ ಕೋಮುವಾದಿಗಳು ಎನ್ನುವುದು ಅದರ ಸಿದ್ಧಾಂತ. ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಎಲ್ಲೆಲ್ಲಿ ಕೋಮುಗಲಭೆ ನಡೆದಿದೆಯೋ ಅದಕ್ಕೆಲ್ಲ ಕಾಂಗ್ರೆಸೇ ಕಾರಣ ಎಂದು ಅವರು ದೂರಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 50 ವರ್ಷ ಕಳೆದಿದೆ. ಇದರಲ್ಲಿ ನೆಹರು ಕುಟುಂಬವೇ 35 ವರ್ಷ ಆಡಳಿತ ನಡೆಸಿದೆ. ಆದರೂ ಪರಿಶಿಷ್ಟ ಜಾತಿ/ವರ್ಗ, ಅಲ್ಪಸಂಖ್ಯಾತರು ಈಗಲೂ ಏಕೆ ಬಡತನದಲ್ಲೇ ಇದ್ದಾರೆ ಎಂದು ಪ್ರಶ್ನಿಸಿದರು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಒಂದು ಕೋಳಿ ಅಥವಾ ಕುರಿ ಕೊಟ್ಟರೆ ಬಡವರ ತಾಯಿ ಎನ್ನುವ ಕಾಲವೊಂದಿತ್ತು. ಇಂದಿರಾ ತಾಯಿ ಬಡವರ ತಾಯಿ ಅಲ್ಲ ವೋಟಿನ ತಾಯಿ ಎಂದು ಅರಿವಾಗುತ್ತಿದ್ದಂತೆ ಕಾಂಗ್ರೆಸ್ ನ ಅಸಲಿ ಮುಖ ಗೊತ್ತಾಗುತ್ತಿರುವುದರಿಂದ ಪಕ್ಷ ತೊರೆಯುತ್ತಿದ್ದಾರೆ ಎಂದು ಹರಿಹಾಯ್ದರು.
ವಿಧಾನಸಭಾ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ ಮಾತನಾಡಿ, ಒಂದು ಕಾಲದಲ್ಲಿ ನಾವು ಬಿಜೆಪಿಗೆ ಹೋದರೆ ಏಕೆ ಹೋದೀರಿ ಎಂದು ಅನೇಕರು ಪ್ರಶ್ನಿಸುತ್ತಿದ್ದರು. ಇಂದು ನಮ್ಮ ಪಕ್ಷ ಸೇರಲು ನೂಕು ನುಗ್ಗಲು ಉಂಟಾಗಿದೆ ಎಂದು ಇದಕ್ಕೆಲ್ಲ ಪ್ರಧಾನಿ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಆಗಿರುವ ಬದಲಾವಣೆ ಎಂದು ಬಣ್ಣಿಸಿದರು.
ಕಾಂಗ್ರೆಸ್ ನಿರ್ನಾಮವೇ ಗುರಿ: ಸಂವಿಧಾನಶೆಟ್ಟಿ ಬಿ.ಆರ್. ಅಂಬೇಡ್ಕರ್ ಅವರನ್ನು ಸಂಸತ್ತಿಗೆ ಪ್ರವೇಸಿದಂತೆ ತಡೆಯೊಡ್ಡಿದ್ದೇ ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಮಾತ್ರ ದಲಿತರನ್ನು ನೆನಪಿಸುವ ಕಾಂಗ್ರೆಸ್ಸಿಗರಿಗೆ ಈ ಮಹಾನ್ ನಾಯಕರ ಹೆಸರು ಹೇಳುವ ಯೋಗ್ಯತೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದೇ ನಮ್ಮ ಗುರಿ ಎಂದು ಡಿ.ಎಸ್. ವೀರಯ್ಯ ಶಪಥ ಮಾಡಿದರು.
ಬೆಂಗಳೂರು ನಗರ ಬಿಜೆಪಿ ಘಟಕ ಅಧ್ಯಕ್ಷ ಹಾಗೂ ಶಾಸಕ ಮುನಿರಾಜು ಮಾತನಾಡಿ, ಬಿಜೆಪಿ ಎಂದರೆ ಕೇವಲ ಬ್ರಾಹ್ಮಣರ ಪಕ್ಷ ಎಂದು ಹೇಳುವುದು ಸರಿಯಲ್ಲ. ಜಾತಿ, ಧರ್ಮ ಆಧಾರಿತ ರಾಜಕಾರಣ ಮಾಡುವುದಿಲ್ಲ. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಅತ್ಯಂತ ಹಿಂದುಳಿದ ಗಾಣಿಗ ಸಮುದಾಯಕ್ಕೆ ಸೇರಿದ ನರೇಂದ್ರ ಮೋದಿಯವರು ಪ್ರಧಾನಿಯಾಗಿರುವುದು ಇದಕ್ಕೆ ಸಾಕ್ಷಿ ಎಂದು ತಿಳಿಸಿದರು.
Discussion about this post