ಬೆಂಗಳೂರು, ಆ.31: ಪ್ರಭುತ್ವ ದಾರಿತಪ್ಪಿದಾಗ ಸರಿಪಡಿಸುವ ಜವಾಬ್ದಾರಿ ಸಂತರದ್ದಾಗಿದೆ. ಸಂತರೆಲ್ಲರೂ ಒಟ್ಟಾಗುತ್ತಿರುವುದು, ಗೋವಿಗಾಗಿ ಸಂತರೆಲ್ಲರೂ ಧ್ವನಿಗೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವ್ಯಾಪಾರದ ಆಧಾರ ಮೇಲೆ ಗೋಹತ್ಯೆ ನಡೆಯುತ್ತಿದೆ, ನಾವು ವ್ಯಾಪಾರದ ಆಧಾರದ ಮೇಲೆ, ಗೋವಿಗೆ ಮೌಲ್ಯ ತಂದುಕೊಡುವುದರ ಮೂಲಕ ಗೋವನ್ನು ಸಂರಕ್ಷಿಸಬೇಕಿದೆ. ಸಂಸತ್ತು, ಸಂಪತ್ತು ಹಾಗೂ ಸಂಘರ್ಷದ ಮೂಲಕ ಗೋವನ್ನು ರಕ್ಷಿಸಬಹುದಾಗಿದ್ದರೂ ಅದು ಕಷ್ಟದಾರಿ ಆಗಿದೆ, ಹಾಗಾಗಿ ಗವ್ಯೋತ್ಪನ್ನ ಬಳಸಿ , ಗೋವಿಗೆ ಮೌಲ್ಯ ತಂದುಕೊಡುವುದರ ಮೂಲಕ ಗೋವನ್ನು ಸಂರಕ್ಷಿಸೋಣ ಎಂದು ಕರೆನೀಡಿದರು.
ಗೋಮಯ – ಗೋಮೂತ್ರಗಳನ್ನು ಬಳಸಿ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸಿ ಗವ್ಯೋತ್ಪನ್ನಗಳಿಗೆ ಮೌಲ್ಯ ತಂದುಕೊಡುವ ಕೆಲಸ ದೇಶದ ಹಲವೆಡೆ ಆಗುತ್ತಿದೆ, ಶ್ರೀಮಠದ ಪ್ರೇರಣೆಯಿಂದ ಕಾರ್ಯಾಚರಿಸುತ್ತಿರುವ ಮಾ ಗೋ ಪ್ರಾಡೆಕ್ಟ್ಸ್ ಕೂಡ ಈ ದಿಶೆಯಲ್ಲಿ ವಿಶ್ವದರ್ಜೆಯ ಗವ್ಯೋತ್ಪನ್ನಗಳನ್ನು ತಯಾರಿಸುತ್ತಿದೆ, ಗವ್ಯೋತ್ಪನ್ನಗಳನ್ನು ಬಳಸಿದರೂ ಅದು ಗೋಸಂರಕ್ಷಣೆಗೆ ಸಹಕಾರ ನೀಡಿದಂತಾಗುತ್ತದೆ ಎಂದರು.
ಗಂಗಾವತಿಯ ಶ್ರೀಕೊಟ್ಟೂರೇಶ್ವರ ಸ್ವಾಮಿಗಳು ಸಂತಸಂದೇಶ ನೀಡಿ, ಗೋಸಂಕುಲದ ನಾಶ ನಮ್ಮ ಧರ್ಮ ಸಂಸ್ಕೃತಿಯ ವಿನಾಶಕ್ಕೆ ಮೂಲವಾಗಿದೆ, ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಗೋಯಾತ್ರೆಗೆ ನಮ್ಮ ಸಹಕಾರವಿದೆ ಎಂದು ಹೇಳಿದರು.
ಬೀದರಿನ ಶ್ರೀಜಯಶಾಂತಲಿಂಗ ಸ್ವಾಮಿಗಳು ಸಂತಸಂದೇಶ ನೀಡಿ,ಗೋವು ನಮ್ಮೆಲ್ಲರ ತಾಯಿ, ಇಂದು ಗೋವು ಸಂಕಷ್ಟದಲ್ಲಿದೆ, ಆದರೆ ರಾಘವೇಶ್ವರ ಶ್ರೀಗಳು ಗೋವಿಗಳಿಗೇ ತಾಯಿಯಾಗಿ ಅವುಗಳನ್ನು ಸಲಹುತ್ತಿದ್ದಾರೆ, ಸಂತರೆಲ್ಲರೂ ಒಟ್ಟಾಗಿ ಶ್ರೀಗಳ ಗೋಜಾಗೃತಿಗೆ ಸಹಕಾರ ನೀಡೋಣ ಎಂದರು.
ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣೇಶ ಭಟ್ಟ, ಮಣ್ಚಿಕಾನ ಹಾಗೂ ನಾರಾಯಣ ಭಟ್ಟ, ಪುದ್ಯೋಡು ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಅವರುಗಳು ಗೋವುಗಳೋಂದಿಗೆ ತಮ್ಮ ಒಡನಾಟವನ್ನು ಹಂಚಿಕೊಂಡರು. ಶ್ರೀಭಾರತೀಪ್ರಕಾಶನವು ಹೊರತಂದ ಗೋಸಂಪ್ರದಾಯ ಗೀತೆ ದೃಶ್ಯಮುದ್ರಿಕೆ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯವಹಿಸಿದ್ದ ಸಂತರು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ಭರತನಾಟ್ಯ ಕಾರ್ಯಕ್ರಮ ನಡೆಯಿತು. ರಾಘವೇಂದ್ರ ಮಧ್ಯಸ್ಥ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
ವ್ಯಾಪಾರದ ಆಧಾರಮೇಲೆ ಗೋಹತ್ಯೆ ನಡೆಯುತ್ತಿದೆ, ನಾವು ವ್ಯಾಪಾರದ ಆಧಾರದ ಮೇಲೆ , ಗೋವಿಗೆ ಮೌಲ್ಯ ತಂದುಕೊಡುವುದರ ಮೂಲಕ ಗೋವನ್ನು ಸಂರಕ್ಷಿಸಬೇಕಿದೆ. – ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳು
Discussion about this post