Read - < 1 minute
ನವದೆಹಲಿ, ಅ.5: ಭಾರತ ಹಾಗೂ ಪಾಕಿಸ್ಥಾನದ ನಡುವಿನ ವಿವಾದ ತಾರಕಕ್ಕೇರಿರುವಂತೆಯೇ ಭಾರತದ ಮೇಲೆ ದಾಳಿ ನಡೆಸಲು ಸುಮಾರು ೧೦೦ಕ್ಕೂ ಹೆಚ್ಚು ಉಗ್ರರು ಗಡಿ ನಿಯಂತ್ರಣ ರೇಖೆ ಬಳಿ ಸಿದ್ಧರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಈ ಕುರಿತಂತೆ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ಉರಿ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸೀಮಿತ ದಾಳಿ ಬಳಿಕ ಗಡಿಯಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾಗಿದ್ದು, ಯಾವುದೇ ಸಂದರ್ಭದಲ್ಲಿ ಉಗ್ರರು ಭಾರತ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಂತೆ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಜಿತ್ ಧೋವಲ್ ಸಂಪೂರ್ಣ ವಿವರಗಳನ್ನು ನೀಡಿದ್ದು, ಅಂತೆಯೇ ಉಗ್ರ ದಾಳಿ ಎದುರಿಸುವ ನಿಟ್ಟಿನಲ್ಲಿ ಭಾರತ ಕೈಗೊಳ್ಳಬೇಕಾದ ಕಾರ್ಯಗಳ ಕುರಿತೂ ಕೂಡ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಗಡಿ ನಿಯಂತ್ರಣ ರೇಖೆ ಬಳಿ ಅಪಾಯಕಾರಿಯಾಗಿ ಕಾಣುತ್ತಿರುವ ೧೨ಕ್ಕೂ ಹೆಚ್ಚು ಉಗ್ರ ನೆಲೆಗಳ ಕುರಿತು ಅಜಿತ್ ಧೋವಲ್ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಸೀಮಿತ ದಾಳಿ ಸಾಧ್ಯತೆ
ಎಲ್ಒಸಿ ಗಡಿಯಲ್ಲಿ ಸೀಮಿತ ದಾಳಿ ನಡೆಸಿರುವ ಭಾರತೀಯ ಸೇನೆಯಿಂದ ಚಳಿಗಾಲದ ಒಳಗಾಗಿ ಮತ್ತಷ್ಟು ಸೀಮಿತ ದಾಳಿಗಳು ನಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಇನ್ನಷ್ಟು ಸೀಮಿತ ದಾಳಿ ನಡೆಸಲು ಯೋಜನೆ ರೂಪಿಸಲಾಗುತ್ತಿದ್ದು, ಎಲ್ಲ ದಾಳಿಗಳನ್ನೂ ಚಳಿಗಾಲದ ಒಳಗಾಗಿ ಮುಕ್ತಾಯಗೊಳಿಸಲು ಸೂಚಿಸಲಗಿದೆ ಎನ್ನಲಾಗಿದೆ. ಚಳಿಗಾಲದ ಸಂದರ್ಭದಲ್ಲಿ ಗಡಿಯಲ್ಲಿ ದಟ್ಟ ಮಂಜು ಆವರಿಸುವುದರಿಂದ ಕಾರ್ಯಾಚರಣೆಗೆ ತೀವ್ರ ತೊಡಕಾಗಲಿದೆ. ಈ ವೇಳೆ ಉಗ್ರರು ಮಂಜಿನ ಬದಿಯಲ್ಲಿ ಸುಲಭವಾದಿ ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ ಚಳಿಗಾಲದೊಳಗೆ ಕಾರ್ಯಾಚರಣೆ ನಡೆಸುವಂತೆ ಗುಪ್ತಚರ ಇಲಾಖೆ ಸಲಹೆ ನೀಡಿದೆ.
Discussion about this post