Read - < 1 minute
ನವದೆಹಲಿ, ಸೆ.27: ಭಾರತ ಹಾಗೂ ಪಾಕಿಸ್ಥಾನದ ಗಡಿಯಲ್ಲಿ ಪಾಕ್ ಸೈನಿಕರ ಹಾಗೂ ಪಾಕ್ ಪ್ರೇರಿತ ಉಗ್ರರ ಉಪಟಳವನ್ನು ನಿಯಂತ್ರಿಸಲು ಹೊಸ ತಂತ್ರಕ್ಕೆ ಮೊರೆ ಹೋಗಿರುವ ಭಾರತ ಸರ್ಕಾರ, ಪಾಕ್‌ನೊಂದಿಗೆ ಹಂಚಿಕೊಂಡಿರುವ ಸುಮಾರು ೩,೩೨೩ ಕಿಮೀ ಉದ್ದದ ಗಡಿಗೆ ಸ್ಮಾರ್ಟ್ ಬೇಲಿಯನ್ನು ನಿರ್ಮಿಸಲು ಮುಂದಾಗಿದೆ.
ಈ ಕುರಿತಂತೆ ಸಮಿತಿಯೊಂದು ಭಾರತ ಸರ್ಕಾರಕ್ಕೆ ಸಲಹೆ ನೀಡಿದ್ದು, ಇದಕ್ಕೆ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
೩,೩೨೩ ಕಿಮೀ ಗಡಿ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಸಮರ್ಥವಾಗಿ ನಿಗ್ರಹಿಸಬೇಕಾದರೆ ತಂತ್ರಜ್ಞಾನದ ಬಳಕೆ ಅತ್ಯಗತ್ಯವಾಗಿದ್ದು, ಸ್ಮಾರ್ಟ್ ಬೇಲಿಯನ್ನು ನಿರ್ಮಿಸಬೇಕೆಂಬ ಸಲಹೆಯನ್ನು ಸಮಿತಿ ನೀಡಿದೆ. ಇದಕ್ಕೂ ಸಹ ಭಾರತ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.
ಜಮ್ಮು-ಕಾಶ್ಮೀರ, ರಾಜಸ್ತಾನ, ಗುಜರಾತ್, ಪಂಜಾಬ್ ರಾಜ್ಯಗಳು ಪಾಕಿಸ್ಥಾನದೊಂದಿಗೆ ಗಡಿ ಪ್ರದೇಶಗಳನ್ನು ಹೊಂದಿದ್ದು, ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ಈ ಪ್ರದೇಶಗಳಲ್ಲಿ ಸ್ಮಾರ್ಟ್ ಬೇಲಿ ನಿರ್ಮಾಣವಾಗಲಿದೆ. ಗಡಿ ಪ್ರದೇಶಗಳಲ್ಲಿ ಗ್ರಿಡ್ ಆಧಾರಿತ ವ್ಯವಸ್ಥೆ ಜಾರಿಗೆ ತರುವಂತೆಯೂ ಈ ಸಮಿತಿ ಶಿಫಾರಸ್ಸು ಮಾಡಿದ್ದು, ಶಿಫಾರಸ್ಸು ಜಾರಿಯಾದಲ್ಲಿ ಬಿಎಸ್‌ಎಫ್ ಯೋಧರಿಗೆ ನಾಲ್ಕು ರಾಜ್ಯಗಳ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಹೈ ಟೆಕ್ ಉಪಕರಣಗಳು ದೊರೆಯಲಿವೆ.
ಪಠಾಣ್‌ಕೋಟ್ ವಾಯು ನೆಲೆ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಅವರ ನೇತೃತ್ವದ ಸಮಿತಿ ರಚಿಸಿ, ಗಡಿಪ್ರದೇಶದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಕೈಗೊಳ್ಳಬೇಕಿರುವ ಕ್ರಮಗಳಿಗೆ ಸಲಹೆ ನೀಡಲು ಸೂಚಿಸಿತ್ತು. ಈಗ ಮಧುಕರ್ ಗುಪ್ತಾ ನೇತೃತ್ವದ ಸಮಿತಿ ಕೇಂದ್ರ ಸರ್ಕಾರಕ್ಕೆ ಒಂದಷ್ಟು ಶಿಫಾರಸುಗಳನ್ನು ನೀಡಿದ್ದು, ಇವುಗಳಿಗೆ ಸರ್ಕಾರ ತಾತ್ವಿಕ ಅನುಮೋದನೆಯನ್ನೂ ನೀಡಿದೆ.
ಈಗ್ಗೆ ಕೆಲವು ತಿಂಗಳ ಹಿಂದೆ ಗಡಿಯಲ್ಲಿ ಉಗ್ರರ ಹಾಗೂ ಪಾಕ್ ಸೈನಿಕರ ಉಪಟಳವನ್ನು ನಿಗ್ರಹಿಸಲು ಲೇಸರ್ ಬೇಲಿಗಳನ್ನು ನಿರ್ಮಾಣ ಮಾಡುವ ಪ್ರಸ್ತಾವನೆಗೆ ಭಾರತ ಸರ್ಕಾರ ಒಪ್ಪಿಗೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಸ್ಮಾರ್ಟ್ ಬೇಲಿ ಕಾರ್ಯ ಹೇಗೆ?
ಗಡಿ ಪ್ರದೇಶಗಳಲ್ಲಿ ಗ್ರಿಡ್ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಗಡಿಯೊಳಗೆ ನುಸುಳುವಿಕೆ ಕಂಡುಬಂದಲ್ಲಿ ತಕ್ಷಣವೇ, ಗ್ರಿಡ್ ಎಚ್ಚರಿಕೆ ನೀಡಲಿದ್ದು ಉಳಿದ ಗ್ರಿಡ್‌ಗಳಿಗೂ ಮಾಹಿತಿ ರವಾನೆ ಮಾಡಲಿದೆ. ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಗಡಿ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಸಿಬ್ಬಂದಿಗಳನ್ನು ನಿಯೋಜಿಸುವುದು ಸಹ ಸಮಿತಿಯ ಶಿಫಾರಸ್ಸುಗಳಲ್ಲಿ ಒಂದಾಗಿದೆ.
Discussion about this post