Read - < 1 minute
ಪಣಜಿ: ಸೆ:1; ಗೋವಾ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಸ್ಥಾನದಿಂದ ಸುಭಾಷ್ ವೆಲಿಂಗ್ಕರ್ ಅವರನ್ನು ವಜಾಗೊಳಿಸಿರುವ ಕ್ರಮವನ್ನು ಖಂಡಿಸಿ ಸಂಘಟನೆಯ 400ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆಗೆ ಮುಂದಾಗಿದ್ದಾರೆ. ಅಲ್ಲದೇ ಅವರನ್ನು ಮತ್ತೆ ನೇಮಿಸಿಕೊಳ್ಳದ್ದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರಾಜ್ಯದ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮದ ವಿಷಯದಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿ ಸರ್ಕಾರಕ್ಕೆ ವೆಲಿಂಗ್ಕರ್ ಮತ್ತು ಅವರ ಬೆಂಬಲಿಗರು ಬಿಸಿ ಮುಟ್ಟಿಸಿದ್ದರು. ಇದೇ ವಿಚಾರವಾಗಿ ಇತ್ತೀಚೆಗೆ ಗೋವಾಗೆ ಭೇಟಿ ನೀಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೂ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಅವರನ್ನು ಗೋವಾ ಆರ್ ಎಸ್ಎಸ್ ಮುಖ್ಯಸ್ಥ ಸ್ಥಾನದಿಂದ ತೆಗೆದು ಹಾಕಲಾಗಿತ್ತು.
ವೆಲಿಂಗ್ಕರ್ ಅವರಿಗೆ ಮತ್ತೆ ಮುಖ್ಯಸ್ಥ ಸ್ಥಾನ ನೀಡಬೇಕು. ಇಲ್ಲದಿದ್ದರೆ ಜಿಲ್ಲಾ, ಉಪ ಜಿಲ್ಲಾ ಮತ್ತು ಶಾಖಾ ಮುಖ್ಯಸ್ಥರೂ ಸೇರಿದಂತೆ ಅವರ ಬೆಂಬಲಿಗರೆಲ್ಲರೂ ಸಾಮೂಹಿಕ ರಾಜೀನಾಮೆ ನೀಡಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಗುವುದಾಗಿ ಆರ್ಎಸ್ಎಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
Discussion about this post