ನವದೆಹಲಿ, ಸೆ.29: ಉರಿ ಸೆಕ್ಟರ್ ಮೇಲೆ ಪಾಕ್ ಸೇನಾ ಪ್ರೇರಿತ ಉಗ್ರರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ವ್ಯಗ್ರಗೊಂಡಿರುವ ಭಾರತ ಸರ್ಕಾರ ಎಲ್‌ಒಸಿ ಭಾಗದಲ್ಲಿರುವ ಉಗ್ರ ನೆಲೆಗಳ ಮೇಲೆ ಸೀಮಿತ ದಾಳಿ ನಡೆಸಲು ನಿರ್ಧರಿಸಿದೆ.
ಈ ಕುರಿತಂತೆ ಸೇನಾ ಮುಖ್ಯಸ್ಥ ರಣಭೀರ್ ಸಿಂಗ್ ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ರಣಭೀರ್ ಸಿಂಗ್ ದಾಳಿ ವಿಚಾರವನ್ನು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಪಾಕ್ ಸೇನೆ ಹಾಗೂ ಉಗ್ರರು ನಡೆಸುತ್ತಿರುವ ದಾಳಿಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಗಡಿಯಲ್ಲಿ ಉಗ್ರರ ಒಳ ನುಸುಳುವಿಕೆಯನ್ನು ತಡೆಯಲು ಗಂಭೀರ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದ್ದೇವೆ. ಭಾರತದ ಗಡಿ ಭಾಗಗಳಲ್ಲಿ ಉಗ್ರರು ನೆಲೆಗಳನ್ನು ಸ್ಥಾಪಿಸಿರುವುದು ದೃಢಪಟ್ಟಿದೆ. ಈ ಉಗ್ರರೆಲ್ಲಾ ಪಾಕ್‌ನಿಂದ ತರಬೇತಿ ಹೊಂದಿರುವವರು ಎಂಬ ಖಚಿತ ಮಾಹಿತಿ ದೊರೆತಿದೆ. ಉಗ್ರರಿಂದ ಜಿಪಿಎಸ್ ಪಾಕಿಸ್ತಾನ ಗುರುತು ಇರುವ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಗಡಿ ಭಾಗದಲ್ಲಿ ಶಾಂತಿಯನ್ನು ಕಾಪಾಡುವುದು ಭಾರತ ಉದ್ದೇಶ. ಆದರೆ, ಇದಕ್ಕೆ ಅಡ್ಡಿಯಾಗಿ, ಅಶಾಂತಿ ಸೃಷ್ಠಿಸುತ್ತಿರುವ ಉಗ್ರರನ್ನು ಸದೆ ಬಡಿಯಲು ಎಲ್‌ಒಸಿ ಉದ್ದಕ್ಕೂ ಕಾರ್ಯಾಚರಣೆ ನಡೆಸುವುದು ಆನಿವಾರ್ಯ. ಈ ಹಿನ್ನೆಲೆಯಲ್ಲಿ ಎಲ್‌ಒಸಿ ಭಾಗದಲ್ಲಿರುವ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿಯನ್ನು ನಡೆಸಲು ಭಾರತ ನಿರ್ಧರಿಸಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉಗ್ರರಿಂದ ಗಡಿ ಭಾಗದಲ್ಲಿ ಆಗಿರುವ ಹಾನಿಯನ್ನು ನಾವು ಎಂದಿಗೂ ಸಹಿಸುವುದಿಲ್ಲ. ಉಗ್ರರನ್ನು ಸದೆ ಬಡಿಯಲು ಪಾಕ್ ಸೇನೆ ನಮಗೆ ಸಹಕಾರ ನೀಡುತ್ತದೆ ಎಂದು ನಾವು ನಂಬಿದ್ದೇವೆ. ಈ ವಿಚಾರದಲ್ಲಿ ಪಾಕಿಸ್ಥಾನ ಸೇನಾ ಮುಖ್ಯಸ್ಥರೊಂದಿಗೆ ನಾವು ಈಗಾಗಲೇ ಮಾತುಕತೆಯನ್ನು ನಡೆಸಿದ್ದೇವೆ ಎಂದಿದ್ದಾರೆ.
ಒಟ್ಟು ಎಂಟು ಸೀಮಿತ ದಾಳಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ವಿಚಾರದಲ್ಲಿ ದಾಳಿ ನಡೆಸಲು ಖಚಿತ ಮಾಹಿತಿ ಆಧಾರದ ಯೋಜನೆ ರೂಪುಗೊಂಡಿದೆ. ಇಂತಹ ದಾಳಿಯನ್ನು ಮುಂದಿನ ದಿನಗಳಲ್ಲಿ ಮತ್ತೆ ಕೈಗೊಳುವ ಇರಾದೆ ನಮ್ಮ ಮುಂದಿಲ್ಲ . ಆದರೆ ಪಾಕ್‌ನ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿ ಸೀಮಿತ ಕಾರ್ಯಚರಣೆ ನಡೆಸಲು ನಾವು ಸಿದ್ಧವಾಗಿದ್ದೇವೆ ಎನ್ನುವ ಎಚ್ಚರಿಕೆ ನೀಡಿದ್ದೇವೆ. ನಾವು ನಡೆಸಿದ ದಾಳಿಯಲ್ಲಿ ಉಗ್ರರು, ಉಗ್ರರ ಬೆಂಬಲಿಗರ ಪ್ರಾಣ ಹಾನಿಯಾಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ ಎಂದು ತಿಳಿಸಿದರು.
ಉರಿ ದಾಳಿಯ ಬಳಿಕ ಪಾಕ್‌ನಿಂದ ೨೦ಕ್ಕೂ ಹೆಚ್ಚು ಬಾರಿ ಉಗ್ರರು ಗಡಿ ನುಸುಳಲು ಯತ್ನಿಸಿದ್ದು ನಮ್ಮ ಸೇನೆ ಅದನ್ನು ವಿಫಲಗೊಳಿಸಿದೆ. ಭಾರತದ ಗಡಿ ನುಸುಳಿ ದೇಶದ ಮಹಾನಗರಗಳ ಮೇಲೆ ದಾಳಿ ನಡೆಸಲು ಉಗ್ರರು ಮುಂದಾಗುತ್ತಿದ್ದಾರೆ ಎನ್ನುವ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸೇನೆಯ ವಿಶೇಷ ತಂಡ ಈ ದಾಳಿ ನಡೆಸಿದೆ. ನಿನ್ನೆ ರಾತ್ರಿ ನಡೆಸಿದ ಈ ದಾಳಿಯಲ್ಲಿ ಪಿಓಕೆಯಲ್ಲಿದ್ದ ಹಲವು ಉಗ್ರಗಾಮಿ ಶಿಬಿರಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಸೈನಿಕರು ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ ಎಂದು ರಣ್‌ಬೀರ್ ತಿಳಿಸಿದರು.
ಅಲ್ಲದೇ, ನಾವು ಹತ್ಯೆ ಮಾಡಿರುವ ಉಗ್ರರ ಡಿಎನ್‌ಎ ಸ್ಯಾಂಪಲ್ ಇದೆ. ಈಗಾಗಲೇ ಬಂಧಿಸಿರುವ ಉಗ್ರರು ವಿಚಾರಣೆ ವೇಳೆ ಪಾಕಿಸ್ಥಾನ ನಿಯಂತ್ರಣದಲ್ಲಿರುವ ಜಾಗದಲ್ಲಿ ತರಬೇತಿ ಪಡೆದಿದ್ದಾರೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದು ರಣಭೀರ್ ತಿಳಿಸಿದರು.
Discussion about this post